ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಅರಣ್ಯ ಇಲಾಖೆಯಿಂದ ರೈತರು, ಕೃಷಿಕರು, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ನ.೪ರಂದು ಸುಬ್ರಹ್ಮಣ್ಯದಿಂದ ಬಲ್ಯದ ವರೆಗೆ ನಡೆಯುವ ರೈತ ಜಾಗೃತಿ ರ‍್ಯಾಲಿಯ ಪೂರ್ವಭಾವಿ ಸಭೆ ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ-ಐನೆಕಿದು ಸೊಸೈಟಿ ಸಭಾಂಗಣದಲ್ಲಿ ನಡೆಯಿತು.ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ನೂರಾರು ವರ್ಷಗಳಿಂದ ಸ್ವಾವಲಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬವನ್ನು ಆರಣ್ಯ ಇಲಾಖೆಯವರು ಒಕ್ಕಲೆಬ್ಬಿಸುವ ಬಗ್ಗೆ, ರೈತರಿಗೆ ಕಂದಾಯ ಇಲಾಖೆ ನೀಡಿರುವ ಹಕ್ಕುಪತ್ರಗಳನ್ನು ರದ್ದುಗೊಳಿಸಲು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿರುವ ಬಗ್ಗೆ, ನಿರಂತರವಾಗಿ ರೈತರ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಒಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಭಾಗವಾಗಿ ನ.೪ರಂದು ರೈತ ಜಾಗೃತಿ ರ‍್ಯಾಲಿ ನಡೆಯಲಿದೆ. ತಾಲೂಕಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.ನ.೪ರಂದು ಬೆಳಗ್ಗೆ ೯ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರ‍್ಯಾಲಿಗೆ ಚಾಲನೆ ದೊರೆಯಲಿದೆ. ಬಳಿಕ ಕುಲ್ಕುಂದ, ಕೈಕಂಬ, ಬಿಳಿನೆಲೆ, ನೆಟ್ಟಣ, ಸುಂಕದಕಟ್ಟೆ, ಐತ್ತೂರು, ಮರ್ಧಾಳ, ಕಡಬ, ಹೊಸಮಠ ಮೂಲಕ ಬಲ್ಯಕ್ಕೆ ರ‍್ಯಾಲಿ ಸಾಗಲಿದೆ. ಬೈಕ್, ಇತರೆ ವಾಹನಗಳ ಮೂಲಕ ರ‍್ಯಾಲಿಯಲ್ಲಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ರ‍್ಯಾಲಿ ಸಾಗುವ ದಾರಿಗಳಲ್ಲಿನ ಪೇಟೆ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಾಗುತ್ತದೆ ಹಾಗೂ ಮುಂದಿನ ಹೋರಾಟಗಳ ಬಗ್ಗೆ ಕರಪತ್ರ ಹಂಚಲಾಗುತ್ತದೆ. ಬಲ್ಯ ಶ್ರೀಉಮಾಮಹೇಶ್ವರ ದೇವಸ್ಥಾನದ ಬಳಿ ರ‍್ಯಾಲಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಿಶೋರ್ ಶಿರಾಡಿ ತಿಳಿಸಿದರು. ಈಗಾಗಲೇ ಹೋರಾಟದ ಪ್ರಮುಖ ಭಾಗವಾಗಿ ನ.೧೫ರಂದು ಕಡಬದಲ್ಲಿ ಹಕ್ಕೋತ್ತಾಯ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ರ‍್ಯಾಲಿಯಲ್ಲಿ ಆ ಬಗ್ಗೆ ಪ್ರಚಾರ ಮಾಡಲಾಗ್ತುತದೆ ಹಾಗೂ ನ.೩೦ರಂದು ಸುಬ್ರಹ್ಮಣ್ಯದಲ್ಲಿ ಹಕ್ಕೊತ್ತಾಯ ಸಭೆಯ ಸಭೆ ನಡೆಸಲಿದ್ದೇವೆ ಎಂದರು.ಸಭೆಯಲ್ಲಿ ಭಾಗವಹಿಸಿದ್ದ ರೈತರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.ರ‍್ಯಾಲಿಯ ಉಸ್ತುವಾರಿಗಳಾದ ರಮಾನಂದ ಎಣ್ಣೆಮಜಲು, ಮನೀಷ್ ಪದೇಲಾ, ಅಶೋಕ್ ಕಲ್ಲುಗುಡ್ಡೆ, ಯೊಗೀಶ್ ಬಲ್ಯ, ಪ್ರಮುಖರಾದ ಈಶ್ವರ ಗೌಡ ಅರಂಪಾಡಿ, ದಿಲೀಪ್ ಉಪ್ಪಳಿಕೆ ಸೇರಿದಂತೆ ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಅಶೋಕ್ ಮೂಲೆಮಜಲು ಸ್ವಾಗತಿಸಿದರು. ಜಯಪ್ರಕಾಶ್ ಕೂಜುಗೋಡು ವಂದಿಸಿದರು. ರಮಾನಂದ ಎಣ್ಣೆಮಜಲು ಕಾರ್ಯಕ್ರಮ ನಿರೂಪಿಸಿದರು.