ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಬಿಳಿಕೆರೆ ಹೋಬಳಿ ದಾಸನಪುರ ಗ್ರಾಮದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಯ ಸಂಬಂಧಿಗಳು ಗಂಟೆಗೂ ಹೆಚ್ಚುಕಾಲ ಗ್ರಾಮಾಂತರ ಠಾಣೆಯ ಮುಂಭಾಗ ರಸ್ತೆತಡೆ ನಡೆಸಿದರು.ದಾಸನಪುರ ಗ್ರಾಮದ ರವಿಕುಮಾರ್, ವಸಂತ ದಂಪತಿಯ ಏಕಮಾತ್ರ ಪುತ್ರ ಮುತ್ತುರಾಜ್ (17) ಮೃತಪಟ್ಟವರು. ರತ್ನಪುರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದರು.
ಮುತ್ತುರಾಜ್ ಸೋಮವಾರ ಕಾಲೇಜಿನಲ್ಲಿ ಪರೀಕ್ಷೆ ಬರೆದು ತನ್ನೂರಿಗೆ ವಾಪಸಾಗುವ ವೇಳೆ ಅನ್ಯಕೋಮಿನ ಹುಡುಗರ ಒಂದು ತಂಡ ರತ್ನಪುರಿಯಿಂದ ಗದ್ದಿಗೆಗೆ ತೆರಳುವ ಮಾರ್ಗದಲ್ಲಿ ಅಡ್ಡಹಾಕಿ ಮನಬಂದಂತೆ ಥಳಿಸಿದೆ. ಇದನ್ನು ಕಂಡ ಇತರ ಗೆಳೆಯರು ಮುತ್ತುರಾಜನ ತಂದೆಗೆ ಮಾಹಿತಿ ನೀಡಿದ್ದಾರೆ. ತಂದೆ ರವಿಕುಮಾರ್ ರತ್ನಪುರಿಗೆ ಬಂದು ಅನ್ಯಕೋಮಿನ ಹುಡುಗರನ್ನು ಪ್ರಶ್ನಿಸಿದಾಗ ಒರಟಾಗಿ ಉತ್ತರ ನೀಡಿ ತಮ್ಮ ಬಳಿಯಿದ್ದ ಮುತ್ತುರಾಜನ ಮೊಬೈಲ್ ನ್ನು ನೆಲಕ್ಕೆ ಬಿಸಾಡಿ ತೆರಳಿದ್ದಾರೆ. ಸಂಜೆಯವರೆಗೂ ತನ್ನ ಪುತ್ರನಿಗಾಗಿ ಹುಡುಕಾಡಿದ ರವಿಕುಮಾರ್ ದಾಸನಪುರದ ತಮ್ಮ ಜಮೀನಿನ ಪಕ್ಕದ ಜಮೀನಿನಲ್ಲಿರುವ ಶೆಡ್ ಗೆ ಅನುಮಾನವಾಗಿ ನೋಡಿದಾಗ ಪುತ್ರನ ದೇಹ ನೇಣಿಗೆ ಶರಣಾದ ಸ್ಥಿತಿಯಲ್ಲಿತ್ತು.ಮೃತನ ತಂದೆ ರವಿಕುಮಾರ್ ತಡರಾತ್ರಿ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿ ತನ್ನ ಮಗನ ಸಾವು ಅನುಮಾನಾಸ್ಪದವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಕೋರಿದ್ದಾರೆ. ಆದರಂತೆ ಪೊಲೀಸರು ಪ್ರಕರಣ ದಾಖಲಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ.
ಆದರೆ ಮಂಗಳವಾರ ಸಂಜೆಯಾದರೂ ಯಾರೊಬ್ಬರನ್ನೂ ಬಂಧಿಸಲಿಲ್ಲವೆಂದು ಆಕ್ರೋಶಗೊಂಡ ಗ್ರಾಮಸ್ಥರು, ಪಟ್ಟಣದ ಗ್ರಾಮಾಂತರ ಠಾಣೆಯ ಮುಂಭಾಗ ಸಂಜೆ 4ರ ಸಮಯದಲ್ಲಿ ಜಮಾವಣೆಗೊಂಡು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು.ಇದೇ ವೇಳೆ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯ ಮೃತದೇಹವನ್ನು ಹೊತ್ತ ಆಂಬುಲೆನ್ಸ್ ಠಾಣೆ ಬಳಿ ಬಂದಿತು. ಉದ್ರಿಕ್ತರಾಗಿದ್ದ ಗ್ರಾಮಸ್ಥರು ವಾಹನದ ಸುತ್ತ ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ಆರಂಭಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರಯೋಜನಕ್ಕೆ ಬರಲಿಲ್ಲ. ಆರೋಪಿಯನ್ನು ಬಂಧಿಸುವವರೆಗೆ ಇಲ್ಲಿಂದ ಕದಲುವುದಿಲ್ಲವೆಂದು ಗಟ್ಟಿಯಾಗಿ ಕುಳಿತು ಬಿಟ್ಟರು. ತದನಂತರ ಹಿಂದೂಪರ ಸಂಘಟನೆಗಳ ಕೆಲ ಕಾರ್ಯಕರ್ತರು ಮತ್ತೊಂದು ದೂರನ್ನು ಬರೆದು ತಂದು ಈ ದೂರಿನನ್ವಯ ಎಫ್.ಐ.ಆರ್. ದಾಖಲಿಸಿ ದೂರು ದಾಖಲಿಸಿದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲು ದೂರಿನಲ್ಲಿ ಒತ್ತಾಯಿಸಿದರು. ಇದೇ ವೇಳೆ ದೂರಿನಲ್ಲಿ ಬರೆದಿರುವುದನ್ನು ಓದಿ ತಿಳಿಸಲಾಯಿತು.
ಪೊಲೀಸರು ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು. ಪ್ರತಿಭಟನೆ ಹಿಂಪಡೆಯಲಾಯಿತು. ಮೃತದೇಹವನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು.ಸ್ಥಳದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ. ಚಿನ್ನಸ್ವಾಮಿ ಶೆಟ್ಟಿ, ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಮತ್ತು ಸಿಬ್ಬಂದಿ ಇದ್ದರು.