ಕಳೆದ ಬಾರಿಯಂತೆ ನೋಂದಣಿ ಬೇಗ ಮುಗಿಯುತ್ತದೆಂಬ ಭಯ । ಖರೀದಿ ಕೇಂದ್ರಕ್ಕೆ ರೈತರ ದಾಂಗುಡಿ
ಕನ್ನಡಪ್ರಭ ವಾರ್ತೆ ತಿಪಟೂರುಕಳೆದ ತಿಂಗಳು ನಾಫೆಡ್ ಖರೀದಿ ಕೇಂದ್ರದ ಮೂಲಕ ಕೊಬ್ಬರಿ ಖರೀದಿ ನೋಂದಣಿಯಲ್ಲಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆ ಸರ್ಕಾರ ಕೊಬ್ಬರಿ ಖರೀದಿಗೆ ಮರು ನೋಂದಣಿ ಸೋಮವಾರದಿಂದ ಪ್ರಾರಂಭಿಸಿದ್ದು, ರೈತರು ಹಾಗೂ ಮಹಿಳೆಯ ರು, ವಯೋವೃದ್ದರು, ಅಂಗವಿಕಲರು ಸಂಬಂಧಿಸಿದ ಎಪಿಎಂಸಿ ಆವರಣಗಳಲ್ಲಿ ಭಾನುವಾರ ಸಂಜೆಯಿಂದಲೇ ಜಮಾಯಿಸಿದ್ದಾರೆ.
ನೋಂದಣಿ ವಿಷಯ ಮೊದಲೆ ತಮ್ಮ ಗಮನಕ್ಕೆ ಬಂದಿದ್ದರಿಂದ ರೈತರು ಭಾನುವಾರ ಸಂಜೆಯಿಂದಲೇ ಸಂಬಂಧಪಟ್ಟ ಎಪಿಎಂಸಿ ಆವರಣದಲ್ಲಿ ತಮ್ಮ ಪಾದರಕ್ಷೆಗಳನ್ನು ಸರದಿ ಸಾಲಿನಲ್ಲಿ ಬಿಟ್ಟು ಕಾಯುತ್ತಿದ್ದರು. ದೂರದ ಊರುಗಳಿಂದ ಬಂದಿದ್ದ ವರು ಚಾಪೆ, ಹೊದಿಕೆಗಳನ್ನು ತಂದು ರಾತ್ರಿಪೂರ್ತಿ ಆವರಣದಲ್ಲಿಯೇ ಮಲಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಹೆಸರು ನೊಂದಾಯಿಸಲು ಮುಗಿಬೀಳುತ್ತಿದ್ದಾರೆ. ರೈತರಿಗೆ ನೆರಳು, ಕುಡಿಯುವ ನೀರು, ನೋಂದಣಿಗೆ ಅವಶ್ಯವಿರುವ ಇಂಟರ್‌ನೆಟ್, ನುರಿತ ಕಂಪ್ಯೂಟರ್ ಆಪರೇಟರ್ಸ್ ವ್ಯವಸ್ಥೆ ಮಾಡಲಾಗಿದೆ.ಉದ್ದುದ್ದ ಸರದಿ ಸಾಲುಗಳಲ್ಲಿ ವಯೋವೃದ್ದರು, ಅಂಗವಿಕಲರು, ಮಹಿಳೆಯರಂತೂ ಬಿರು ಬಿಸಿಲಿನಲ್ಲಿ ನಿಂತು ನಿಂತು ಸುಸ್ತಾಗುತ್ತಿದ್ದಾರೆ. ಸರದಿ ಬಿಟ್ಟು ಹೋಗುತ್ತದೆಯೋ ? ಸರ್ವರ್ ಬ್ಯುಸಿ ಬರುತ್ತದೋ? ಎಂಬ ಭಯದಿಂದ ನೋಂದಣಿಗೆ ಹರಸಾಹಸಪಡುತ್ತಿದ್ದಾರೆ. 45 ದಿನಗಳವರೆಗೆ ನೋಂದಣಿ ಹಾಗೂ ಖರೀದಿಗೆ ಅವಕಾಶವಿದ್ದು, ಈ ರೀತಿ ಬಂದು ಕಾಯಬೇಡಿ ಎಂದು ಅಧಿಕಾರಿಗಳು ತಿಳಿಸಿದರೂ ರೈತರು ಜಾಗ ಬಿಟ್ಟು ಹೋಗುತ್ತಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ನೋಂದಣಿ ಬೇಗ ಮುಗಿಯುತ್ತದೆ ಯೋ ಎಂಬ ಆತಂಕದಿಂದ ರೈತರು ನೋಂದಣಿ ಮಾಡಿಸಿಕೊಂಡೇ ಹೊಗೋಣ ಎಂದು ಕಾದುಕುಳಿತುಕೊಳ್ಳುತ್ತಿದ್ದಾರೆ. ಕೊಬ್ಬರಿ ಬೆಲೆ ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಈಗ ನಾಫೆಡ್ ಮೂಲಕವಾದ ರೂ ಕ್ವಿಂಟಾಲ್ ಕೊಬ್ಬರಿಗೆ 13.500 ರು.ಗಳಾದರೂ ಸಿಗಲಿದೆ ಎಂಬ ಆಸೆಯಿಂದ ರೈತರು ನೋಂದಣಿಗೆ ಮುಗಿ ಬೀಳುತ್ತಿದ್ದು ಸರದಿ ಸಾಲಿನಲ್ಲಿ ಗಲಾಟೆ, ಘರ್ಷಣೆಗಳಾಗದಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ತಿಪಟೂರು ಎಪಿಎಂಸಿ ವ್ಯಾಪ್ತಿಯಲ್ಲಿ ಏಳು ಖರೀದಿ ಕೇಂದ್ರಆಯಾ ಹೋಬಳಿಯ ರೈತರಿಗೆ ಅನುಕೂಲವಾಗಲೆಂದು ತಿಪಟೂರು ಎಪಿಎಂಸಿ ವ್ಯಾಪ್ತಿಯಲ್ಲಿ ಒಟ್ಟು ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಣಗದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆಯಲಾಗಿದ್ದು, ಒಂದು ಕೇಂದ್ರವನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಕರಡಾಳು, ಕೊನೇಹಳ್ಳಿ, ಕೆ.ಬಿ.ಕ್ರಾಸ್ ಉಪ ಎಪಿಎಂಸಿ ಮಾರುಕಟ್ಟೆಗಳಲ್ಲಿ ತಲಾ ಒಂದೊಂದು ಕೇಂದ್ರ ತೆರೆಯಲಾಗಿದೆ.