ಬಳ್ಳಾರಿ: ಭತ್ತಕ್ಕೆ ₹3500 ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ- ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಸ್) ಸಂಘಟನೆಯ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಕೃಷಿ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ರೈತರು ವರ್ಷವಿಡೀ ಬೆಳೆದ ಬೆಳೆಗೆ ಬೆಂಬಲಬೆಲೆ ಇಲ್ಲದೆ ಪ್ರತಿವರ್ಷವೂ ನಷ್ಟಕ್ಕೀಡಾಗುತ್ತಿದ್ದಾರೆ. ನಷ್ಟದ ಪ್ರಮಾಣ ಏರಿಕೆಯಿಂದಾಗಿ ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.ಭತ್ತ ಕ್ವಿಂಟಲ್‌ಗೆ ₹3500 ಬೆಂಬಲ ಬೆಲೆ ನೀಡಬೇಕು. ಡಿಸೆಂಬರ್ ಮೊದಲ ವಾರದಿಂದಲೇ ಖರೀದಿ ಕೇಂದ್ರದ ಮೂಲಕ ಭತ್ತ ಖರೀದಿ ಪ್ರಾರಂಭಿಸಬೇಕು. ಮಳೆಯಿಂದಾಗಿ ನಷ್ಟಕ್ಕೀಡಾದ ರೈತರಿಗೆ ಯಾವುದೇ ಕರಾರು ವಿಧಿಸದೇ ನಷ್ಟ ಪರಿಹಾರ ವಿತರಿಸಬೇಕು. ಭತ್ತ ಕಟಾವು ನಡೆದ ಸಂಧರ್ಭದಲ್ಲಿ ಅದನ್ನು ಖರೀದಿಸಲು ಜಿಲ್ಲೆಯಲ್ಲಿ ಆವರ್ತ ನಿಧಿಯನ್ನು ಸ್ಥಾಪಿಸಬೇಕು.
ರೈತರ ಭತ್ತವನ್ನು ಉಚಿತವಾಗಿ ಶೇಖರಣೆ ಮಾಡುವ ಸಲುವಾಗಿ ಪ್ರತಿ ಓಬಳಿ ಮಟ್ಟದಲ್ಲಿ ಸರ್ಕಾರಿ ಗೋದಾಮುಗಳನ್ನು ಸ್ಥಾಪಿಸಬೇಕ, ಭತ್ತ ಕಟಾವು ಯಂತ್ರಗಳು 1 ಗಂಟೆಗೆ ₹2300ಕ್ಕಿಂತ ಹೆಚ್ಚು ಬೆಲೆ ತೆಗೆದುಕೊಳ್ಳುವ ಯಂತ್ರಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ಯುವಜನ ಮುಖಂಡ ಕೋಳೂರು ಪಂಪಾಪತಿ ಮಾತನಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ರೈತ ಮುಖಂಡರಾದ ಲಿಂಗಪ್ಪ, ಈರಣ್ಣ, ಧನರಾಜ್, ಕಾಸಿಂಸಾಬ್, ಮಲ್ಲಪ್ಪ, ಹೊನ್ನೂರಪ್ಪ, ಹಡ್ಲಿಗಿ ಚೆನ್ನಪ್ಪ, ವಲಿಸಾಬ್, ಬಸವರಾಜ್ ಸ್ವಾಮಿ, ಲಿಂಗನಗೌಡ, ಗಾದಿಲಿಂಗಪ್ಪ, ಹೊನ್ನೂರ, ವೀರೇಶಪ್ಪ, ಬೈಲೂರು ನಾಗರಾಜ್, ರಮೇಶ್, ಉಮಾಮಹೇಶ್ವರಪ್ಪ, ಮಲ್ಲಿಕಾರ್ಜುನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ನಗರದ ಗಾಂಧಿಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಹೊತ್ತು ಧರಣಿ ನಡೆಸಿ, ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಭತ್ತಕ್ಕೆ ಬೆಂಬಲ ನೀಡಲು ಆಗ್ರಹಿಸಿ ಎಐಕೆಕೆಎಂಎಸ್ ಸಂಘಟನೆಯ ನೇತೃತ್ವದಲ್ಲಿ ಬಳ್ಳಾರಿ ಡಿಸಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.