ಕೊಬ್ಬರಿ ಖರೀದಿ ನೋಂದಣಿಗೆ ಬರುತ್ತಿರುವ ಬೇರೆ ತಾಲೂಕಿನ ರೈತರು

KannadaprabhaNewsNetwork | Published : Mar 7, 2024 1:51 AM

ಸಾರಾಂಶ

ಕೊಬರಿ ಮಾರಾಟ ನೋಂದಣಿಗಾಗಿ ತಾಲೂಕಿನ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಬೇರೆ ತಾಲೂಕಿ ರೈತರನ್ನು ವಾಹನಗಳಲ್ಲಿ ಕರೆ ತಂದು ಸರತಿ ಸಾಲಿನಲ್ಲಿ ನಿಲ್ಲಿಸಿ ಇಲ್ಲಿಯ ರೈತಾಪಿಗಳಿಗೆ ತೊಂದರೆಯುಂಟು ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದು ಇಲ್ಲಿಯ ರೈತಾಪಿಗಳ ಆತಂಕಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೊಬರಿ ಮಾರಾಟ ನೋಂದಣಿಗಾಗಿ ತಾಲೂಕಿನ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಬೇರೆ ತಾಲೂಕಿ ರೈತರನ್ನು ವಾಹನಗಳಲ್ಲಿ ಕರೆ ತಂದು ಸರತಿ ಸಾಲಿನಲ್ಲಿ ನಿಲ್ಲಿಸಿ ಇಲ್ಲಿಯ ರೈತಾಪಿಗಳಿಗೆ ತೊಂದರೆಯುಂಟು ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದು ಇಲ್ಲಿಯ ರೈತಾಪಿಗಳ ಆತಂಕಕ್ಕೆ ಕಾರಣವಾಗಿದೆ. ದಂಡಿನಶಿವರ, ಕಸಬಾ, ಮಾಯಸಂದ್ರ ಮಾರಾಟ ಕೇಂದ್ರಗಳಿಗೆ ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರುಗಳು ಆಗಮಿಸುತ್ತಿದ್ದಾರೆ. ಇದೂ ಸಾಲದಕ್ಕೆ ಬೇರೆ ತಾಲೂಕುಗಳ ದಳ್ಳಾಳಿಗಳು ರಾತ್ರಿ ವೇಳೆ ವಾಹನಗಳಲ್ಲಿ ಮಹಿಳೆಯರು ಮತ್ತು ಪುರುಷರ ಗುಂಪುಗಳನ್ನಾಗಿ ಮಾಡಿ ತಂದು ಬಿಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಾವೇನು ರೈತರಲ್ಲವೇ ಎಂದು ಸ್ಥಳೀಯ ರೈತರ ವಿರುದ್ಧ ಜಗಳಕ್ಕೆ ಬರುತ್ತಾರೆಂದು ದಂಡಿನಶಿವರದ ರೈತ ದಯಾನಂದ್ ಆರೋಪಿಸಿದ್ದಾರೆ..

ತಾಲೂಕಿನಲ್ಲೇ ದಂಡಿನಶಿವರ ಹೋಬಳಿ ಅತಿ ಹೆಚ್ಚು ರೈತರು ತೆಂಗು ಬೆಳೆಯುತ್ತಾರೆ. ಬೇರೆಯವರು ಇಲ್ಲಿಗೆ ಬಂದರೆ ಇಲ್ಲಿನ ರೈತರಿಗೆ ಕೊಬ್ಬರಿ ಮಾರುವ ಅವಕಾಶ ಕೈತಪ್ಪಿದಂತಾಗುತ್ತದೆ. ಆದ್ದರಿಂದ ಮೊದಲು ಸ್ಥಳೀಯರಿಗೆ ಟೋಕನ್ ನೀಡಿ, ನಂತರ ಹೊರಗಿನವರಿಗೆ ಕೊಡಲಿ. ಈ ಬಗ್ಗೆ ಪೊಲೀಸರು, ಅಧಿಕಾರಿಗಳು ಮತ್ತು ತಹಸೀಲ್ದಾರ್‌ ಕ್ರಮ ವಹಿಸಬೇಕೆಂದು ಎಪಿಎಂಸಿ ಮಾಜಿ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್ ಆಗ್ರಹಿಸಿದ್ದಾರೆ.

ಬುಧವಾರ ಬೆಳಗ್ಗೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಶಾಸಕ ಎಂ.ಟಿ.ಕೃಷ್ಣಪ್ಪ ಇಲ್ಲಿನ ಎಪಿಎಂಸಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸಿ ಮಹಿಳೆಯರಿಗೆ, ವೃದ್ಧರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಸಿದರು. ಮಾರ್ಚ್ ೮, ೯ ಮತ್ತು ೧೦ ರಂದು ಸಾರ್ವತ್ರಿಕ ಸರ್ಕಾರಿ ರಜೆ ಇದ್ದರೂ ಕೂಡ ಉಂಡೆ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಗೆ ಯಾವುದೇ ರಜೆ ಇರುವುದಿಲ್ಲ. ಎಂದಿನಂತೆ ಎಲ್ಲ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸಲಿದೆ. ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ, ಶಾಂತಚಿತ್ತರಾಗಿ ನೋಂದಣಿ ಮಾಡಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್ ರೈತಾಪಿಗಳಲ್ಲಿ ಮನವಿ ಮಾಡಿದ್ದಾರೆ.

Share this article