ಕನ್ನಡಪ್ರಭ ವಾರ್ತೆ, ಚನ್ನಗಿರಿ
ಕಡು ಬೇಸಿಗೆ ಮತ್ತು ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರು ಬಾರದೆ ತಾಲೂಕಿನಾದ್ಯಂತ ಅಡಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಹಗಲು-ರಾತ್ರಿ ಎನ್ನದೆ ತೋಟಗಳಲ್ಲಿಯೇ ಉಳಿದು ಭದ್ರಾ ನಾಲೆ ಹಾಗೂ ಟ್ಯಾಂಕರ್‌ಗಳಿಂದ ನೀರು ಹರಿಸುತ್ತಾ ಫಸಲನ್ನು ಪೋಷಣೆ ಮಾಡುತ್ತಿದ್ದಾರೆ.ಭದ್ರಾ ನಾಲೆ ನೀರು ಏ.2ನೇ ತಾರೀಖಿನವರೆಗೆ ಹರಿಯಲಿದ್ದು, ಈ ನಾಲೆ ಅಕ್ಕ-ಪಕ್ಕ, ತುಸು ದೂರದಲ್ಲಿದ್ದವರು ಪಂಪ್‌ಸೆಟ್ ಮೂಲಕ ನೀರನ್ನು ಹರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇತ್ತ ನೀರಾವರಿ ಇಲಾಖೆಯ ಅಧಿಕಾರಿಗಳು, ಬೆಸ್ಕಾಂ, ಪೊಲೀಸ್, ತಹಸೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ಪ್ರತಿದಿನ ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆಗಿಳಿದಿದ್ದಾರೆ.
ಭದ್ರಾ ನಾಲೆ ನೀರು ಕೊನೆ ಭಾಗದ ರೈತರಿಗೆ ಹರಿಯದೆ ಇರುವ ಕಾರಣ ಅಧಿಕಾರಿಗಳು ನಾಲೆಗೆ ಹಾಕಿರುವ 200ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ಗಳನ್ನು ತಾಲೂಕಿನ ಬೆಳ್ಳಿಗನೂಡು ಗ್ರಾಮದಿಂದ ಅಶೋಕನಗರದವರೆಗೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಆ ಭಾಗದ ವಿದ್ಯುತ್ ಸರಬರಾಜನ್ನು ಸಹ ಸ್ಥಗಿತಗೊಳಿಸಿದ್ದಾರೆ.ಅಡಕೆ ಬೆಳೆಯು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರಿಗೆ ಕೋಟ್ಯಂತರ ರು. ಆದಾಯ ತಂದುಕೊಡುತ್ತದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ತಾಲೂಕಿನ ಅರ್ಥಿಕ ಪರಿಸ್ಥಿತಿ ಏರು ಪೇರಾಗಲಿದೆ ಎನ್ನುತ್ತಾರೆ ಅಡಕೆ ಬೆಳೆಗಾರರಾದ ಶೇಖರಪ್ಪ, ದೇವರಹಳ್ಳಿ ರಾಕೇಶ್, ಎಂ.ಯು.ಚನ್ನಬಸಪ್ಪ, ಎಂ.ಎಸ್. ಮಲ್ಲೇಶಪ್ಪ.
ತಾಲೂಕಿನ ಉಬ್ರಾಣಿ ಹೋಬಳಿ ಭಾಗದಲ್ಲಿ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂತೆ ಗ್ರಾಮಗಳಿದ್ದು, ಇಲ್ಲಿ ತೋಟಗಳು ಒಣಗುವ ಜೊತೆಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ನೀರಿಗಾಗಿ ಆನೆ, ಕಡರಿ, ಜಿಂಕೆ, ಚಿರತೆ, ಕಾಡೆಮ್ಮೆಯಂತಹ ಕಾಡು ಪ್ರಾಣಿಗಳು ಗ್ರಾಮಗಳಿಗೆ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಯುಗಾದಿ ಅಮಾವಾಸ್ಯೆ ಕಳೆಯುತ್ತಿದ್ದಂತೆಯೇ ಉತ್ತಮ ಮಳೆ ಬೀಳುತ್ತದೆಂದು ತಾವರೆಕೆರೆ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಬೇಸಿಗೆ ಕಾಲದಲ್ಲೂ ಬೆಳಗಿನ ಸಮಯ ದಟ್ಟ ಮಂಜು ಬೀಳುತ್ತಿದ್ದು, ಇದು ಮುಂದೆ ಉತ್ತಮ ಮಳೆಯಾಗುವ ಸೂಚನೆ ಎನ್ನುತ್ತಾರೆ ಶ್ರೀ.ಅಡಕೆ ಬೆಳೆ ರಕ್ಷಣೆ ಜೊತೆಗೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ನೀರಿನ ತೊಂದರೆ ಕಾಣಿಸಿಕೊಂಡಿದೆ. 11 ಖಾಸಗಿ ಕೊಳವೆ ಬಾವಿಗಳಿಂದ ವಿ.ಬನ್ನಿಹಟ್ಟಿ, ಚಿಕ್ಕ ಮಳಲಿತಾಂಡ, ಹೊಸೂರು, ಕೆರೆಬಿಳಚಿ ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ಟ್ಯಾಂಕರ್‌ಗಳ ಅವಶ್ಯಕತೆ ಇದ್ದು, ಈ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ಲೋಹಿತ್ ಹೇಳುತ್ತಾರೆ.