ಜೆಎಂಸಿಗೆ ತೆರಳುತ್ತಿದ್ದ ಅಧಿಕಾರಿಗಳ ಅಡ್ಡಗಟ್ಟಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 11, 2025, 01:00 AM IST
10ಕೆಆರ್ ಎಂಎನ್ 1.ಜೆಪಿಜಿಬೈರಮಂಗಲ ವೃತ್ತದಲ್ಲಿ ರೈತರನ್ನು ಉದ್ದೇಶಿಸಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಕ್ರಮ ಖಂಡಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳ ರೈತರು ಬೈರಮಂಗಲ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಕ್ರಮ ಖಂಡಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳ ರೈತರು ಬೈರಮಂಗಲ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಶುಕ್ರವಾರ ಧರಣಿ ಕುಳಿತಿರುವ ರೈತರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.

ನಮ್ಮ ಭೂಮಿ - ನಮ್ಮ ಹಕ್ಕು, ಪ್ರಾಣ ಕೊಟ್ಟರು ಭೂಮಿ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ರೈತರೊಂದಿಗೆ ಎ.ಮಂಜುನಾಥ್ ಅವರು ಕೂಡ ಬೈರಮಂಗಲ ವೃತ್ತದಲ್ಲಿ ಜೆಎಂಸಿಗೆ ತೆರಳುತ್ತಿದ್ದ ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು. ಇದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎ.ಮಂಜುನಾಥ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಡದಿ ಟೌನ್ ಯೋಜನೆ ಹೆಸರಿನಲ್ಲಿ 10 ಸಾವಿರ ಎಕರೆ ಭೂಮಿಯನ್ನು ಕಬಳಿಸಲು ಹೊರಟಿದೆ. ಇದರ ವಿರುದ್ಧ 215ನೇ ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ರೈತರ ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ಕೃಷಿ ಭೂಮಿಯ ಜಂಟಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿಯೇ ಹೆಚ್ಚಿನ ಪೊಲೀಸರನ್ನು ನಿಯೋಜಿಸಿಕೊಂಡು ರೈತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರ ದುರುಪಯೋಗ ಪಡಿಸಿಕೊಂಡು ರೈತರ ಕೃಷಿ ಭೂಮಿ ಕಬಳಿಸುವ ಹುನ್ನಾರಕ್ಕೆ ಪುಷ್ಠಿ ಕೊಡಬೇಡಿ. ಜಂಟಿ ಸರ್ವೆಗೆ ಅವಕಾಶ ಮಾಡಿಕೊಡದಂತೆ ವಿನಂತಿ ಮಾಡಿದ್ದೇನೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಕಾಲಾವಕಾಶ ಕೇಳಿದ್ದಾರೆ. ಅದೇ ರೀತಿ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೂ ಚರ್ಚಿಸಿದ್ದು, ಅವರು ಕೂಡ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

ನಾನು ಈ ಭಾಗದ ಯುವಕ, ಜನಪ್ರತಿನಿಧಿಯಾಗಿ ಕೆಲಸ ಮಾಡಿದವನು. ಇಲ್ಲೇ ಹುಟ್ಟಿ ಬೆಳೆದವನು. ರೈತರು ಕರೆದಾಗ ಅವರ ಹೋರಾಟದಲ್ಲಿ ಭಾಗಿಯಾಗಬೇಕಾಗುತ್ತದೆ. ಜಿಲ್ಲಾಡಳಿತ ಇಲ್ಲಿವರೆಗೆ ರೈತರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವ ಕೆಲಸವಾಗಿಲ್ಲ. ರೈತರು ಒಪ್ಪಿದರೆ ಜಂಟಿ ಸರ್ವೆ ಮಾಡಲಿ. ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ರೈತರ ಮೇಲೆದೈಹಿಕವಾಗಿ ದೌರ್ಜನ್ಯ ಎಸಗುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ರೈತರು ಒಪ್ಪಿಕೊಂಡು ಜಂಟಿ ಸರ್ವೆ ಮಾಡಿಸುತ್ತಿದ್ದರೆ ಪೊಲೀಸರು ಏಕೆ ಬೇಕು. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜಂಟಿ ಸರ್ವೆ ಮಾಡಿಸಿದರೆ ನಮಗೆ ಸ್ವಾತಂತ್ರ್ಯ ಇಲ್ಲವೇ. ನಮ್ಮ ಭೂಮಿ ಮೇಲೆ ನಮಗೆ ಹಕ್ಕಿಲ್ಲವೇ. ನಮ್ಮ ಆಸ್ತಿ ಉಳಿಸಿಕೊಳ್ಳುವ ಹಕ್ಕಿಲ್ಲವೇ. ಅದನ್ನು ಹತ್ತಿಕ್ಕಲು ಹೊರಟರೆ ಸುಮ್ಮನಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಯೋಜನೆಯಲ್ಲಿ ಶೇಕಡ 60ರಷ್ಟು ಜೆಎಂಸಿ ಆಗಿದೆ ಎಂದು ಹೇಳಿ ರೈತರಿಗೆ ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ. ಆದರೆ, ಸರ್ವೆಯಲ್ಲಿ ರೈತನು ಭಾಗಿಯಾಗಬೇಕು. ಸ್ಥಳೀಯ ಶಾಸಕರಿಗೆ ರೈತರ ಬಳಿ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಎ.ಮಂಜುನಾಥ್ ಕಿಡಿಕಾರಿದರು.

ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ ಮಾತನಾಡಿ, ಶಾಸಕ ಬಾಲಕೃಷ್ಣರವರು ಭೂ ಸ್ವಾಧೀನ ಸಂಬಂಧ ರೈತರ ಸಭೆ ಮಾಡಿ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನವನ್ನೇ ಮಾಡಿಲ್ಲ. ಇಲ್ಲದೆ ಹೋಗಿದ್ದರೆ ಚಳವಳಿ ಹಾದಿ ಹಿಡಿಯುವ ಪ್ರಮೆಯವೇ ಬರುತ್ತಿರಲಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಕಾರ್ಯದರ್ಶಿ ಸೀನಪ್ಪ ರೆಡ್ಡಿ, ಖಜಾಂಚಿ ನಾಗರಾಜು, ರೈತ ಮುಖಂಡರಾದ ರಾಧಾಕೃಷ್ಣ, ಅಶ್ವತ್ಥ್ , ಕೃಷ್ಣ, ರಾಜಣ್ಣ, ಶಿವರಾಮು, ಚಂದ್ರು, ಕೇಶವರೆಡ್ಡಿ, ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

10ಕೆಆರ್ ಎಂಎನ್ 1.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ರೈತರನ್ನು ಉದ್ದೇಶಿಸಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ