ಕುಟುಂಬವೇ ದೇಶದ ಪ್ರತಿಬಿಂಬ: ಶ್ರೀದೇವಿ ಹೆಗಡೆ

KannadaprabhaNewsNetwork |  
Published : Dec 30, 2024, 01:04 AM IST
ಫೋಟೋ : ೨೯ಕೆಎಂಟಿ_ಡಿಇಸಿ_ಕೆಪಿ೧ : ಮಹಾಸತಿ ಸಭಾಭವನದಲ್ಲಿ ಭಾನುವಾರ ಮಹಿಳಾ ವಿಚಾರ ಗೊಷ್ಠಿಯನ್ನು ಸೂರಜ ನಾಯ್ಕ ಉದ್ಘಾಟಿಸಿದರು. ಶ್ರೀದೇವಿ ಹೆಗಡೆ, ಮಹೇಶ ಎಂ.ಡಿ., ಕಲ್ಮೇಶ, ಮಮತಾ ನಾಯ್ಕ, ರೂಪಾ ಇತರರು ಇದ್ದರು.  | Kannada Prabha

ಸಾರಾಂಶ

ಭ್ರಷ್ಟಾಚಾರ ನಿಲ್ಲಬೇಕಾದರೆ ಮುಂದಿನ ಪೀಳಿಗೆ ಚಾರಿತ್ಯ್ರವಂತವಾಗಬೇಕು ಎಂದು ಸಂಸ್ಕೃತ ಅಧ್ಯಾಪಕಿ ಶ್ರೀದೇವಿ ಹೆಗಡೆ ಊರಕೇರಿ ಹೇಳಿದರು.

ಕುಮಟಾ: ತಾಯಿ ಕುಟುಂಬದ ಶಕ್ತಿ, ಕುಟುಂಬ ಸಮಾಜದ ತಾಯಿ ಬೇರು. ಕುಟುಂಬದಲ್ಲಿ ನಡೆದದ್ದೇ ದೇಶದಲ್ಲಿ ಪ್ರತಿಬಿಂಬಿತವಾಗುತ್ತದೆ. ಧರ್ಮನಿಷ್ಟೆ, ಉತ್ತಮ ಆಚರಣೆ, ಸಂಸ್ಕೃತಿಯ ಪಾಠ ಪೀಳಿಗೆಯಿಂದ ಪೀಳಿಗೆಗೆ ಹರಿದುಬರಬೇಕು ಎಂದು ಸಂಸ್ಕೃತ ಅಧ್ಯಾಪಕಿ ಶ್ರೀದೇವಿ ಹೆಗಡೆ ಊರಕೇರಿ ಹೇಳಿದರು.

ಪಟ್ಟಣದ ಮಹಾಸತಿ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೌಟುಂಬಿಕ ಜೀವನದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ಮಾಡಿದರು.

ಭ್ರಷ್ಟಾಚಾರ ನಿಲ್ಲಬೇಕಾದರೆ ಮುಂದಿನ ಪೀಳಿಗೆ ಚಾರಿತ್ಯ್ರವಂತವಾಗಬೇಕು. ಮಕ್ಕಳಿಗೆ ಅಂತಹ ಶಿಕ್ಷಣ ಸಿಗಬೇಕು. ಕಲಿತ ವಿದ್ಯೆಗೂ ಅಂತಃಕರಣದ ಶಕ್ತಿಗೂ ಸಾಮ್ಯತೆಯಾಗಿ ಜನಪರವಾಗಬೇಕಿದೆ. ಅಂತಹ ಮಹತ್ವಾಕಾಂಕ್ಷೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಕ್ರಮಗಳಲ್ಲಿ ಅಡಗಿದೆ ಎಂದರು.

ಚಾರಿತ್ರ್ಯ ಎಂಬುದು ನಮ್ಮ ದೇಶದ ಹೆಗ್ಗಳಿಕೆ. ಅದಕ್ಕೆ ಕಾರಣ ತಾಯಿಯ ಸಂಸ್ಕಾರ. ಚಾರಿತ್ರ್ಯವಂತ ಮಕ್ಕಳನ್ನೇ ದೇಶಕ್ಕೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ತಾಯಿಯದ್ದು. ಯಾರಿಗೆ ಯಾವುದೇ ಶಕ್ತಿ ಯುಕ್ತಿ ಇದ್ದರೂ ಎಲ್ಲರೂ ಒಂದಾಗಿ ಬಾಳುವ ಸಾಮರಸ್ಯವನ್ನು ನಮ್ಮ ಮನೆಯಲ್ಲೂ ಕಂಡುಕೊಳ್ಳುವ ಪ್ರಯತ್ನವಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಮಹಿಳೆಯರು ಮುಂದೆ ಬರಬೇಕಾದರೆ ಶಿಸ್ತಿನ ಜತೆಗೆ ಧನಾತ್ಮಕ ಮನಸ್ಥಿತಿ ಬೇಕು. ಅಂಥ ಶಿಸ್ತು ಮನಸ್ಥಿತಿ, ಹುಮ್ಮಸ್ಸು ತುಂಬುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಯಶಸ್ಸಿಗೆ ಕಾರಣವಾಗುತ್ತಿದೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ, ಸಂಸ್ಕಾರ ಎಲ್ಲವನ್ನೂ ನೀಡುತ್ತಿದ್ದಾರೆ. ಭಾರತೀಯ ಮಾತೆಯ ನೈಜ ಸ್ವರೂಪ, ಗುಣ ಮೌಲ್ಯಗಳ ಪುನಃ ಸಂವರ್ಧನೆಗಾಗಿಯೇ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ಇಂಥ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಕೀಲೆ ಮಮತಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಪೊಲೀಸ್ ಅಧಿಕಾರಿ ರೂಪಾ, ಯೋಜನಾಧಿಕಾರಿ ಕಲ್ಮೇಶ ಎಂ. ಇತರರು ಇದ್ದರು. ಕಾರ್ಯಕ್ರಮದಲ್ಲಿ ಪುಷ್ಪ ಗುಚ್ಛ ಸ್ಪರ್ಧೆ ನಡೆಯಿತು. ಯೋಜನೆಯಡಿ ಸ್ವಸಹಾಯ ಸಂಘದ ಸದಸ್ಯ ಮಹಿಳೆಯರು ಸಿದ್ಧಪಡಿಸಿದ ವೈವಿಧ್ಯಮಯ ಸ್ವ ಉದ್ಯೋಗದ ಸಾಮಗ್ರಿಗಳ ಮಳಿಗೆಗಳಿಗೂ ಚಾಲನೆ ನೀಡಲಾಯಿತು. ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ ಸಂಗಡಿಗರು ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ