ಭದ್ರಾ ನೀರಿಗಾಗಿ ರೈತರಿಂದ ನಾಳೆ ಪ್ರತಿಭಟನೆ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಜಿಲ್ಲೆಯ ಅಚ್ಚುಕಟ್ಟು ಕಡೇ ಭಾಗಕ್ಕೆ ತಿಂಗಳಿಗೆ ಒಮ್ಮೆಯಾದರೂ ನೀರು ತಲುಪದಿದ್ದರೆ ಕೊಳವೆ ಬಾವಿಗಳೆಲ್ಲಾ ಬರಿದಾಗಿ, ತೋಟ, ಗದ್ದೆಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಹಕ್ಕಿನ ನೀರು ಕೊಡಲು ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇವೆ.

ಕಾಡಾ ಸಮಿತಿ ನಿರ್ಣಯದಿಂದ ಅಚ್ಚುಕಟ್ಟು ರೈತರಿಗೆ ಅನ್ಯಾಯ । ನಿತ್ಯ 0.29 ಟಿಎಂಸಿಯಂತೆ 74 ದಿನ ನೀರು ಹರಿಸಿ: ರೈತ ಒಕ್ಕೂಟ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ದಾವಣಗೆರೆ ಅಚ್ಚುಕಟ್ಟು ಪ್ರದೇಶಕ್ಕೆ 74 ದಿನ ನೀರು ಹರಿಸಲು ಒತ್ತಾಯಿಸಿ ಕೊನೆಯ ಭಾಗದ ರೈತರು ಜ.10ರ ಬೆಳಿಗ್ಗೆ 10.30ಕ್ಕೆ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ, ನಂತರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್‌.ಲಿಂಗರಾಜ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಅಚ್ಚುಕಟ್ಟು ಕಡೇ ಭಾಗಕ್ಕೆ ತಿಂಗಳಿಗೆ ಒಮ್ಮೆಯಾದರೂ ನೀರು ತಲುಪದಿದ್ದರೆ ಕೊಳವೆ ಬಾವಿಗಳೆಲ್ಲಾ ಬರಿದಾಗಿ, ತೋಟ, ಗದ್ದೆಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಹಕ್ಕಿನ ನೀರು ಕೊಡಲು ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇವೆ ಎಂದರು.

ಪ್ರತಿ ಸಲವೂ ಭದ್ರಾ ನೀರಿಗಾಗಿ ರೈತರು ಹೋರಾಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿ ಭದ್ರಾ ಕಾಡಾ ಸಮಿತಿ ಅಧ್ಯಕ್ಷ ಸ್ಥಾನ ಶಿವಮೊಗ್ಗ ಉಸ್ತುವಾರಿ ಸಚಿವರಿಗೆ ನೀಡಿದ್ದು, ದಾವಣಗೆರೆ ರೈತರ ಪಾಲಿಗೆ ವಿರುದ್ಧ ತೀರ್ಮಾನ ಕೈಗೊಂಡು ಅನ್ಯಾಯ ಮಾಡುತ್ತಿದ್ದಾರೆ. ಇಂತಹ ಸಚಿವರ ವಿರುದ್ಧ ಜಿಲ್ಲೆಯ ಜನ ಪ್ರತಿನಿಧಿಗಳೂ ಧ್ವನಿ ಎತ್ತಬೇಕು ಎಂದು ಹೇಳಿದರು.

ರೈತ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಎ.ಕೆ.ಫೌಂಡೇಷನ್ ಅಧ್ಯಕ್ಷ ಕೆ.ಬಿ.ಕೊಟ್ರೇಶ ಮಾತನಾಡಿ, ಜ.20ರಿಂದ 12 ದಿನ ನೀರು ಬಿಟ್ಟು, 20 ದಿನ ನೀರು ನಿಲ್ಲಿಸಲು ಭದ್ರಾ ಕಾಡಾ ಸಮಿತಿ ಕೈಗೊಂಡ ನಿರ್ಣಯ ರೈತರ ರೈತರಿಗೆ ಅನ್ಯಾಯ ಮಾಡಲಿದೆ. ಕೇವಲ 12 ದಿನ ನೀರು ಹರಿಸಿದರೆ, ದಾವಣಗೆರೆ ಭಾಗಕ್ಕೆ ನೀರು ತಲುಪುದಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ಭದ್ರಾ ಎಡ ಮತ್ತು ಬಲ ದಂಡೆಗಳಿಗೆ ನೀರು ಬಿಡಲು 0.29 ಟಿಎಂಸಿ ನೀರು ಬೇಕು. ಅಣೆಕಟ್ಟೆಯಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ ತೆಗೆದು, ಬಳಕೆಗೆ ಬರುವ 21.54 ಟಿಎಂಸಿ ನೀರು ಇದೆ. ನಿತ್ಯ 0.29ರಂತೆ 74 ದಿನ ಇದನ್ನು ಹರಿಸಬಹುದು ಎಂದರು.

ನೀರಾವರಿ ಅಧಿಕಾರಿಗಳು 6.90 ಟಿಎಂಸಿ ನೀರು ಕುಡಿಯುವ ನೀರಿಗೆ, ಕೈಗಾರಿಕಾ ಉದ್ದೇಶಕ್ಕೆ ಹಾಗೂ ಆವಿಯಾಗುವ 1.91 ಟಿಎಂಸಿ ನೀರು ಎಂಬುದಾಗಿ ಮೀಸಲಿಟ್ಟು, ಲೆಕ್ಕ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ನಿದರ್ಶನ ಭದ್ರಾ ಡ್ಯಾಂ ಇತಿಹಾಸದಲ್ಲೇ ಇಲ್ಲ. ನಾಲೆಗೆ ನೀರು ಬಿಟ್ಟಾಗಲೇ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆ ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ ಇತರೆ ಕೆರೆ ತುಂಬಿಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ 1.91 ಟಿಎಂಸಿ ನೀರು ಆವಿಯಾಗುತ್ತದೆಂಬುದೆಲ್ಲಾ ಅಧಿಕಾರಿಗಳ ತಲೆಬುಡವಿಲ್ಲದ ಲೆಕ್ಕಾಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ನೀರಾವರಿ ಅಧಿಕಾರಿಗಳು ಆವಿಯಾಗುವ ನೀರಿನ ಲೆಕ್ಕ ಹಾಕಿದ್ದಾರೆಯೇ ಹೊರತು, ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಅಣೆಕಟ್ಟೆಗೆ ಹರಿದು ಬರುವ ಒಳ ಹರಿವಿನ ಪ್ರಮಾಣ ಲೆಕ್ಕ ಮಾಡಿಲ್ಲ. ಇದನ್ನು ಬೇಕಂತಲೇ ಮುಚ್ಚಿಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹರಿಸುವ ಎಡ ದಂಡೆಗೆ ಪ್ರತ್ಯೇಕ ವೇಳಾಪಟ್ಟಿ ನಿಗದಿಪಡಿಸಿದ್ದು ಯಾವ ಪುರುಷಾರ್ಥಕ್ಕೆ? ಜ.10ರಿಂದಲೇ 16 ದಿನ ನೀರು ಹರಿಸುವುದು, 15 ದಿನ ನೀರು ನಿಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಭದ್ರಾ ಡ್ಯಾಂನ ಇತಿಹಾಸದಲ್ಲೇ ಭದ್ರಾ ಎಡ ದಂಡೆ ಮತ್ತು ಬಲ ದಂಡೆ ನಾಲೆಗಳಿಗೆ ಬೇರೇ ಬೇರೆ ವೇಳಾಪಟ್ಟಿ ಮಾಡಿರುವುದೂ ಇದೇ ಮೊದಲು. ಇದರ ವಿರುದ್ಧ ಜಿಲ್ಲೆಯ ರೈತರು ತೀವ್ರ ಸ್ವರೂಪ ಹೋರಾಟ ನಡೆಸುವುದಂತೂ ನಿಶ್ಚಿತ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಬೆಳವನೂರು ಬಿ.ನಾಗೇಶ್ವರ ರಾವ್‌, ಧನಂಜಯ ಕಡ್ಲೇಬಾಳು, ಮಾಜಿ ಮೇಯರ್ ಎಚ್‌.ಎನ್‌.ಗುರುನಾಥ, ಕುಂದುವಾಡ ಎಚ್‌.ಜಿ.ಗಣೇಶಪ್ಪ, ಕಲ್ಪನಹಳ್ಳಿ ಮಂಜುನಾಥ, ಕಲ್ಪನಹಳ್ಳಿ ಸತೀಶ, ಶಿರಮಗೊಂಡನಹಳ್ಳಿ ಮಂಜುನಾಥ, ಹನುಮಂತಪ್ಪ, ಅಣ್ಣಪ್ಪ, ಮಹೇಶ ಇತರರರಿದ್ದರು.

.............

ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ

ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಡ್ಯಾಂನಿಂದ ನೀರು ಹರಿಸಿ, ಅಡಿಕೆ, ತೆಂಗು ಇತರೆ ಬಹುವಾರ್ಷಿಕ ಬೆಳೆಗಳ ತೋಟಗಳ ಭೀಕರ ಬರದಿಂದ ಉಳಿಸಿಕೊಳ್ಳಲು ಸಚಿವರು ಶಿವಮೊಗ್ಗದಲ್ಲಿ ಐಸಿಸಿ ಸಭೆಗೆ ಗೈರು ಹಾಜರಾಗಿದ್ದು ಸರಿಯಲ್ಲ. ಬರದ ಬವಣೆಯಿಂದ ತತ್ತರಿಸಿದ ರೈತರ ಸಂಕಷ್ಟಕ್ಕೆ ಧಾವಿಸುವ ಇಚ್ಛಾಶಕ್ತಿ ಈಗಿನ ಸರ್ಕಾರದವರಿಗೆ ಇಲ್ಲ. ಭದ್ರಾ ಅಚ್ಚುಕಟ್ಟು ರೈತರ ಬದುಕು, ಭವಿಷ್ಯ ಬಲಿ ಕೊಡಲು ನಾವು ಅವಕಾಶ ನೀಡಲ್ಲ.

ಬಿ.ಎಂ.ಸತೀಶ ಕೊಳೇನಹಳ್ಳಿ, ರೈತ ಮುಖಂಡ.

Share this article