ಕನ್ನಡಪ್ರಭ ವಾರ್ತೆ ಶಹಾಪುರ
ಬೆಳೆದು ನಿಂತ ಮೆಣಸಿನಕಾಯಿ ಬೆಳೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಿಂದ ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ರೈತರು ಪ್ರತಿ ಎಕರೆಗೆ ಮೆಣಸಿನಕಾಯಿ ಬೆಳೆಗೆ 1.80 ಲಕ್ಷ ರು.ಗಳ ಖರ್ಚು ಮಾಡಿ ಬೆಳೆದಿರುವ ಬೆಳೆ ರೈತರಿಗೆ ಕೈ ಸೇರದಿದ್ದರೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಸಾಲದಿಂದ ಚೇತರಿಸಿಕೊಳ್ಳಲಾಗದೆ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾರಾಯಣಪುರ ಡ್ಯಾಮಿನಲ್ಲಿ 56 ಟಿಎಂಸಿ ನೀರು ಇದ್ದು, 40 ಟಿಎಂಸಿ ಕುಡಿಯಲು, 10 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿದಿರುವ ಆರು ಟಿಎಂಸಿ ನೀರನ್ನು ರೈತರಿಗೆ ನೀರು ಬಿಟ್ಟರೆ ರೈತ ಸಾಲದಿಂದ ಮುಕ್ತನಾಗುತ್ತಾನೆ. ಇಲ್ಲದೆ ಹೋದರೆ ರೈತರ ಸ್ಥಿತಿ ಚಿಂತ ಜನಕ ವಾಗುತ್ತದೆ ಎಂದು ಪರಿಸ್ಥಿತಿ ಅರುಹಿದರು.ಸಚಿವರ ಭರವಸೆ: ರೈತರ ಮನವಿಯನ್ನ ಸ್ವೀಕರಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ರೈತರ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಬೋರ್ಡ್ ಮೀಟಿಂಗ್ ನಲ್ಲಿ ವಿಷಯವನ್ನು ಪ್ರಸ್ತಾಪಿಸುವ ಮೂಲಕ ರೈತರ ಜಮೀನಿಗೆ ನೀರು ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ರೈತ ಮುಖಂಡರಿಗೆ ಸಚಿವರು ಭರವಸೆ ನೀಡಿದ್ದಾರೆಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಸಾಗರ್, ರಾಮಯ್ಯ ಬೋವಿ ಮಾತನಾಡಿದರು. ಧರ್ಮಣ್ಣ ದೊರೆ, ಭೀಮಣ್ಣ, ಭೀಮರಾಯ ಪೂಜಾರಿ, ತಮ್ಮಣ್ಣ ಜಾಗೀರ್ದಾರ್, ಹೊನ್ನಪ್ಪ ಮಾನ್ಪಡೆ, ಮಲ್ಲಿಕಾರ್ಜುನ್, ಹೊನ್ನಪ್ಪ ಟೋಕಪುರ್, ರೈತರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.