ಶಿವಾನಂದ ಅಂಗಡಿ
ಹುಬ್ಬಳ್ಳಿಕಳೆದ ಹಂಗಾಮಿನಲ್ಲಿ ₹ 60ರಿಂದ 70 ಸಾವಿರ ವರೆಗೂ ಮಾರಾಟವಾಗಿ ಬೆಳೆಗಾರರು ಹುಬ್ಬೇರಿಸುವಂತೆ ಮಾಡಿದ್ದ ಒಣಮೆಣಸಿನಕಾಯಿ ಈ ಸಲ 25ರಿಂದ 30 ಸಾವಿರಕ್ಕೆ ಮಾರಾಟವಾಗುತ್ತಿದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.ಉತ್ತರ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾಡಗಿ ಕಡ್ಡಿ, ಡಬ್ಬಿ ತಳಿಯ ಮೆಣಸಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ರಾಜ್ಯದಲ್ಲಿಯೇ ಬ್ಯಾಡಗಿ ಮಾರುಕಟ್ಟೆ ಮೆಣಸಿನಕಾಯಿ ಮಾರಾಟಕ್ಕೆ ಹೆಸರುವಾಸಿಯಾಗಿದ್ದು, ಬ್ಯಾಡಗಿಯಲ್ಲಿ ಸೋಮವಾರ, ಗುರುವಾರ, ಹುಬ್ಬಳ್ಳಿಯಲ್ಲಿ ಸೋಮವಾರ, ಬುಧವಾರ, ಶನಿವಾರ ಹಾಗೂ ಗದಗ ನಗರದಲ್ಲಿಯೂ ಶನಿವಾರದಂದು ಮೆಣಸಿನಕಾಯಿ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ.ಒಣ ಮೆಣಸಿನಕಾಯಿ ಬೆಳೆಯುವ ಪ್ರದೇಶಗಳಾದ ಗದಗ, ಕುಂದಗೋಳ, ಅಣ್ಣಿಗೇರಿ, ನವಲಗುಂದ, ಹುಬ್ಬಳ್ಳಿ ತಾಲೂಕು ಪ್ರದೇಶಗಳಲ್ಲಿ ಈ ಬಾರಿ ರೈತರು ಮುಂಗಾರಿಗೆ ಹೆಸರುಕಾಳು ಹಾಗೂ ಹಿಂಗಾರಿಗೆ ಕಡಲೆ ಕಾಳು ಬೆಳೆ ಬೆಳೆದಿದ್ದಾರೆ. ಹೀಗಾಗಿ ಮೆಣಸಿನಕಾಯಿ ಬೀಜ ಬಿತ್ತನೆ ಪ್ರದೇಶ ತೀವ್ರ ಕುಸಿತವಾಗಿದೆ. ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ಕೂಲಿ ಹೆಚ್ಚಳವೂ ಸೇರಿದಂತೆ ಮೆಣಸಿನಕಾಯಿ ಕೃಷಿಯೂ ವೆಚ್ಚದಾಯಕವಾಗುತ್ತಿದೆ. ಮಳೆ ಹೆಚ್ಚು ಆಗಬಾರದು, ಕಡಿಮೆ ಸಹ ಆಗದೇ ಸಮಪ್ರಮಾಣದಲ್ಲಿ ಆಗಬೇಕು, ಹೀಗಾಗಿ ರೈತರು ಮೆಣಸಿನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುತ್ತಾರೆ ಕೃಷಿ ತಜ್ಞರು.ಬ್ಯಾಡಗಿ, ಹುಬ್ಬಳ್ಳಿಗೆ ಧಾರವಾಡದ ಹುಬ್ಬಳ್ಳಿ ತಾಲೂಕು, ಕುಂದಗೋಳ, ಅಣ್ಣಿಗೇರಿ, ನವಲಗುಂದ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯಿಂದಲೂ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ.ಇಲ್ಲಿಯ ಎಪಿಎಂಸಿ (ಅಮರಗೋಳ)ಯಲ್ಲಿ ಈ ಹಂಗಾಮಿನ ವಹಿವಾಟು ಶುರುವಾಗಿದ್ದರೂ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಒಣಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರುತ್ತಿಲ್ಲ. ಕಳೆದ ಬಾರಿಯಂತೆ ದರವೂ ಸಿಗುತ್ತಿಲ್ಲ.ಕಳೆದ ಬಾರಿ 2024ರ ಜನವರಿಯಲ್ಲಿ ಹುಬ್ಬಳ್ಳಿ ಎಪಿಎಂಸಿಗೆ 47335, ಫೆಬ್ರವರಿಯಲ್ಲಿ 88294 ಕ್ವಿಂಟಲ್ ಆವಕವಾಗಿದ್ದು, ₹ 75189 ವರೆಗೂ ಮಾರಾಟವಾಗಿತ್ತು. ಗುಂಟೂರು, ಡಬ್ಬಿ, ಬ್ಯಾಡಗಿ ತಳಿಯ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಮಾರುಕಟ್ಟೆಗಳಲ್ಲೂ ಕಡಿಮೆ ಪ್ರಮಾಣದಲ್ಲಿ ವಹಿವಾಟು ನಡೆಯುತ್ತದೆ. ಇಲ್ಲಿಯಂತೆ ಗುಣಮಟ್ಟದ ಮೆಣಸಿನಕಾಯಿ ಸಿಗುವುದಿಲ್ಲ. ಹೀಗಾಗಿ ಒಣ ಕಾರ ಹಾಗೂ ಮಸಾಲೆ ಪುಡಿ ಕಂಪನಿಯವರು ತಮ್ಮ ಪ್ರತಿನಿಧಿಗಳ ಮೂಲಕ ಗದಗ, ಬ್ಯಾಡಗಿ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸುತ್ತಾರೆ.ನವೆಂಬರ್ ತಿಂಗಳಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಗೆ ಬರಲು ಶುರುವಾಗುತ್ತದೆ.ಹುಬ್ಬಳ್ಳಿಗೆ ಈ ಹಂಗಾಮಿನ ನವೆಂಬರ್‌ನಲ್ಲಿ ಕಡ್ಡಿಗಾಯಿ 14227 ಕ್ವಿಂಟಲ್ ಆವಕವಾಗಿದ್ದು, ಬೆಲೆ ಮಾತ್ರ ₹ 26650 ದಾಟಿಲ್ಲ. ಡಿಸೆಂಬರ್‌ನಲ್ಲಿ 24715 ಕ್ವಿಂಟಲ್ ಆವಕವಾಗಿದ್ದು, ಅತಿ ಹೆಚ್ಚು ₹ 37 ಸಾವಿರದವರೆಗೆ ಮಾರಾಟವಾಗಿದೆ. ಜನವರಿಯಲ್ಲಿ (20) ಸೋಮವಾರದವರೆಗೆ 29,404 ಕ್ವಿಂಟಲ್ ಆವಕವಾಗಿದ್ದು, ಈ ಹಂಗಾಮಿನಲ್ಲೇ ಅತಿ ಹೆಚ್ಚು ₹ 45200 ರು. ವರೆಗೆ ಮಾರಾಟವಾಗಿದೆ. ಹೆಚ್ಚು ದರಕ್ಕೆ ಮಾರಾಟವಾದ ಮೆಣಸಿನಕಾಯಿ ಬೆರಳೆಣಿಕೆಷ್ಟು ಚೀಲಗಳು ಮಾತ್ರ ಇರುತ್ತವೆ. ರು. 20ರಿಂದ 25 ಸಾವಿರ ಲೆಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರಾಟವಾಗುತ್ತಿದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.ಶೀತಲಗೃಹಗಳಲ್ಲಿ ಕೋಟ್ಯಂತರ ಚೀಲಕಳೆದ ವರ್ಷ ಮಾರ್ಚ್‌ನಲ್ಲಿ ಮೆಣಸಿನಕಾಯಿ ಬೆಲೆ ಕುಸಿದಿದೆ. 60 ಸಾವಿರಕ್ಕೆ ಮಾರುತ್ತಿದ್ದ ಮೆಣಸಿನಕಾಯಿ ಬರೀ ಕ್ವಿಂಟಲ್‌ಗೆ 10ರಿಂದ 15 ಸಾವಿರ ರು. ಮಾರಾಟವಾಗಿದೆ. ಹೀಗಾಗಿ ಬಳ್ಳಾರಿ ಸೇರಿದಂತೆ ಬ್ಯಾಡಗಿ, ಹುಬ್ಬಳ್ಳಿ ಸೇರಿದಂತೆ ಶೀತಲಗೃಹಗಳಲ್ಲಿ ಕೋಟ್ಯಂತರ ಚೀಲಗಳನ್ನು ಶೇಖರಿಸಿಟ್ಟಿದ್ದು, ಬೆಲೆ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಈ ಮೆಣಸಿನಕಾಯಿ ಸಹ ವಹಿವಾಟು ಆಗಿಲ್ಲ. ಅದೇ ಮೆಣಸಿನಕಾಯಿ ಈಗ ಮಾರುಕಟ್ಟೆಗೆ ಬರುತ್ತಿದ್ದು, ಬರೀ 10 ಸಾವಿರ ಆಚೆ ಈಚೆ ಮಾರಾಟವಾಗುತ್ತಿದೆ. ಈ ಮೆಣಸಿನಕಾಯಿಯನ್ನೇ ಹೋಟೆಲ್ ಮಾಲೀಕರು ಕೊಳ್ಳುತ್ತಿದ್ದು, ಬೆಲೆಯೂ ಕಡಿಮೆ ಇರುವುದರಿಂದ ಅಭಾವ ತಲೆದೋರುತ್ತಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಹೆಚ್ಚು ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಹಳೆ ಮೆಣಸಿನಕಾಯಿಯೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.
ಈ ಬಾರಿ ಮಳೆ ಹೆಚ್ಚಾಗಿ ಇಳುವರಿಗೆ ಹೊಡೆತ ಬಿದ್ದಿರುವುದರ ಜತೆಗೆ ಗುಣಮಟ್ಟದ ಕೊರತೆಯೂ ಕಂಡು ಬರುತ್ತಿದೆ. ಮೆಣಸಿನಕಾಯಿ ಗಿಡದಲ್ಲಿಯೇ ಒಣಗಿ ರುದ್ರಾಕ್ಷಿ ಬಣ್ಣಕ್ಕೆ ಬರಬೇಕು ಆಗ ಬಿಡಿಸಿದರೆ ಹೆಚ್ಚಿನ ದರ ಸಿಗುತ್ತದೆ ಎಂದು ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಹೇಳಿದರು.ಪದೇ ಪದೇ ಮೆಣಸಿನಕಾಯಿ ಬಿತ್ತನೆಯಿಂದಾಗಿ ಇಳುವರಿ, ಗುಣಮಟ್ಟಕ್ಕೆ ಹೊಡೆತ ಬೀಳುತ್ತಿದ್ದು, ಹೀಗಾಗಿ ಈ ಬಾರಿ ನಾವು ಹೆಸರುಕಾಳು ಹಾಗೂ ಕಡಲೆಕಾಳು ಬೆಳೆದಿದ್ದೇವೆ. ಜತೆಗೆ ಸುಗ್ಗಿ ಕಾಲಕ್ಕೆ ಕೂಲಿ ಆಳುಗಳು ಸಿಗದೇ ಕಾಯಿ ಬಿಡಿಸಲು ತೀವ್ರ ಸಮಸ್ಯೆ ಆಗುತ್ತದೆ ಎಂದು ಅಣ್ಣಿಗೇರಿ ರೈತ ಶರಣಪ್ಪ ನವಲಗುಂದ ಎಂದರು.