ಕೃಷಿ ಪದ್ಧತಿಯಲ್ಲಿ ಬದಲಾವಣೆಗೆ ರೈತರ ಹಿಂದೇಟು: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : May 22, 2025 1:10 AM
ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಲವಾರು ಕಾರಣಗಳಿಂದ ಹಿಂಜರಿಯಬಹುದು. ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯಿರಿ, ಲಾಭದಾಯಕ ಎಂದು ಮನದಟ್ಟು ಆದ ನಂತರ ಸಂಪೂರ್ಣವಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ತಾಂತ್ರಿಕತೆ ಹಾಗೂ ಯಂತ್ರೋಪಕರಣ ಅಳವಡಿಸಿಕೊಡು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ ವತಿಯಿಂದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಬ್ಬು, ಭತ್ತ, ರಾಗಿ ಬೆಳೆಗಳ ಬಗ್ಗೆ ವಿಶೇಷ ತಾಂತ್ರಿಕ ಸಂವಾದ ಬಿತ್ತನೆಯಿಂದ ಮಾರಾಟದವರೆಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬದಲಾವಣೆ ಎನ್ನುವುದು ಪ್ರಕೃತಿಯ ನಿಯಮ. ಕಾಲಕ್ಕೆ ತಕ್ಕಂತೆ ಕೃಷಿ ಸೇರಿ ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ಕಾಣಬೇಕು. ಆಗ ಮಾತ್ರ ಸುಧಾರಣೆ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.

ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಲವಾರು ಕಾರಣಗಳಿಂದ ಹಿಂಜರಿಯಬಹುದು. ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯಿರಿ, ಲಾಭದಾಯಕ ಎಂದು ಮನದಟ್ಟು ಆದ ನಂತರ ಸಂಪೂರ್ಣವಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದರು.

ಕೃಷಿ ಕಷ್ಟವಾದ ಕೆಲಸ. ಸಾಲ ಮಾಡಬೇಕು. ನಷ್ಟ ಅನುಭವಿಸಬೇಕು ಎಂಬ ಮನೋಭಾವನೆ ಬಿಟ್ಟು ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಳಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಬಹುದು. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು.

ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿ ಪದ್ದತಿ ಯಲ್ಲಿ ಹೆಚ್ಚು ಇಳುವರಿ ಹಾಗೂ ಆರ್ಥಿಕವಾಗಿ ಸದೃಢರಾಗಲು ಅನೇಕ ಹೊಸ ಪದ್ಧತಿಗಳನ್ನು ಕೃಷಿ ವಿಜ್ಞಾನಿಗಳು ಕೃಷಿ ಮಹಾವಿದ್ಯಾಲಯಗಳು ಪರಿಚಯಿಸುತ್ತಿದೆ. ರೈತರು ಹೊಸ ಪದ್ಧತಿ ಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಏಕಬೆಳೆ ಸರಿಯಲ್ಲ:

ಒಂದೇ ರೀತಿಯ ಏಕ ಬೆಳೆ ಪದ್ಥತಿಯನ್ನು ಹಲವು ವರ್ಷಗಳು ನಿರಂತರವಾಗಿ ಬೆಳೆದರೆ ಮಣ್ಣು ಪೌಷ್ಟಿಕಾಂಶ ಕಳೆದುಕೊಳ್ಳುವುದರ ಜೊತೆಗೆ ಇಳುವರಿ ಸಹ ಕಡಿಮೆಯಾಗುತ್ತದೆ. ಮೂರು ಎಕರೆ ಜಮೀನನ್ನು ಮೂರು ಭಾಗ ಮಾಡಿ ಒಂದೊಂದು ಎಕರೆಯಲ್ಲಿ ಒಂದೊಂದು ಬೆಳೆಯನ್ನು ಬೆಳೆಯಿರಿ. ಮುಂದಿನ ವರ್ಷ ಮೂರು ವಿಭಾಗದಲ್ಲಿ ಬೆಳೆದ ಬೆಳೆಯನ್ನು ಅದಲು ಬದಲು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಭತ್ತ, ರಾಗಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯಲು ೬ ತಿಂಗಳು ತೆಗೆದುಕೊಳಲಾಗುತ್ತದೆ. ಬೆಳೆ ಬಂದ ತಕ್ಷಣ ಜಮೀನಿನಲ್ಲೇ ಮರಾಟ ಮಾಡಲಾಗುತ್ತದೆ. ಹೆಚ್ಚು ಆದಾಯ ಬರುವ ರೀತಿ ಚಿಂತಿಸಿ ಮೌಲ್ಯವರ್ಧನಾ ತಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕೃಷಿ ಕರ್ಮಿಕರ ಕೊರತೆಯ ಬಗ್ಗೆ ಹೆಚ್ಚು ಚಿಂತಿಸುವ ಸರ್ಕಾರ ಕೃಷಿ ಯಂತ್ರೋಪಕರಣಗಳ ಒಂದು ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಕೃಷಿ ಕಟಾವು ಹೈಟೆಕ್ ಯಂತ್ರಕ್ಕೆ ೪೦ ಲಕ್ಷ ರೂ ಸಬ್ಸಿಡಿ ನೀಡಲಾಗುತ್ತಿದ್ದು, ಸುಮರು ೩೫೦ ರೈತರಿಗೆ ಯಂತ್ರ ನೀಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಗೆ ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿಸಲಾಗಿದೆ. ಇದರ ಕಾರ್ಯವೈಖರಿಯನ್ನು ೩ ವರ್ಷದೊಳಗೆ ಜಿ.ಕೆ.ವಿ.ಕೆ ರೀತ್ಯ ಮಾಡಲಾಗುವುದು. ವಿಶ್ವವಿದ್ಯಾನಿಲಯದ ಅಗತ್ಯತೆಯ ಬಗ್ಗ್‌ೆ ಮುಂದಿನ ದಿನಗಳಲ್ಲಿ ಜನರಿಗೆ ಅರ್ಥವಾಗಲಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ ಜಿಲ್ಲೆಯಲ್ಲಿ ಕಬ್ಬು, ರಾಗಿ ಹಾಗೂ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮೂರು ಬೆಳೆಗಳಲ್ಲಿ ವಿನೂತನ ಪದ್ಧತಿ ಹಾಗೂ ತಾಂತ್ರಿಕತೆಯನ್ನು ಅಳವಡಿಸಿ ಹೆಚ್ಚಿನ ರೈತರಿಗೆ ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಕಬ್ಬಿನಲ್ಲಿ ಹೆಚ್ಚು ಉತ್ಪಾದಕತೆಗಾಗಿ ೫ ಪಟ ಹಾಗೂ ಒಂಟಿ ಕಣ್ಣಿನ ಕಬ್ಬು ಪೈರು ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ನರೇಗಾ ಯೋಜನೆಯನ್ನು ಉಪಯೋಗಿಸಿಕೊಂಡು ಸುಮಾರು ೨೦೦೦ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ರಾಜ್ಯ ಮತ್ತು ದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ರಾಗಿ ಬೆಳೆಯಾಗುತ್ತಿದೆ. ಭತ್ತದ ನಾಟಿಗಾಗಿ ಹೊರ ಜಿಲ್ಲೆಗಳಿಂದ ಮಂಡ್ಯ ಜಿಲ್ಲೆಗೆ ಕಾರ್ಮಿಕರನ್ನು ಕರೆತರಲಾಗಿತ್ತಿದೆ ಇದರ ಬದಲು ನಾಟಿ ಮಾಡಲು ಯಾಂತ್ರಿಕತೆ ಪದ್ಧತಿಯನ್ನು ಜಿಲ್ಲೆಯ ಕೆಲವು ರೈತರು ಅಳವಡಿಸಿಕೊಂಡಿದ್ದಾರೆ. ಈ ಪದ್ಧತಿಗಳ ಬಗ್ಗೆ ಹೆಚ್ಚಿನ ರೈತರಿಗೆ ಪರಿಚಯಿಸಲು ವಿಶೇಷ ದ್ವೈಮಾಸಿಕ ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಕಾರಿ ಹರಿಣಿ ಕುಮಾರ್, ವಿ.ಸಿ.ಫಾರಂನ ಡೀನ್ ಫಾತೀಮಾ ಸೇರಿದಂತೆ ಕೃಷಿ ವಿಜ್ಞಾನಿಗಳು, ರೈತರು ಉಪಸ್ಥಿತರಿದ್ದರು.