ಕನ್ನಡಪ್ರಭ ವಾರ್ತೆ ಲೋಕಾಪುರ
ಸಮೀಪದ ಕಸಬಾಜಂಬಗಿ ಗ್ರಾಮದ ಒಳವಾರಿ ಪ್ರದೇಶದಲ್ಲಿ ಪ್ರತಿನಿತ್ಯ ಕಾಡುಹಂದಿ, ನರಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿತ್ತು. ಹಾನಿಗೊಳಗಾದ ರೈತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಮುಧೋಳ ತಹಶೀಲ್ದಾರ್ ಗೆ ಮನವಿ ಮಾಡಿದರು.ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಲೋಕಾಪುರ ಹೊಬಳಿಯ ಕಸಬಾಜಂಬಗಿ ಗ್ರಾಮದ ಒಳವಾರಿ ಪ್ರದೇಶ ಸುಮಾರು ೨೦೦೦ ಎಕರೆಗಿಂತ ಅಧಿಕ ವ್ಯಾಪ್ತಿ ಹೊಂದಿದ್ದು, ಇಲ್ಲಿನ ಅನೇಕ ಸಣ್ಣಪುಟ್ಟ ಬಡರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ಸೂರ್ಯಕಾಂತಿ, ಗೋವಿನಜೋಳ, ಸೆಂಗಾ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ, ಈ ಬೆಳೆಗಳನ್ನು ಬೆಳೆಯಲು ಬ್ಯಾಂಕುಗಳಿಂದ ಸಾಲ ಪಡೆದಿದಿರುತ್ತಾರೆ, ಈ ಒಳವಾರಿ ಪ್ರದೇಶದ ಸುತ್ತಮುತ್ತಲಿನ ದಟ್ಟವಾದ ಅರಣ್ಯ ಪ್ರದೇಶ ವ್ಯಾಪಿಸಿದ್ದು, ಈ ಅರಣ್ಯ ಪ್ರದೇಶದಿಂದ ಪ್ರತಿ ನಿತ್ಯ ಕಾಡುಹಂದಿಗಳು, ಮುಳ್ಳುಹಂದಿಗಳು, ನರಿಗಳು ಮುಂತಾದ ಪ್ರಾಣಿಗಳು ರಾತ್ರೋರಾತ್ರಿ ಜಮೀನುಗಳಿಗೆ ನುಗ್ಗಿ ವಾಣಿಜ್ಯ ಬೆಳೆಗಳನ್ನು ನಾಶ ಮಾಡುತ್ತಿದ್ದು, ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ನಷ್ಟವಾಗುತ್ತಿದೆ. ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ, ಪರಿಹಾರಕ್ಕಾಗಿ ವಿಚಾರಿಸಿದರೆ ಅರಣ್ಯ ಇಲಾಖೆ ಅರಣ್ಯ ರಕ್ಷಕ ಮರಳಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಗತಿಪರ ರೈತರಾದ ಅಬ್ದುಲ್ ರೆಹೆಮಾನ್ ಮುಲ್ಲಾ ಮಾತನಾಡಿ, ಕಾಡು ಹಂದಿಗಳು ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಶ್ರಮ ಪಟ್ಟು ಬೆಳೆದ ಬೆಳೆಗಳೆಲ್ಲ ಹಂದಿ, ನರಿಗಳ ಉಪಟಳಕ್ಕೆ ನಾಶವಾಗುತ್ತಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದರು. ಮನುಷ್ಯರ ಮೇಲೆಯೂ ದಾಳಿ: ಬೆಳೆ ಮಾತ್ರವಲ್ಲದೆ ಮನುಷ್ಯರ ಮೇಲೂ ಹಂದಿಗಳು ದಾಳಿ ನಡೆಸುತ್ತಿದೆ. ಹೊಲ ಹಸನು ಮಾಡಲು, ಬಿತ್ತನೆ ಬೀಜ, ಗೊಬ್ಬರ ಬಿತ್ತನೆ ಕೂಲಿಗಾಗಿ ಎಕರೆಗೆ ಸಾವಿರಾರು ರೂಪಾಯಿ ಖಚು ಮಾಡಿದ್ದೇವೆ, ಬಿತ್ತನೆ ಮಾಡಿದ ದಿನದಿಂದ ಅಕ್ಕಪಕ್ಕದ ರೈತರೊಂದಿಗೆ ಹೊಲಗಳಿಗೆ ಹೋಗಿ ಹಗಲು ರಾತ್ರಿ ಪಾಳಿಯಾಗಿ ಹಂದಿ ಕಾಯುತ್ತೇವೆ, ಹಾಗಿದ್ದರೂ ಯಾವುದೋ ಸಮಯದಲ್ಲಿ ಹಿಂಡು ಹಿಂಡಾಗಿ ಹೊಲಗಳಿಗೆ ದಾಳಿ ಇಟ್ಟು, ಮಣ್ಣನ್ನು ಕೆದಕಿ ಒಂದೂ ಕಾಳನ್ನು ಬಿಡದೆ ತಿಂದು ಹಾಕುತ್ತಿವೆ. ಕೃಷಿ ಮಾಡಲು ಮತ್ತೆ ಸಾಲ ಮಾಡಿ ಬಿತ್ತನೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಸಬಾಜಂಬಗಿ ಗ್ರಾಮದ ರೈತರ ಶ್ರೀಕಾಂತ ಮುಲಿಮನಿ ತಮ್ಮ ಅಳಲು ತೋಡಿಕೊಂಡರು.ರೈತರಾದ ಹಣಮಂತ ಬೋಗಿ, ವಿಠ್ಠಲ ಹೊನಕೇರಿ, ಮಲ್ಲಪ್ಪ ಗಡ್ಡಿ, ಕುಷ್ಟಪ್ಪ ಮೆಟಗುಡ್ಡ, ರಂಗಪ್ಪ ಮರಡಿ, ಮಾರುತಿ ಹೊನಕೇರಿ, ಸತ್ಯಪ್ಪ ದೊಡಮನಿ, ರಾಜಾರಾಮ ಘೋರ್ಪಡೆ, ರಮೇಶ ಲಮಾಣಿ, ಯಲ್ಲಪ್ಪ ಜಂಬಗಿ, ಶಿವಪ್ಪ ಮರಡಿ ಇನ್ನೂ ಅನೇಕ ರೈತರು ಬೆಳಗಳನ್ನು ಕಡಿದು ತಿಂದ ಬೆಳೆಗಳನ್ನು ತಹಸೀಲ್ದಾರ್ ಕಚೇರಿಗೆ ತಂದಿದ್ದರು. ---
ಎರಡು ಮೂರು ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಭೆ ಕರೆದು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ.-ವಿನೋದ ಹತ್ತಳ್ಳಿ,
ತಹಸೀಲ್ದಾರ್ ಮುಧೋಳ.---ರೈತರ ಸಮಸ್ಯೆಗೆ ಅರಣ್ಯ ಇಲಾಖೆ ಸದಾ ಸಿದ್ಧವಿದೆ, ಬೆಳೆಗಳಿಗೆ ತೊಂದರೆಯಾದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಶೀಘ್ರವಾಗಿ ಇದಕ್ಕೆ ಪರಿಹಾರ ಕಂಡು ಹಿಡಿದು ಅರಣ್ಯ ಇಲಾಖೆಯಿಂದ ರೈತರ ಬೆಳೆಗೆ ಪರಿಹಾರ ನೀಡಲಾಗುವುದು. ಕಾಡುಹಂದಿ, ನರಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡಲು ತಂತ್ರ ರೂಪಿಸಲಾಗುವುದು. -ಶಿವಪುತ್ರ ತಳವಾರ, ವಲಯ ಅರಣ್ಯ ಅಧಿಕಾರಿ, ಮುಧೋಳ.