ವಿವಿಧ ಬೇಡಿಕೆ ಈಡೇರಿಕೆಗಾಗಿ ರೈಲು ತಡೆಗೆ ರೈತರ ಯತ್ನ: ಪೊಲೀಸರ ವಶಕ್ಕೆ

KannadaprabhaNewsNetwork |  
Published : Mar 02, 2024, 01:45 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಹುಬ್ಬಳ್ಳಿಯ ರೈಲು ನಿಲ್ದಾಣದ ಎದುರು ಪ್ರತಿತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಕನಿಷ್ಠ ಬೆಂಬಲ ಯೋಜನೆಯ ಗ್ಯಾರಂಟಿ ಕಾನೂನು ಜಾರಿಯಾಗಬೇಕು, ಕೃಷಿ ತಜ್ಞ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆ ಒಕ್ಕೂಟದ ಜಿಲ್ಲಾ ಘಟಕ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಧಾರವಾಡ ಜಿಲ್ಲೆಯ ರೈತರು ಶುಕ್ರವಾರ ಹುಬ್ಬಳ್ಳಿ ನಿಲ್ದಾಣದಲ್ಲಿ ರೈಲು ಸಂಚಾರ ತಡೆಗೆ ಯತ್ನಿಸಿದರು. ಇದಕ್ಕೆ ಅವಕಾಶ ನೀಡದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಉದ್ಯಮಿಗಳ ಲಕ್ಷ ಕೋಟಿಗಟ್ಟಲೆ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಉದ್ಯಮಿಗಳಿಂದ ಕೋಟಿ ಕೋಟಿ ವಂತಿಗೆ ದೊರೆತಿದೆ. ಹಾಗಾಗಿ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ಬೆಂಬಲ ಯೋಜನೆಯ ಗ್ಯಾರಂಟಿ ಕಾನೂನು ಜಾರಿಯಾಗಬೇಕು, ಕೃಷಿ ತಜ್ಞ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಡಬ್ಲ್ಯುಟಿಓ ಒಪ್ಪಂದ ಅನ್ವಯ ರೈತರಿಗೆ ಪಿಂಚಣಿ ಘೋಷಿಸಬೇಕು, ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ರೈತರು ನ್ಯಾಯ ಕೇಳಿದರೆ ಸರ್ಕಾರ ಗೋಲಿಬಾರ್ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರೈತರು ಗುಲಾಮರಲ್ಲ. ನಿಮಗೆ ಅಧಿಕಾರ ಶಾಶ್ವತ ಅಲ್ಲ. ಕೂಡಲೇ ರೈತರ ಸಮಸ್ಯೆ ಬಗೆ ಹರಿಸಿ ಅನ್ನದಾತರ ಋಣ ತೀರಿಸಿ. ಇಲ್ಲದೇ ಇದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಉಪಾಧ್ಯಕ್ಷ ಉಳವಪ್ಪ ಬಳಿಗೇರ, ತಾಲೂಕು ಅಧ್ಯಕ್ಷ ವಸಂತ ಡಾಖಪ್ಪನವರ, ಶಿವಪ್ಪ ತಡಸ, ಮಾಳಪ್ಪ ಹೊನ್ನಿಹಳ್ಳಿ, ಮಲ್ಲೇಶಿ ಜಿನ್ನೂರ, ಚನ್ನಪ್ಪ ಜಗದಪ್ಪನವರ, ಸಹದೇವ ನೂಲ್ವಿ ಸೇರಿದಂತೆ ಹಲವು ರೈತರು ಇದ್ದರು.

ಪೊಲೀಸರೊಂದಿಗೆ ರೈತರ ವಾಗ್ವಾದ

ರೈಲು ನಿಲ್ದಾಣದೊಳಗೆ ಪ್ರವೇಶಿಸಲು ಮುನ್ನುಗ್ಗುತ್ತಿದ್ದ ರೈತರನ್ನು ಪೊಲೀಸರು ತಡೆದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ನಾವು ಶಾಂತಿಯುತವಾಗಿ ರೈಲು ತಡೆದು ಪ್ರತಿಭಟನೆ ನಡೆಸುತ್ತೇವೆ. ಪೊಲೀಸರು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪೊಲೀಸರು ರೈಲು ನಿಲ್ದಾಣದ ಹೊರಗಡೆ ಪ್ರತಿಭಟನೆ ಮಾಡುವಂತೆ ಸೂಚಿಸಿದರು. ಇದಕ್ಕೊಪ್ಪದ ರೈತರು ರೈಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ