ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ಗುರುವಾರ ಜಂಟಿ ಸರ್ವೆ ಕಾರ್ಯಕ್ಕೆ ಆಗಮಿಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ರೈತರು ಹಾಗೂ ರೈತ ಮಹಿಳೆಯರು ಮಾತಿನ ಚಕಮಕಿ ನಡೆಸಿದ ಘಟನೆ ಜರುಗಿದೆ.
ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಪ್ಪನದೊಡ್ಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾದರು. ಈ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ನೂರಾರು ರೈತರು ಪ್ರತಿರೋಧವೊಡ್ಡಿದರು.ಪೊಲೀಸರು ರೈತರನ್ನು ನಿಯಂತ್ರಿಸಿದರೆ, ಅಧಿಕಾರಿಗಳನ್ನು ಸರ್ವೆ ಕಾರ್ಯಕ್ಕೆ ಮುಂದಾದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಪೊಲೀಸರು ಮತ್ತು ಅಧಿಕಾರಿಗಳನ್ನು ತಡೆದು ನಿಲ್ಲಿಸಿದರು. ಇದರಿಂದ ತಳ್ಳಾಟ ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಕಣ್ಣೀರಿಟ್ಟ ರೈತ ಮಹಿಳೆಯರು :ಪ್ರಾಧಿಕಾರದ ಸಹಾಯಕ ಆಯುಕ್ತರಾದ ಮಾರುತಿ ಪ್ರಸನ್ನ ಹಾಗೂ ಬಿಡದಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಂಕರ್ ನಾಯಕ್ ರವರು ರೈತರ ಮನವೊಲಿಸಲು ಪ್ರಯತ್ನಿಸಿದರು. ಇದರಿಂದ ತೃಪ್ತರಾಗದ ರೈತರು ಇಬ್ಬರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಅಲ್ಲದೆ, ಭೂ ಮಾಲೀಕರಾದ ರೈತರು ಮತ್ತು ರೈತ ಮಹಿಳೆಯರು ಮಾರುತಿ ಪ್ರಸನ್ನರವರ ಕಾಲು ಹಿಡಿದು ಭೂಮಿ ಕಸಿದುಕೊಳ್ಳದಂತೆ ಅಂಗಲಾಚಿ ಕಣ್ಣೀರಿಟ್ಟರು. ಮತ್ತೊಂದೆಡೆ ಪೊಲೀಸರು ರೈತರು ಗುಂಪು ಗೂಡದಂತೆ ಚದುರಿಸುವ ಪ್ರಯತ್ನ ನಡೆಸಿದರು. ಇದರಿಂದ ದೃತಿಗೆಡದ ರೈತರು ಸ್ಥಳದಲ್ಲಿದ್ದು ಪ್ರತಿಭಟನೆ ಮುಂದುವರೆಸಿದರು.ಪೊಲೀಸ್ ಮತ್ತು ಗುಂಡಾಗಳ ಬಲ ಪ್ರಯೋಗ :
ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ನಮಗೆ ಇಷ್ಟವಿಲ್ಲ. ತುಂಡು ಭೂಮಿಯಲ್ಲಿಯೇ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಯಾವ ಕಾರಣಕ್ಕೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ. ಪ್ರಾಧಿಕಾರವು ಪೊಲೀಸರು ಹಾಗೂ ಬಾಡಿಗೆ ಗುಂಡಾಗಳನ್ನು ಕರೆತಂದು ನಮ್ಮನ್ನು ಹೆದರಿಸಿ ಫಲವತ್ತಾದ ಭೂಮಿಯನ್ನು ಕಬಳಿಸಲು ಮುಂದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಜಮೀನಿನ ಮಾಲೀಕರಾದ ನಮಗೆ ನೋಟಿಸ್ ಅನ್ನೇ ನೀಡಿಲ್ಲ. ನಾವುಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳಿಗೆ ಸರಿಯಾದ ಉತ್ತರವನ್ನು ಕೊಟ್ಟಿಲ್ಲ. ಬೆಂಗಳೂರಿನಲ್ಲಿರುವ ಎಸ್ಟೇಟ್ ಮಾಲೀಕರನ್ನು ತೋರಿಸಿ, ಅವರುಗಳೇ ಜಮೀನಿನ ಮಾಲೀಕರೆಂದು ಸುಳ್ಳು ಹೇಳಿ ಸರ್ವೆ ಕಾರ್ಯ ಮಾಡುತ್ತಿದ್ದಾರೆ. ನಮ್ಮ ಪ್ರಾಣ ಹೋದರು ಪರವಾಗಿಲ್ಲ. ತುಂಡು ಭೂಮಿಯನ್ನು ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಭೂ ಸ್ವಾಧೀನ ವಿರೋಧಿಸಿ ಇಲ್ಲಿವರೆಗೆ 2700 ಆಕ್ಷೇಪಣ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಆರ್ಥಿಕವಾಗಿ ಸಬಲರಾಗಿರುವ ರೈತರಿಗೆ ಭೂ ಪರಿಹಾರ ಬೇಕಾಗಿಲ್ಲ. ಅವರೆಲ್ಲರು 20 - 30 ಎಕರೆ ಜಮೀನುದಾರರಾಗಿದ್ದು, ಪಾಲುದಾರಿಕೆ ಕೇಳುತ್ತಿದ್ದಾರೆ. ನಾವು ಅರ್ಧ, ಮುಕ್ಕಾಲು ಎಕರೆ ಭೂಮಿ ಉಳ್ಳವರು. ಈ ಭೂ ತಾಯಿಯನ್ನು ಬಿಟ್ಟರೆ ನಮಗೆ ಜೀವನ ನಡೆಸಲು ಬೇರೆ ದಾರಿಯೇ ಇಲ್ಲ ಎಂದು ರೈತರು ನೊಂದು ನುಡಿದರು.ಒಂದೆಡೆ ರೈತ ಮಹಿಳೆಯರ ಕಣ್ಣೀರು, ಮತ್ತೊಂದೆಡೆ ರೈತರ ಆಕ್ರೋಶದ ನಡುವೆಯೂ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರ ಬಂದೋಬಸ್ತಿನಲ್ಲಿ ಸರ್ವೆ ಕಾರ್ಯ ನಡೆಸಿದರು.
ಬಾಕ್ಸ್ ...............ಅನಿರ್ಧಿಷ್ಟಾವಧಿ ಚಳವಳಿ :
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ನಾಳೆ (ಸೆ.12)ಯಿಂದ ಬೈರಮಂಗಲ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಚಳವಳಿ ನಡೆಸಲು ಭೂ ಮಾಲೀಕರಾದ ರೈತರು ತೀರ್ಮಾನಿಸಿದ್ದಾರೆ.ಪ್ರಾಧಿಕಾರ ನೋಟಿಫಿಕೇಷನ್ ಹೊರಡಿಸಿದ ನಂತರ 2700 ರೈತರು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಲ್ಲಿವರೆಗೆ ಒಂದೇ ಒಂದು ಆಕ್ಷೇಪಣಾ ಅರ್ಜಿಗೆ ಉತ್ತರ ನೀಡಿಲ್ಲ. ಅಲ್ಲದೆ, ಭೂಮಿ ಕೊಡಲು ನಿರಾಕರಿಸುವ ರೈತನಿಗೆ ಆಮಿಷವೊಡ್ಡುವ ಹಾಗೂ ಚಳವಳಿ ಭಾಗಿಯಾಗುವ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಹುನ್ನಾರ ನಡೆಯುತ್ತಿದೆ.
ನಾಳೆಯಿಂದ ಆರಂಭವಾಗಲಿರುವ ಅನಿರ್ಧಿಷ್ಟಾವಧಿ ಚಳವಳಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.11ಕೆಆರ್ ಎಂಎನ್ 4,5.ಜೆಪಿಜಿ
4.ರೈತ ಮಹಿಳೆ ಪ್ರಾಧಿಕಾರದ ಸಹಾಯಕ ಆಯುಕ್ತ ಮಾರುತಿ ಪ್ರಸನ್ನರವರ ಕಾಲಿಗೆ ಬೀಳುತ್ತಿರುವುದು.5.ವೃತ್ತ ನಿರೀಕ್ಷಕ ಶಂಕರ್ ನಾಯಕ್ ಅವರೊಂದಿಗೆ ರೈತರು ಮಾತಿನ ಚಕಮಕಿ ನಡೆಸುತ್ತಿರುವುದು.