ಕನ್ನಡಪ್ರಭ ವಾರ್ತೆ ನವಲಗುಂದ
ಸರ್ಕಾರಿ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಜೋಶಿ ಹಾಗೂ ಶಾಸಕ ಕೋನರಡ್ಡಿ ಆಗಮಿಸಿದ್ದರು. ಈ ವೇಳೆ ಕೇಂದ್ರ ಸಚಿವ ಜೋಶಿ ಅವರಿಗೆ ಘೇರಾವ್ ಹಾಕಿದ ರೈತ ಮುಖಂಡರು ಕಳೆದ ಹಲವಾರು ವರ್ಷಗಳಿಂದ ಮಹದಾಯಿ ಯೋಜನೆ ಅನುಷ್ಠಾನದ ಆಸೆ ತೋರಿಸಿಯೇ ಅಧಿಕಾರ ಅನುಭವಿಸಿದ್ದು ಸಾಕು. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಆರೋಪಗಳನ್ನು ಮಾಡುವುದನ್ನು ಬಿಟ್ಟು ಲೋಕಸಭೆ ಚುನಾವಣೆ ಪೂರ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದಲ್ಲಿ ರೈತರಿಂದ ನಡೆಯುವ ಹೋರಾಟ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಯೋಜನೆ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕೆಲವೊಂದು ತಾಂತ್ರಿಕ ತೊಂದರೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಬೇಕಿದ್ದು, ಇವೆಲ್ಲ ಕೆಲಸಗಳು ಎಷ್ಟು ಬೇಗನೇ ಮುಗಿಯುತ್ತವೆಯೋ ಅಷ್ಟೇ ಶೀಘ್ರ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಲಿದೆ ಎಂದು ರೈತರನ್ನು ಸಮಾಧಾನ ಪಡಿಸಿದರು.ಸಚಿವರ ಮಾತಿಗೆ ತೃಪ್ತರಾಗದ ರೈತ ಮುಖಂಡ ಶಂಕರ ಅಂಬಲಿ, ಇಷ್ಟು ವರ್ಷ ಮಹದಾಯಿ ಮೇಲೆ ಅಧಿಕಾರಿ ಅನುಭವಿಸಿದ್ದು ಸಾಕು. ಅಧಿಕಾರಸ್ಥರು ಪರಸ್ಪರ ಆರೋಪ ಬಿಟ್ಟು ಅನುಷ್ಠಾನಕ್ಕೆ ಬದ್ಧರಾಗಿ. ಇಲ್ಲವೇ ರೈತ ಹೋರಾಟಗಾರರೇ ಮಹದಾಯಿ ಯೋಜನೆ ಬಿಟ್ಟು, ಮಲಪ್ರಭಾ ಉಳಿಸಿ ಆಂದೋಲನದ ಮೂಲಕ ಮತ್ತೊಂದು ಹೋರಾಟ ಆರಂಭಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ರೈತ ಮುಖಂಡ ರಘುನಾಥ ನಡುವಿನಮನಿ ಉಪಸ್ಥಿತರಿದ್ದರು.