ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಭಾನುವಾರ ಮುಂದುವರೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಎಂ. ಬಸವರಾಜು ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಕಾಯಂ ಉದ್ಯೋಗ ನೀಡುವ ವಿಚಾರವಾಗಿ ಕಳೆದ ಗುರುವಾರ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ , ರೈತ ಸಂಘ, ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಹಾಗೂ ಕಾರ್ಖಾನೆಯ ಪ್ರತಿನಿಧಿಗಳು, ತಾಲೂಕು ಆಡಳಿತ ಮತ್ತು ಕೈಗಾರಿಕಾ ಇಲಾಖೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಒಟ್ಟು 46 ರೈತರಿಗೆ ಉದ್ಯೋಗ ನೀಡಲು ಕಾರ್ಖಾನೆಗೆ ಸೂಚಿಸಲಾಯಿತು.ಈ ಪೈಕಿ, ದಾಖಲಾತಿ ಪರಿಶೀಲನೆಗೊಂಡಿರುವ, ಈಗಾಗಲೇ ಹೊರಗುತ್ತಿಗೆ ಕೆಲಸವನ್ನು ಮಾಡುತ್ತಿರುವ 14 ಮಂದಿಗೆ ಆರು ತಿಂಗಳ ಒಳಗೆ ಕೆಲಸ ನೀಡುವ ಕುರಿತು ನೇಮಕಾತಿಯ ದಿನಾಂಕಗಳನ್ನು ಫೆ. 28ರೊಳಗೆ ಕಾರ್ಖಾನೆಯು ಪ್ರಕಟಿಸಬೇಕು. ಇಬ್ಬರಿಗೆ ಮಾ. 9ರ ಒಳಗೆ ನೇಮಕಾತಿ ಆದೇಶ ನೀಡಬೇಕು. ಉಳಿದವರಿಗೆ ಕಾಯಂ ನೇಮಕದ ಆದೇಶವನ್ನು ನೀಡುವವರೆಗೂ, ಪ್ರೊಬೇಷನರಿ ಎಂದು ನೇಮಕ ಮಾಡಿಕೊಳ್ಳಬೇಕು. ಅ ಹುದ್ದೆಗೆ ಸರಿಸಮವಾದ ವೇತನ ನೀಡಬೇಕು. 32 ಮಂದಿಯ ದಾಖಲೆಗಳು ಪರಿಶೀಲನೆಯಾದ ನಂತರ ತಾತ್ಕಾಲಿಕವಾಗಿ ಹೊರಗುತ್ತಿಗೆ ಕೆಲಸವನ್ನು ನೀಡಬೇಕು. ಕಾಯಂ ಸಿಬ್ಬಂದಿ ನಿವೃತ್ತರಾದ ನಂತರ ಆ ಸ್ಥಾನಗಳಿಗೆ ಇವರನ್ನು ನೇಮಕಾತಿ ಮಾಡಿಕೊಳ್ಳಬೇಕು. ಹೊಸ ಹುದ್ದೆಗಳು ಸೃಷ್ಟಿಯಾಗುವ ಸಂದರ್ಭದಲ್ಲಿ ಇವರಿಗೆ ಆದ್ಯತೆಯನ್ನು ನೀಡಿ ನೇಮಕ ಮಾಡಿಕೊಳ್ಳಬೇಕು. ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇ.ಎಸ್.ಐ, ಪಿ.ಎಫ್ ಹಾಗೂ ಇತರೆ ಕಾನೂನುಬದ್ಧ ಸೌಲಭ್ಯವನ್ನು ಕಡ್ಡಾಯವಾಗಿ ನೀಡಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ತೀರ್ಮಾನವಾದ ಅಂಶಗಳು ಜಾರಿಯಾಗುವವರೆಗೂ ದ್ವಾರದ ಬಳಿಪ್ರತಿಭಟನಾಕಾರರು ನಡೆಸುತ್ತಿರುವ ಪ್ರತಿಭಟನೆಯನ್ನು ಕಾರ್ಖಾನೆಯ ಸಮೀಪಕ್ಕೆ ಸ್ಥಳಾಂತರಿಸಲು ಮುಖಂಡರು ಒಪ್ಪಿಕೊಂಡರು. ಕಾರ್ಖಾನೆಯು ಈತೀರ್ಮಾನವನ್ನು ಪಾಲಿಸದೇ ಹೋದರೆ, ಪಾಲಿಸುವಂತೆ ಮಾಡಲುಜಿಲ್ಲಾಡಳಿತ ವಿಫಲವಾದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜನಾಂದೋಲನಗಳ ಮಹಾಮೈತ್ರಿಯ ಜಿಲ್ಲಾ ಸಂಚಾಲಕ ಉಗ್ರನರಸಿಂಹೇಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಕೆ. ಪುನೀತ್, ಮಹೇಶ್, ರಾಜು, ಮಂಜುನಾಥ್, ಬಸವಣ್ಣನಾಯ್ಕ, ನಾಗಮ್ಮ, ಕೆಂಬಾಳಮ್ಮ, ಕೆಂಪಮ್ಮ ಇದ್ದರು.