ಓಂಕಾರದಲ್ಲಿ ಕಾಡಾನೆ ಹಾವಳಿಗೆ ಹೈರಾಣಾದ ರೈತರು

KannadaprabhaNewsNetwork | Published : Mar 16, 2025 1:51 AM

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ದಂಚಿನಲ್ಲಿ ಕಾಡಾನೆಗಳ ಹಾವಳಿಗೆ ಮಿತಿ ಮೀರಿದ್ದು, ಮಂಚಹಳ್ಳಿ, ಆಲತ್ತೂರಲ್ಲಿ ಕಾಡಾನೆ ದಾಳಿಗೆ ರೈತರು ಫಸಲು ನಾಶವಾಗುತ್ತಿದೆ. ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ದಂಚಿನಲ್ಲಿ ಕಾಡಾನೆಗಳ ಹಾವಳಿಗೆ ಮಿತಿ ಮೀರಿದ್ದು, ಮಂಚಹಳ್ಳಿ, ಆಲತ್ತೂರಲ್ಲಿ ಕಾಡಾನೆ ದಾಳಿಗೆ ರೈತರು ಫಸಲು ನಾಶವಾಗುತ್ತಿದೆ. ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಾಡಾನೆ ಬಂದು ರೈತರ ಫಸಲು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡುವುದಕ್ಕೆ ಸೀಮಿತವಾಗಿದೆ. ಬೆಳೆ ಪರಿಹಾರ ಕೂಡ ತುರ್ತಾಗಿ ಕೊಡುತ್ತಿಲ್ಲ. ಮಂಚಹಳ್ಳೀಲಿ ಇತ್ತೀಚೆಗೆ ರಾತ್ರಿ ವೇಳೆ ಗ್ರಾಮದ ಮಹದೇವೇಗೌಡರಿಗೆ ಸೇರಿದ ಜಮೀನಿಗೆ ಕಾಡಾನೆ ದಾಳಿ ಮಾಡಿ ಸೋಲಾರ್‌ ತಂತಿ ತುಳಿದು ಮುರಿದು ಹಾಕಿವೆ. ಸುಮಾರು ೩.೪ ಎಕರೆಯಷ್ಟು ಪ್ರದೇಶದ ಟೊಮೆಟೋ ಫಸಲು ತುಳಿದಿದ್ದು ಅಲ್ಲದೆ ತೆಂಗಿನ ಸಸಿಗಳನ್ನು ಮುರಿದು ಹಾಕಿವೆ ಎಂದು ರೈತರು ತಿಳಿಸಿದ್ದಾರೆ.

ಮೂರು ಬಾರಿ ದಾಳಿ:

ರೈತ ಮಹದೇವೇಗೌಡ ಜಮೀನಿಗೆ ಕಳೆದೆರಡು ತಿಂಗಳಿನಿಂದ ಕಾಡಾನೆಗಳು ಮೂರು ಬಾರಿಗೆ ದಾಳಿ ಮಾಡಿ ಫಸಲು ನಾಶ ಪಡಿಸಿ ಹೋಗಿವೆ. ಆದರೆ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯಲು ಮಾತ್ರ ಕಾಳಜಿ ವಹಿಸುತ್ತಿಲ್ಲ ಎಂದು ರೈತರ ಆರೋಪ. ರೈತರು ಕೂಡ ಕಾಡಾನೆಗಳ ಜಮೀನಿಗೆ ಬರದಂತೆ ಕಾವಲು ಕಾಯುತ್ತಿದ್ದಾರೆ. ಅರಣ್ಯ ಇಲಾಖೆ ರಾತ್ರಿ ಗಸ್ತು ಒಂದು ಜೀಪಲ್ಲಿ ಬಂದು ಸುತ್ತಾಡಿ ಹೋಗುತ್ತಾರೆ. ಗಸ್ತಿನ ವಾಹನ ಹೋದ ಬಳಿಕ ಆನೆ ಬರುತ್ತಿವೆ ಎನ್ನಲಾಗಿದೆ.

ಆಲತ್ತೂರು ಗ್ರಾಮದ ಸಣ್ಣಮ್ಮಗೆ ಸೇರಿದ ತೋಟಕ್ಕೆ ಇತ್ತೀಚೆಗೆ ಕಾಡಾನೆಗಳು ದಾಳಿ ನಡೆಸಿ ತಂಗಿನ ಸಸಿ ಬುಡ ಸಮೇತ ಕಿತ್ತು ಹಾಕಿವೆ. ಇಲ್ಲೂ ಅಷ್ಟೆ ಅರಣ್ಯ ಇಲಾಖೆ ಸಿಬ್ಬಂದಿ ಬರೋದು ಮಹಜರು ನಡೆಸೋದು ಪರಿಹಾರ ಕೊಡ್ತೇವೆ ಎಂದು ಹೇಳಿ ಹೋಗೋದು ಅರಣ್ಯ ಇಲಾಖೆಯ ಕಾಯಂ ಕೆಲಸವಾಗಿದೆ ಎಂದು ಮಂಚಹಳ್ಳಿ ಗ್ರಾಮದ ರೈತ ಬೆಟ್ಟೇಗೌಡ ಹೇಳಿದ್ದಾರೆ.

ರಾತ್ರಿ ಗಸ್ತು ಹೆಚ್ಚಿಸಲಿ:

ಕಾಡಾನೆಗಳ ದಾಳಿಗೆ ರೈತರ ಫಸಲು ನಾಶವಾಗಿದೆ. ಅರಣ್ಯ ಇಲಾಖೆ ಕೊಡುವ ಪರಿಹಾರ ಬೇಡ, ಕಾಡಾನೆ ಬರದಂತೆ ತಡೆಯುವ ಕೆಲಸ ಮಾಡಲಿ. ಅದನ್ನು ಬಿಟ್ಟು ಕಾಟಾಚಾರಕ್ಕೆ ರಾತ್ರಿ ಗಸ್ತು ಮಾಡುವ ಬದಲು ಕಾಳಜಿಯಿಂದ ರಾತ್ರಿ ಗಸ್ತು ನಡೆಸಲಿ ಎಂದು ಅರಣ್ಯ ಇಲಾಖೆಗೆ ರೈತ ಬೆಟ್ಟೇಗೌಡ ಸಲಹೆ ನೀಡಿದ್ದಾರೆ.

ಸರ್ಕಾರ ವೈಜ್ಞಾನಿಕ ಪರಿಹಾರ ನೀಡಲಿ

ಒಂದು ಸಾವಿರ, ಎರಡು ಸಾವಿರ ಪರಿಹಾರ ಕೊಡ್ತಾರೆ, ಪರಿಹಾರ ವೈಜ್ಞಾನಿಕವಾಗಿಲ್ಲ. ಹಳೆಯ ಕಾಲದ ಮಾನದಂಡ ಪ್ರಕಾರ ಪರಿಹಾರದ ಬದಲು ವೈಜ್ಞಾನಿಕ ಪರಿಹಾರ ರಾಜ್ಯ ಸರ್ಕಾರ ನೀಡಬೇಕು. ಅರಣ್ಯ ಇಲಾಖೆ ರಾತ್ರಿ ಗಸ್ತು ನಿರಂತರವಾಗಿ ಮಾಡಬೇಕು ಎಂದು ಪದೇ ಪದೆ ಅರಣ್ಯ ಇಲಾಖೆಗೆ ಮನವಿ ಮಾಡುತ್ತಿದ್ದೇವೆ. ಆದರೆ ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಾಡಾನೆ ದಾಳಿಗೆ ರೈತರು ಪ್ರಾಣ ಕಳೆದುಕೊಂಡು ಅರಣ್ಯ ಇಲಾಖೆ ಜವಾಬ್ದಾರಿ ಹೊರ ಬೇಕಾಗುತ್ತದೆ ಎಂದು ರೈತ ಬೆಟ್ಟೇಗೌಡ ಹೇಳಿದರು.ಓಂಕಾರ ವಲಯದಲ್ಲಿ ೮ಕಿಮೀ ರೈಲ್ವೆ ಬ್ಯಾರಿಕೇಡ್‌ಗೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಈ ಆರ್ಥಿಕ ವರ್ಷದಲ್ಲೇ ಕರೆಯಲು ಎಲ್ಲಾ ಕ್ರಮ ವಹಿಸಲಾಗಿದೆ. ೮ ಕಿಮೀ ಬ್ಯಾರಿಕೇಡ್‌ ಆದರೆ ಕಾಡಾನೆಗಳ ಹಾವಳಿಗೆ ಸ್ವಲ್ಪ ಬ್ರೇಕ್‌ ಬೀಳಲಿದೆ.

-ಸುರೇಶ್‌, ಎಸಿಎಫ್‌

Share this article