ಪ್ರತಿ ಟನ್ ಕಬ್ಬಿಗೆ ₹3500 ನಿಗದಿ ಮಾಡಲು ರೈತರ ಆಗ್ರಹ

KannadaprabhaNewsNetwork |  
Published : Nov 07, 2025, 02:30 AM IST
(6ಎನ್.ಆರ್.ಡಿ1 ರೈತರು ಕಬ್ಬಗೆ ಬೆಲೆ ಘೋಷಣಿ ಮಾಡಬೇಕೆಂದು ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ನೀಡುತ್ತಿದ್ದಾರೆ.)     | Kannada Prabha

ಸಾರಾಂಶ

ಆಧುನಿಕ ಯುಗದಲ್ಲಿ ರೈತರು ಕೃಷಿ ಮಾಡುವುದು ಬಹಳ ಕಷ್ಟವಾಗಿದೆ. ಅಂಥದ್ದರಲ್ಲಿ ರೈತರು ವರ್ಷಪೂರ್ತಿ ಕಬ್ಬು ಬೆಳೆಸಿ ಅದನ್ನು ಸಕ್ಕರೆ ಕಾರ್ಖನೆಗೆ ಮಾರಾಟ ಮಾಡಲು ಹೋದರೆ ಯೋಗ್ಯ ಬೆಲೆ ಸಿಗದೆ ತೊಂದರೆಯಲ್ಲಿದ್ದಾರೆ.

ನರಗುಂದ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ರೈತರು ಕಳೆದ ಒಂದು ವಾರದಿಂದ ಟನ್ ಕಬ್ಬಿಗೆ ₹3500 ನಿಗದಿ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಹೋರಾಟ ರಾಜ್ಯವ್ಯಾಪಿ ಹರಡುವ ಮುನ್ನ ಸರ್ಕಾರ ಕಬ್ಬಿನ ಬೆಲೆಯನ್ನು ಘೋಷಣೆ ಮಾಡಬೇಕೆಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ಆಗ್ರಹಿಸಿದರು.

ಗುರುವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ತಾಲೂಕು ರೈಲ್ವೆ ಹೋರಾಟ ಸಮಿತಿ ಆಶ್ರಯದಲ್ಲಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ರೈತರು ಕೃಷಿ ಮಾಡುವುದು ಬಹಳ ಕಷ್ಟವಾಗಿದೆ. ಅಂಥದ್ದರಲ್ಲಿ ರೈತರು ವರ್ಷಪೂರ್ತಿ ಕಬ್ಬು ಬೆಳೆಸಿ ಅದನ್ನು ಸಕ್ಕರೆ ಕಾರ್ಖನೆಗೆ ಮಾರಾಟ ಮಾಡಲು ಹೋದರೆ ಯೋಗ್ಯ ಬೆಲೆ ಸಿಗದೆ ತೊಂದರೆಯಲ್ಲಿದ್ದಾರೆ ಎಂದರು.

ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹3500 ನಿಗದಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಒಂದು ವೇಳೆ ಸರ್ಕಾರ ಶೀಘ್ರ ಕಬ್ಬಿನ ಬೆಲೆ ನಿಗದಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹರಡುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ರೈತ ಸಂಘ ಹಸಿರುಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ತಾಲೂಕಿನ ರೈತರು ಮುಂಗಾರು ಬೆಳೆಹಾನಿ ಮಾಡಿಕೊಂಡು 2 ತಿಂಗಳು ಗತಿಸಿದರೂ ಪರಿಹಾರ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಮೇಲಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಜಿಲ್ಲೆಯ ರೈತರಿಗೆ ₹91 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿ ನಾಲ್ಕೈದು ದಿನ ಗತಿಸಿದರೂ ಪರಿಹಾರ ವಿತರಿಸಿಲ್ಲವೆಂದು ಆರೋಪಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ದ್ಯಾಮಣ್ಣ ಸವದತ್ತಿ, ಶಿವಯೋಗಿ ಬೆಂಡಿಗೇರಿ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ರವಿ ಬೋಸಲೆ, ಮಂಜು ದೊಡ್ಡಮನಿ ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ