ಕನ್ನಡಪ್ರಭ ವಾರ್ತೆ ತಿಪಟೂರು
ದಿ. ೩ರ ಸೋಮವಾರದಂದು ಎಪಿಎಂಸಿ ಒಳಗಡೆ ರಾಗಿ ಖರೀದಿಗಾಗಿ ರಾಗಿ ರಾಶಿಗೆ ಪೂಜೆ ಮಾಡಿದ ಅಧಿಕಾರಿಗಳು, ಮಂಗಳವಾರ ಹಮಾಲರ ನಡುವೆ ನಡೆದ ಗಲಾಟೆಯಿಂದ ರಾಗಿ ಖರೀದಿ ನಿಂತು ಹೋಗಿತ್ತು. ಮತ್ತೆ ಬುಧವಾರ ಎಪಿಎಂಸಿಯಿಂದ ಹೊರಗಡೆ ಅಂದರೆ, ದೂರದ ಬಂಡಿಹಳ್ಳಿ ಸಮೀಪದ ಗೋಡನ್‌ನಲ್ಲಿ ತಿಂಗಳಿಗೆ 50ಸಾವಿರ ರು. ಬಾಡಿಗೆ ನೀಡಿ ರಾಗಿ ಖರೀದಿ ಪ್ರಾರಂಭಿಸಿದ್ದಾರೆ. ಸ್ಥಳದ ಬಗ್ಗೆ ಮಾಹಿತಿ ಇಲ್ಲದ ರೈತರು ಎಪಿಎಂಸಿ ಬಳಿ ಬಂದು ಹೋಗುತ್ತಿದ್ದಾರೆ. ರೈತರು ರಾಗಿ ಚೀಲಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತರುವುದರಿಂದ ಇಲ್ಲಿ ನಿಲ್ಲಿಸಲು ಸ್ಥಳದ ಅಭಾವವಿದೆ. ಅಲ್ಲದೆ ರಾಗಿ ತಂದ ದಿನವೇ ರಾಗಿ ಖರೀದಿಸಿದರೆ ಸರಿ. ಇಲ್ಲವಾದಲ್ಲಿ ರೈತರು ತಮ್ಮ ಮಾಲಿನೊಂದಿಗೆ ಬೀದಿಯಲ್ಲಿ ಕಾರ್ಗತ್ತಲಿನಲ್ಲಿ ಮಲಗುವ ಸ್ಥಿತಿ ಬಂದೊದಗಿದೆ. ನಿಗಮದವರು ಯಾವುದೇ ಸಿದ್ಧತೆ ಇಲ್ಲದೆ ಏಕಾಏಕಿ ಖರೀದಿ ಪ್ರಾರಂಭ ಮಾಡಿದ್ದು ಇಲ್ಲಿ ಯಾವ ರೈತರು ಯಾವಾಗ ರಾಗಿಯನ್ನು ತರಬೇಕು ಎಂಬುದರ ಜೇಷ್ಠತಾ ಪಟ್ಟಿಯನ್ನು ಸಹ ಪ್ರಕಟಿಸಿಲ್ಲ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗುತ್ತಿದ್ದು ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮವಹಿಸಬೇಕಿದೆ. ತಾಲೂಕಿನಲ್ಲಿ ಒಟ್ಟು 9454 ರೈತರು ಹೆಸರು ನೋಂದಾಯಿಸಿಕೊಂಡಿದ್ದು, 1,39,776ಸಾವಿರ ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೊಂದಣಿಯಾಗಿದೆ.ಕೋಟ್ 1 ಹಮಾಲಿಗರ ನಡುವಿನ ಗಲಾಟೆಯಿಂದಾಗಿ ಎಪಿಎಂಸಿಯಿಂದ ಹೊರಗಡೆ ಖರೀದಿ ಕೇಂದ್ರ ಆರಂಭಿಸಿದ್ದೇವೆ. ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿಕೊಟ್ಟು, ಖರೀದಿ ಮಾಡುತ್ತೇವೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು - ಶ್ರೀಧರ, ಜಿಲ್ಲಾಮಟ್ಟದ ರಾಗಿ ಖರೀದಿ ಅಧಿಕಾರಿ
ಕೋಟ್ 2 : ತಿಪಟೂರು ಎಪಿಎಂಸಿಯಲ್ಲಿ ರಾಗಿ ಖರೀದಿಗೆ ವಿಶಾಲ ಜಾಗವಿದ್ದರೂ ನಿಗಮದವರು ಬೇರೆಡೆ ರಾಗಿ ಖರೀದಿಸುತ್ತಿರುವ ಮರ್ಮ ತಿಳಿಯುತ್ತಿಲ್ಲ. ರಾಗಿ ತರುವ ರೈತರಿಗೆ ನೆರಳು, ನೀರಿನ ವ್ಯವಸ್ಥೆ ಇಲ್ಲ. ಒಂದು ವೇಳೆ ರೈತ ತಂದ ರಾಗಿಯನ್ನು ಮರುದಿನ ಖರೀದಿಸಿದರೆ ಆತ ಉಳಿಯಲು ಜಾಗವಿಲ್ಲ. ಎಪಿಎಂಸಿಯಲ್ಲಾಗಿದ್ದರೆ ಕಾವಲುಗಾರರ ವ್ಯವಸ್ಥೆಯಿತ್ತು ಮುಖ್ಯದ್ವಾರವನ್ನು ಹಾಕುವುದರಿಂದ ರೈತರಲ್ಲಿ ಭಯವಿರುತ್ತಿರಲಿಲ್ಲ. ಬಾಡಿಗೆ ನೀಡಿ ರಾಗಿ ಖರೀದಿಸುವುದರ ಉದ್ದೇಶ ತಿಳಿಯುತ್ತಿಲ್ಲ. ಒಟ್ಟಾರೆ ಸರ್ಕಾರದ ಹಣ ವೃಥಾ ವ್ಯಯವಾಗುತ್ತಿದೆ.