ಡಿಸಿ ಕಚೇರಿಗೆ ರೈತರ ನುಗ್ಗಲೆತ್ನ: ನೂಕಾಟ, ತಳ್ಳಾಟ

KannadaprabhaNewsNetwork | Published : Apr 3, 2024 1:36 AM

ಸಾರಾಂಶ

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಸಾಲಮನ್ನಾ ಮಾಡುವುದು ಹಾಗೂ ಸಾಲವಸೂಲಾತಿ ಮಾಡುವುದನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ರೈತರು ನಡೆಸುತ್ತಿದ್ದ ಪ್ರತಿಭಟನೆ ಅತಿರೇಕಕ್ಕೆ ಹೋಯಿತು. ಅಲ್ಲದೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯ ನೂಕಾಟ, ತಳ್ಳಾಟ ಕೂಡ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಸಾಲಮನ್ನಾ ಮಾಡುವುದು ಹಾಗೂ ಸಾಲವಸೂಲಾತಿ ಮಾಡುವುದನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ರೈತರು ನಡೆಸುತ್ತಿದ್ದ ಪ್ರತಿಭಟನೆ ಅತಿರೇಕಕ್ಕೆ ಹೋಯಿತು. ಅಲ್ಲದೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯ ನೂಕಾಟ, ತಳ್ಳಾಟ ಕೂಡ ನಡೆಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಜಮಾಯಿಸಿ ಕೆಲ ಸಮಯ ಧರಣಿ ನಡೆಸಿದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯತ್ತ ಪ್ರತಿಭಟನಾ ರ್‍ಯಾಲಿ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ಸಂಹಿತೆ ಜಾರಿಯಲ್ಲಿರುವುದರಿಂದ ಪೊಲೀಸರು ಗೇಟ್‌ ಬಂದ್‌ ಮಾಡಿದ್ದರು. ಇದರಿಂದಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಕೆಲ ಸಮಯ ಗೇಟ್‌ನಲ್ಲಿ ನಿಂತಿದ್ದ ಪ್ರತಿಭಟನಾಕಾರರ ಸಹನೆಯ ಕಟ್ಟೆ ಒಡೆಯಿತು. ನಂತರ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾಕಾರರು ಗೇಟ್‌ ಹತ್ತಿ ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಡೆಯಲು ಹೋದ ಪೊಲೀಸರನ್ನು ಪ್ರತಿಭಟನಾಕಾರರು ತಳ್ಳಿದರು. ಪೊಲೀಸ್‌ ಇನ್‌ಸ್ಪೆಕ್ಟರ್‌ನನ್ನು ಎತ್ತಿ ಕೆಳಗೆ ಎಸೆದರು. ಇದರಿಂದ ಪೊಲೀಸರು ಪ್ರತಿಭಟನೆ ದಾರಿ ತಪ್ಪುತ್ತಿರುವುದನ್ನು ಅರಿತು, ರೈತರನ್ನು ತಡೆಯಲು ಹರಸಾಹಸಪಟ್ಟರು. ಬಳಿಕ ರೈತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಮತ್ತು ನಿಂದನೆ ನಡೆದವು.

ಇದರಿಂದ ಕಂಗೆಟ್ಟ ಖಾಕಿ ಪಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ನೂಕಾಟ, ತಳ್ಳಾಟ ನಡೆಸಿದರು. ನಂತರ ಕೆಲವು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಸ್ತೆಯತ್ತ ತೆರಳಿ ಪ್ರತಿಭಟನೆ ನಡೆಸಲು ಆರಂಭಿಸಿದರು. ಇನ್ನೂ ಕೆಲವು ಜಿಲ್ಲಾಧಿಕಾರಿ ಕಚೇರಿ ಗೇಟ್‌ ಹಾರಿ ಆವರಣದೊಳಗೆ ನುಗ್ಗಿದರು. ಇದಾದ ಬಳಿಕ ಪ್ರತಿಭಟನಾರರ ಮನವಿ ಆಲಿಸಲು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಆಗಮಿಸಿದರು. ಸುಡುವ ಬಿಸಿಲಿನಲ್ಲಿ ಪ್ರತಿಭಟನೆ ನಡೆದ ರೈತರು ತಾಳ್ಮೆ ಕಳೆದುಕೊಂಡಿದ್ದರಿಂದ ಕೆಲ ಸಮಯ ಜಿಲ್ಲಾಧಿಕಾರಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರತಿಭಟನಾಕಾರರ ಮನವೊಲಿಸಿ ಸಮಸ್ಯೆ ಆಲಿಸಿದರು.

ಈ ವೇಳೆ ಮಾತನಾಡಿದ ವಿವಿಧ ರೈತ ಮುಖಂಡರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ರೈತರಿಗೆ ಬರ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡುತ್ತಿರುವ ಧೋರಣೆ ಸರಿಯಲ್ಲ. ರಾಜ್ಯದಲ್ಲಿ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಹಾರ ಕೊಡಬೇಕು. ಕೇಂದ್ರದಿಂದ ಬರ ಪರಿಹಾರ ಒಂದು ಎಕರೆಗೆ ₹50 ಸಾವಿರ ನಿಗದಿಗೊಳಿಸಿ, ರಾಜ್ಯ ಸರ್ಕಾರ ₹30 ಸಾವಿರ ಹಣ ಬಿಡುಗಡೆ ಮಾಡಬೇಕು. ಬರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಬರ ಪರಿಹಾರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ, ಹಣಕಾಸು ಸಂಸ್ಥೆಗಳಿಂದ ಸಾಲ ವಸೂಲಾತಿ ಮಾಡುತ್ತಿದ್ದಾರೆ. ಅಲ್ಲದೇ ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ನ್ಯಾಯಾಲಯದ ಮೊರೆ ಹೋಗಿ ಆಸ್ತಿ ಮುಟ್ಟುಗೋಲು ಹಾಕುವ ಬೆದರಿಕೆ ಹಾಕುವುದರ ಜತೆಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ. ಸಾಲ ವಸೂಲಾತಿ ಮಾಡದಂತೆ ಜಿಲ್ಲಾಡಳಿತ ಈಗಾಗಲೇ ಎಲ್ಲ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದರೂ ಆದೇಶ ಪತ್ರ ತೋರಿಸುವಂತೆ ಹೇಳುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಸಾಲ ವಸೂಲಾತಿ ಮಾಡದಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ಹಣ ಇಲ್ಲದೇ ರೈತರ ಕೆಲಸಗಳು ಆಗುತ್ತಿಲ್ಲ. ಚಿಕ್ಕೋಡಿ ಉಪವಿಭಾಗ ಕಚೇರಿಯಲ್ಲಿ ಲಕ್ಷಗಟ್ಟಲೇ ಹಣ ನೀಡಿದರೆ ಮಾತ್ರ ಕೆಲಸಗಳು ಆಗುತ್ತಿವೆ. ಸಮರ್ಪಕ ವಿದ್ಯುತ್‌ ಪೂರೈಕೆ, ಜಾನುವಾರುಗಳಿಗೆ ಹಸಿ ಹಾಗೂ ಒಣ ಮೇವು, ಜನ, ಜಾನುವಾರುಗಳಿಗೆ ಕುಡಿಯುವ ನೀರು ಕೊರತೆಯಾಗದಂತೆ ತ್ವರಿತ ಕ್ರಮಕೈಗೊಳ್ಳಬೇಕು. ಘಟಪ್ರಭಾ ಎಡದಂಡೆ ಕಾಲುವೆಗೆ ತಕ್ಷಣವೇ ನೀರು ಹರಿಸುವುದು, ಸಾಲಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ರೈತರ ಮನವಿ ಸ್ವೀಕರಿಸಿ ಮಾತನಾಡಿ, ತಹಸೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಣ ಪಡೆದ ಹಾಗೂ ಕೇಳುವವರ ಕುರಿತು ಮಾಹಿತಿ ನೀಡಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಮೇವು, ನೀರಿನ ಕೊರತೆಯಾಗದಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್‌ ಪೂರೈಕೆ ಕುರಿತು ಅಧಿಕಾರಿಗಳಿಗೆ ತಿಳಿಸಲಾಗುವುದು. ಒತ್ತಾಯದ ಸಾಲ ವಸೂಲಾತಿ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಒಂದು ವೇಳೆ ವಸೂಲಿಗೆ ಮುಂದಾಗುವವರ ಕುರಿತು ಮಾಹಿತಿ ನೀಡಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ , ಪ್ರಕಾಶ ನಾಯಕ, ಶ್ರೀಕಾಂತ ಶಿರಹಟ್ಟಿ, ವಿವಿಧ ಮಠಾಧೀಶರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Share this article