ಮಳೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ರೈತರು । ಕೃಷಿ ಚಟುವಟಿಕೆಗೆ ನೀರಿಲ್ಲ । ಅಂತರ್ಜಲ ಪಾತಾಳಕ್ಕೆ । ನೀರಿಗಾಗಿ ದೇವರ ಮೊರೆ
ನಂದನ್ ಪುಟ್ಟಣ್ಣಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭೀಕರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಕೊಳವೆಬಾವಿಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಅಂತರ್ಜಲ ಪಾತಾಳ ಸೇರಿರುವ ಹೊತ್ತಿನಲ್ಲಿ ೮೦೦-೯೦೦ ಅಡಿವರೆಗೆ ಕೊರೆದರೂ ಗಂಗೆ ಉಕ್ಕಿ ಬರುತ್ತಿಲ್ಲ. ಪರಿಣಾಮ ಅನ್ನದಾತರು ಸಾಲದ ಕೂಪಕ್ಕೆ ಸಿಲುಕುತ್ತಿದ್ದಾರೆ. ಕಳೆದ ವರ್ಷ ಮಳೆ ಅಭಾವ, ನೀರಿನ ಕೊರತೆ, ರಣಬಿಸಿಲಿನ ಪರಿಣಾಮ ರೈತರ ಜಮೀನುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ.
ಬೋರ್‌ವೆಲ್‌ಗಳಲ್ಲಿ ನೀರು ಸ್ಥಗಿತಗೊಂಡಿದೆ. ಇದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ರೈತರು ಹೊಸ ಬೋರ್‌ವೆಲ್‌ಗಳನ್ನು ಕೊರೆಸುತ್ತಿದ್ದಾರೆ. ಆದರೆ ಬಹುತೇಕ ಹೊಸ ಕೊಳವೆಬಾವಿಗಳಲ್ಲಿ ನೀರು ಬರುತ್ತಲೇ ಇಲ್ಲ. ಲಕ್ಷಗಟ್ಟಲೆ ಹಣ ವ್ಯಯಿಸಿ ಕೊರೆಸಿದ ಬೋರ್‌ವೆಲ್‌ಗಳಲ್ಲಿ ನೀರು ಬಾರದಿರುವುದರಿಂದ ರೈತರು ತೀವ್ರ ಹತಾಶರಾಗಿದ್ದಾರೆ. ಮನೆಯಲ್ಲಿದ್ದ ಚಿನ್ನ, ಜಮೀನು, ಓಡಾಟಕ್ಕಿದ್ದ ವಾಹನಗಳನ್ನು ಅಡವಿಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟ ಹಣವನ್ನು ತೆಗೆದು ಕೊಳವೆ ಬಾವಿ ನಿರ್ಮಿಸುತ್ತಿದ್ದಾರೆ. ಕೆಲವರು ಕೊರೆಸಿದ ಬೋರ್‌ವೆಲ್‌ಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿದ್ದು ಅದು ಕೃಷಿ ಚಟುವಟಿಕೆಗೆ ಸಾಲದಂತಾಗಿದೆ.ಇಷ್ಟ ದೇವರಿಗೆ ಮೊರೆ:
ಗ್ರಾಮೀಣ ಭಾಗದ ಬಹುತೇಕ ಜನರು ಬರಗಾಲದ ಹೊತ್ತಿನಲ್ಲಿ ಜಮೀನಿನಲ್ಲಿ ಕೊರೆಸುವ ಕೊಳವೆಬಾವಿಯಲ್ಲಿ ನೀರು ಸಿಗುವಂತೆ ಇಷ್ಟ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಕುಲದೇವರು, ಗ್ರಾಮ ದೇವತೆಗಳಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ನೀರು ಸಿಗುವ ವಿಶ್ವಾಸದೊಂದಿಗೆ ದೇವರ ಬಳಿ ಹೂ ಕೇಳುವುದು ಜನರು ರೂಢಿಸಿಕೊಂಡು ಬಂದಿರುವ ನಂಬಿಕೆಯಾಗಿದೆ. ದೇವರು ಬಲಗಡೆಯಿಂದ ಹೂ ಕೊಟ್ಟ ಕೆಲವೇ ದಿನಗಳಲ್ಲಿ ಹೊಸ ಕೊಳವೆಬಾವಿ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.ಏಕರೂಪ ದರ ನಿಗದಿ ಇಲ್ಲ:
ಕೊಳವೆಬಾವಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಏಕರೂಪವಾದ ದರ ನಿಗದಿಯಾಗಿಲ್ಲ. ಬೋರ್‌ವೆಲ್‌ಗಳ ಮಾಲೀಕರು ನಿಗದಿಪಡಿಸಿದ ದರವೇ ಅಂತಿಮ. ಕೆಲವರು ಚೌಕಾಸಿ ವ್ಯಾಪಾರಕ್ಕೂ ಇಳಿಯದೆ ಹೇಳಿದಷ್ಟು ದರ ಕೊಟ್ಟರೆ ಬೋರ್‌ವೆಲ್ ನಿರ್ಮಿಸುತ್ತೇವೆ ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಕೇಳಿದಷ್ಟು ದುಡ್ಡು ಕೊಟ್ಟು ಕೊಳವೆಬಾವಿ ನಿರ್ಮಿಸುವಂತಹ ಅನಿವಾರ್ಯತೆ ರೈತರದ್ದಾಗಿದೆ. ಜಿಲ್ಲೆಯೊಳಗೆ ಕೊಳವೆಬಾವಿಗಳ ನಿರ್ಮಾಣಕ್ಕೆ ಪರವಾನಗಿ ತೆಗೆದುಕೊಂಡಿರುವವರು ಬೆರಳೆಣಿಕೆಯಷ್ಟಿದ್ದಾರೆ.ಕೊಳವೆ ಬಾವಿ ನಿರ್ಮಾಣದಲ್ಲೂ ದಂಧೆ:
ಕೊಳವೆಬಾವಿಗಳನ್ನು ನಿರ್ಮಿಸುವುದು ಬರಗಾಲದಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ರೈತರಿಂದ ಹೆಚ್ಚು ಹಣ ವಸೂಲಿ ಮಾಡುವುದರೊಂದಿಗೆ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಸ್ಥಳೀಯವಾಗಿ ಕೊಳವೆಬಾವಿ ನಿರ್ಮಿಸುವವರ ಜೊತೆಗೆ ತಮಿಳುನಾಡಿನಿಂದಲೂ ಕೊಳವೆಬಾವಿ ನಿರ್ಮಿಸುವ ಸಾಕಷ್ಟು ಲಾರಿಗಳು ಬಂದಿವೆ. ಕೊಳವೆಬಾವಿಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಹಗಲು-ರಾತ್ರಿ ಎನ್ನದೆ ಕೊಳವೆಬಾವಿಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.ಕೊಳವೆಬಾವಿ ಮುಚ್ಚದೆ ಅನಾಹುತಕ್ಕೆ ಆಹ್ವಾನ:
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಅಧಿಕಾರಿಗಳು ತಾಲೂಕಿನಲ್ಲಿ ನೀರು ಬಾರದ ಕೊಳವೆಬಾವಿಗಳನ್ನು ಮುಚ್ಚಿಸುವಲ್ಲಿ ಕ್ರಮ ವಹಿಸುತ್ತಿಲ್ಲ.ಪಂಚಾಯಿತಿಗಳ ಮುಂದೆ ಗ್ರಾಮಸ್ಥರ ಪ್ರತಿಭಟನೆ:
ಗ್ರಾಮಗಳಲ್ಲಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುಡಿಯುವ ನೀರು ನೀಡುತ್ತಿಲ್ಲ ಎಂದು ಗ್ರಾಮಗಳ ಗ್ರಾಮಸ್ಥರು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟಿಸುವ ಪ್ರಕರಣಗಳು ವರದಿಯಾಗುತ್ತಿವೆ.ನೀರಿನ ಕೊರತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಚುನಾವಣೆ ಸಂಬಂಧ ಬಿಡುವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಕೂಡಲೇ ಜಿಲ್ಲಾಧಿಕಾರಿ ತಾಲೂಕಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.
ಮಾಳೇನಹಳ್ಳಿ ಹರೀಶ್, ಜಿಲ್ಲಾ ರೈತ ಸಂಘದ ಮುಖಂಡ.ಸಾತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರನಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್‌ನಲ್ಲಿ ನೀರಿಲ್ಲದೆ ಪಾಳು ಬಿದ್ದಿರುವುದು.