ಸ್ವಾತಂತ್ರ್ಯ ಎಂದೂ ಸ್ವೇಚ್ಛೆ ಆಗಬಾರದು: ವಸಂತ ಭಾರಧ್ವಾಜ

KannadaprabhaNewsNetwork |  
Published : Jan 28, 2024, 01:19 AM IST
ಪುರಸ್ಕಾರ | Kannada Prabha

ಸಾರಾಂಶ

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶನಿವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶಿಕ್ಷಣದ ಬೆಳಕಿನಲ್ಲಿ ನಮ್ಮ ದಾರಿ ಯಾವುದು ಇರಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮಗಿರಬೇಕು. ಬದುಕುವ ಸ್ವಾತಂತ್ರ್ಯ ಎಲ್ಲರಿಗಿದೆ. ಆದರೆ ಸ್ವಾತಂತ್ರ್ಯ ಎಂದೂ ಸ್ವೇಚ್ಛೆ ಆಗಬಾರದು ಎಂದು ಖ್ಯಾತ ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರಧ್ವಾಜ ಹೇಳಿದರು.ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶನಿವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿದರು.ವೈವಿಧ್ಯಮಯವಾದ, ವಿಭಿನ್ನ ಹಾಗೂ ವಿಚಿತ್ರವಾದ ಪ್ರಪಂಚದಲ್ಲಿ ಹೊಂದಾಣಿಕೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಶಿಕ್ಷಣವು ಜ್ಞಾನ ಮತ್ತು ಕೌಶಲ ಮಾತ್ರ ಕೊಡುತ್ತದೆ. ಆದರೆ ನಮ್ಮ ಆಸಕ್ತಿ, ಹವ್ಯಾಸ, ಬುದ್ಧಮತ್ತೆಯನ್ನು ಹೊಂದಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ದೃಢಸಂಕಲ್ಪದಿಂದ ಉನ್ನತ ಸಾಧನೆ ಮಾಡಬೇಕು. ನೂರು ಪುಸ್ತಕಗಳನ್ನು ಓದುವುದಕ್ಕಿಂತ ಪ್ರಕೃತಿ-ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಘಟನೆಗಳಿಂದ ನಾವು ಅಪಾರ ಜ್ಞಾನ ಪಡೆಯಬಹುದು. ಶಿವರಾಮ ಕಾರಂತರಂತಹ ಮೇಧಾವಿಗಳು ಪ್ರಕೃತಿಯಲ್ಲೆ ಜ್ಞಾನಸಂಪಾದನೆ ಮಾಡಿದ್ದಾರೆ. ಪ್ರಪಂಚವೇ ತರಗತಿ ಕೋಣೆ, ಪ್ರಕೃತಿಯೇ ಪಾಠಶಾಲೆಯಾಗಬೇಕು. ಅದರಂತೆ ನಾವು ಮಾನಸಿಕ ಪಠ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರು ಶಾಂತಿವನ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಿದ ಜ್ಞಾನದಾಸೋಹ ಭವ್ಯ ಭಾರತದ ಬಗ್ಗೆ ಹೊಸ ಬೆಳಕನ್ನು ಮೂಡಿಸಿದೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿ, ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರಾಮರಾಜ್ಯದ ಕನಸು ನನಸಾಗಲೆಂದು ಅವರು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶಾಂತಿವನ ಟ್ರಸ್ಟ್ ಟ್ರಸ್ಟಿ ಡಾ.ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಹಿರಿಯರು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡರೆ, ಮಕ್ಕಳೂ ಅವರನ್ನು ಅನುಕರಿಸುತ್ತಾರೆ. ಇದಕ್ಕಾಗಿ ಪ್ರತಿಯೊಂದು ಮನೆಯಲ್ಲಿಯೂ ದೇವರಕೋಣೆ ಇದ್ದಂತೆ ಒಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕಗಳು ಕಲಿತವರಿಗೆ ಕಾಮಧೇನು, ಕಲಿಯದವರಿಗೆ ಕಲ್ಪವೃಕ್ಷವಾಗಿದೆ ಎಂದರು.ಜ್ಞಾನ ಅಂದರೆ ಬೆಳಕು. ಬೆಳಕಿನ ಅಭಾವವೇ ಕತ್ತಲೆ. ಕತ್ತಲೆಗೆ ಅಸ್ತಿತ್ವವೇ ಇಲ್ಲ. ಜ್ಞಾನದ ಬೆಳಕು ಇದ್ದಲ್ಲಿ ಅಜ್ಞಾನದ ಅಂಧಕಾರ ತನ್ನಷ್ಟಕ್ಕೆ ದೂರವಾಗುತ್ತದೆ. ಓದುವ ಮತ್ತು ಬರೆಯುವ ಹವ್ಯಾಸದಿಂದ ನಮ್ಮ ಯೋಚನಾಲಹರಿ, ಚಿಂತನ-ಮಂಥನ ಸಾಮರ್ಥ್ಯ ಉದ್ದೀಪನಗೊಂಡು ಉತ್ತಮ ಸಂಸ್ಕಾರ ಮೂಡಿ ಬರುತ್ತದೆ. ಕಥೆ ಹೇಳುವುದರಿಂದ, ಕೇಳುವುದರಿಂದ ನೈತಿಕತೆಯೊಂದಿಗೆ ಸಾಮಾಜಿಕ ಪ್ರಜ್ಞೆ, ಸತ್ಸಂಗ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು, ಜಾಗೃತಿ, ಆತ್ಮಗೌರವ, ದೇಶಪ್ರೇಮ, ಸ್ವಚ್ಛತೆ, ಸೇವೆ, ಪರೋಪಕಾರ, ಪರಸ್ಪರ ಪ್ರೀತಿ-ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಸುಖ-ಶಾಂತಿ, ನೆಮ್ಮದಿಯ ಸಾಮಾಜಿಕ ಜೀವನಕ್ಕೆ ಭದ್ರ ಬುನಾದಿ ಸಿಗುತ್ತದೆ ಎಂದರು.ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.ಸ್ಪರ್ಧಾ ವಿಜೇತ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಪ್ರಸ್ತುತಪಡಿಸಿದರು. ನಿರ್ದೇಶಕ ಡಾ.ಶಶಿಕಾಂತ ಜೈನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಯೋಗ ಸಂಘಟಕ ಶೇಖರ ಕಡ್ತಲ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ