ಗಣಿಗಾರಿಕೆಗೆ ಅನುಮತಿ ನೀಡದಂತೆ ರೈತರ ಆಗ್ರಹ

KannadaprabhaNewsNetwork | Published : Oct 13, 2024 1:00 AM

ಸಾರಾಂಶ

ದಾಬಸ್‌ಪೇಟೆ: ಸರ್ಕಾರಿ ಗೋಮಾಳ ಜಮೀನಿನಲ್ಲಿ ಗಣಿಗಾರಿಕೆ ಸಂಬಂಧ ಸರ್ವೆ ಮಾಡಲು ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡಲು ಬಿಡುವುದಿಲ್ಲ ಎಂದು ವಾಪಸ್‌ ಕಳುಹಿಸಿದ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದ ಬಳಿ ನಡೆದಿದೆ.

ದಾಬಸ್‌ಪೇಟೆ: ಸರ್ಕಾರಿ ಗೋಮಾಳ ಜಮೀನಿನಲ್ಲಿ ಗಣಿಗಾರಿಕೆ ಸಂಬಂಧ ಸರ್ವೆ ಮಾಡಲು ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡಲು ಬಿಡುವುದಿಲ್ಲ ಎಂದು ವಾಪಸ್‌ ಕಳುಹಿಸಿದ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದ ಬಳಿ ನಡೆದಿದೆ.

ಕೆಂಗಲ್ ಗ್ರಾಮದ ಸರ್ವೆ ನಂ.79ರಲ್ಲಿ 47 ಎಕರೆ 20 ಗುಂಟೆ ಸರ್ಕಾರಿ ಗೋಮಾಳ ಜಮೀನಿದ್ದು, ತುಮಕೂರು ಮೂಲದ ವಿಘ್ನೇಶ್ವರ ಗ್ರಾನೈಟ್ಸ್ ಕಂಪನಿ 2 ಎಕರೆ ಜಮೀನನ್ನು ಪಿಂಕ್ ಗ್ರಾನೈಟ್ಸ್ ಕಲ್ಲು ಗಾಣಿಗಾರಿಕೆ ನಡೆಸಲು ಗುತ್ತಿಗೆಗೆ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಪ್ರದೇಶ ಸರ್ಕಾರಿ ಗೋಮಾಳ ಅಥವಾ ಪಟ್ಟಾ ಜಮೀನು ಎಂದು ಸ್ಪಷ್ಟೀಕರಣ ನೀಡಲು ಜಂಟಿ ಸರ್ವೆ ನಡೆಸಿ ಮಾಹಿತಿ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿಗಳು ವರದಿ ನೀಡಲು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಸೋಂಪುರ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಶಶಿಧರ್, ರಾಜಸ್ವ ನಿರೀಕ್ಷಕ ಸುಂದರರಾಜ್, ಗ್ರಾಮ ಲೆಕ್ಕಿಗ ಮಮತಾ ಹಾಗೂ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿ ಮೂರ್ತಿಯವರು ಸರ್ವೆ ಕಾರ್ಯ ನಡೆಸಲು ಆಗಮಿಸಿದ್ದ ವೇಳೆ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ರೈತ ಮುಖಂಡ ಗಂಗಣ್ಣ ಮಾತನಾಡಿ, ಗಣಿಗಾರಿಕೆ ನಡೆಸಲು ನಾವು ಅವಕಾಶ ನೀಡುವುದಿಲ್ಲ, ಈ ಪ್ರದೇಶದ ಪಕ್ಕದಲ್ಲೇ ಸುಮಾರು 7ಕ್ಕೂ ಹೆಚ್ಚು ಹಳ್ಳಿಗಳಿವೆ. ರೈತರು ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಅದಲ್ಲದೆ ಕಾಡುಪ್ರಾಣಿಗಳು ವಾಸಿಸುತ್ತಿರುವ ಇಂತಹ ಜಾಗದಲ್ಲಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಸರ್ವೆಗೆ ಬಂದಿರುವ ಅಧಿಕಾರಿಗಳು ವಾಸ್ತವ ಪರಿಸ್ಥಿತಿ ಅರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ತಿಳಿಸಿದರು.

ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿ ಮೂರ್ತಿ ಮಾತನಾಡಿ, ವಿಘ್ನೇಶ್ವರ ಗ್ರಾನೈಟ್ ಪಿಂಕ್ ಪಾರ್ಪರಿ ಗ್ರಾನೈಟ್ಸ್ ಕಲ್ಲು ಗಾಣಿಗಾರಿಕೆ ನಡೆಸಲು ಐದು ಎಕರೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಎರಡು ಎಕರೆ ಮಂಜೂರು ಮಾಡಲು ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸ್ಥಳ ಸರ್ವೆ ಬಂದಿದ್ದು, ರೈತರು ಇಲ್ಲಿ ಗಣಿಗಾರಿಕೆಗೆ ಆಕ್ಷೇಪಣಾ ಪತ್ರ ನೀಡಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಮತ್ತು ಸ್ಥಳದ ಬಗ್ಗೆ ವಾಸ್ತವ ಸ್ಥಿತಿಯ ವರದಿ ನೀಡುತ್ತೇವೆ ಎಂದರು.

ಉಪ ತಹಸೀಲ್ದಾರ್ ಶಶಿಧರ್ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಂಡಿದ್ದೇವೆ. ಈ ಹಿಂದೆಯೂ ಗ್ರಾಮಸ್ಥರು ಗಣಿಗಾರಿಕೆಗೆ ಅನುಮತಿ ನೀಡದಂತೆ ಮನವಿ ಪತ್ರ ನೀಡಿದ್ದಾರೆ. ಮತ್ತು ಪಕ್ಕದಲ್ಲೇ ಅರಣ್ಯ ಪ್ರದೇಶ, ಶಾಲೆ, ತೋಟ, ಕೃಷಿ ಜಮೀನಿಗಳಿದ್ದು, ಈ ಬಗ್ಗೆ ರೈತರು ನೀಡಿರುವ ಮನವಿಯನ್ನು ಸ್ವೀಕರಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತರಾದ ಸಿದ್ದರಾಜು ನಾಯ್ಕ್, ರವಿನಾಯ್ಕ್, ನಾಗರಾಜು, ಶ್ರೀನಿವಾಸ್, ಚಿಕ್ಕಣ್ಣ, ಪಾಪಣ್ಣ, ನವೀನ್, ಗಂಗಣ್ಣ, ಬೋರೆವೆಲ್ ರವಿ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ 1 :

ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದ ಬಳಿ ಗೋಮಾಳ ಸರ್ವೆ ನಡೆಸಲು ಬಂದಿದ್ದ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

Share this article