ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ನಡೆದ ರೈತ ದಸರಾದಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾಗಿದೆ. ದಸರಾ ಅಂಗವಾಗಿ ಇಂದು ನುರಿತ ವಿಜ್ಞಾನಿ ಹಾಗೂ ಅನುಭವಿಗಳಿಂದ ಕೃಷಿ ವಿಚಾರವಾಗಿ ರೈತರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ ಎಂದರು.
ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಜೊತೆಗೆ ವಾಣಿಜ್ಯ ಬೆಳೆಯಾಗಿದ್ದು, ಹೆಚ್ಚು ರೈತರು ಕಬ್ಬಿನ ಬೆಳೆಗೆ ಅವಲಂಬಿತರಾಗಿದ್ದಾರೆ. ಗೋಷ್ಠಿಯಲ್ಲಿ ಕಬ್ಬಿನ ಬೆಳೆಯಲ್ಲಿ ಬೇರು ಹುಳುವಿನ ನಿರ್ವಹಣೆ ಬಗ್ಗೆ ತಿಳಿಸಲಾಗುತ್ತದೆ. ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿರುವ ಸಮಸ್ಯೆಗಳಿಗೆ ಗೋಷ್ಠಿಯಲ್ಲಿ ವಿಜ್ಞಾನಿಗಳು ತಿಳಿಸುವರು. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನಾನು ಕೃಷಿ ಆಧಾರಿತ ಕುಟುಂಬದಲ್ಲಿ ಜನಿಸಿ ಕೃಷಿಯಲ್ಲಿ ಪದವಿ ಮುಗಿಸಿ ನಂತರ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಂಎಸ್‌ಸಿಯಲ್ಲಿ ಕಬ್ಬು ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದೇನೆ ಎಂದರು.
ಕೃಷಿಯಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಲೇ ಇರುತ್ತವೆ. ಇಂದಿನ ಕೃಷಿ ದಸರಾ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದೆ. ದೇಶದ ಮುಖ್ಯ ಕಸುಬು ಕೃಷಿ. ರೈತರು ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದರು.ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವ ವಿದ್ಯಾನಿಲಯದ ಕೀಟ ಶಾಸ್ತ್ರಜ್ಞ ಡಾ.ಡಿ.ರಾಜಣ್ಣ ಉಪನ್ಯಾಸ ನೀಡಿ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಬ್ಬನ್ನು ವಾರ್ಷಿಕವಾಗಿ 35 ರಿಂದ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಯಲ್ಲಿ ಬೇರುಹುಳುಗಳು ಹೆಚ್ಚು ಮಾರಕವಾಗಿವೆ ಎಂದರು.
ಬೇರುಹುಳುಗಳಿಂದಾಗಿ ಶೇ. 40 ರಿಂದ 80ರಷ್ಟು ಬೆಳೆ ನಷ್ಟ ಉಂಟಾಗಬಹುದು. ಜೊತೆಗೆ ಸಕ್ಕರೆ ಇಳುವರಿ ಸಹ ಕುಂಠಿತವಾಗುತ್ತದೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾರೆ. ಬೇರುಹುಳುಗಳು ತಮ್ಮ ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗೆಯೇ ಕಳೆಯುವುದರಿಂದ ಇವುಗಳ ಬಾಧೆ ರೈತರಿಗೆ ಮೇಲ್ನೋಟಕ್ಕೆ ತಿಳಿಯುವುದಿಲ್ಲ. ಗದ್ದೆಗಳು ತೀವ್ರ ಬಾಧೆಗೊಳಗಾಗಿ ಬೆಳೆ ಬಾಡಿ, ಒಣಗಲಾರಂಭಿಸಿದಾಗ ಬಾಧೆ ಅರಿವಿಗೆ ಬರುತ್ತದೆ ಎಂದರು.ಕಬ್ಬು ಬೆಳೆಯನ್ನು ಬಾಧಿಸುವ ಬೇರುಹುಳುವಿನ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯ ಸೆರ್ರಟ ಎಂದು ಕರೆಯುತ್ತೇವೆ. ಈ ಜಾತಿಯ ಬೇರುಹುಳು ಕಬ್ಬು, ನೆಲಗಡಲೆ, ಜೋಳ, ಮೆಕ್ಕೆಜೋಳ, ತರಕಾರಿ ಬೆಳೆಗಳು ಇನ್ನೂ ಅನೇಕ ಬಗೆಯ ಸಸ್ಯಗಳ ಬೇರನ್ನು ತಿನ್ನುತ್ತದೆ. ಸಾಮಾನ್ಯವಾಗಿ ಗೊಬ್ಬರ ಗುಂಡಿಗಳಲ್ಲಿ ಅಥವಾ ಗೊಬ್ಬರ ಹಾಕಿದ ಗದ್ದೆಯನ್ನು ಅಗೆಯುವಾಗ ಸಿಕ್ಕುವ ಗೊಬ್ಬರದ ಹುಳುವನ್ನೇ ಗೊಣ್ಣೆಹುಳು ಅಥವಾ ಬೇರುಹುಳು ಎಂದು ರೈತರು ಭಾವಿಸಿದ್ದಾರೆ ಎಂದರು.
ಗೊಬ್ಬರದ ಹುಳು ಹಾಗೂ ಬೇರುಹುಳುಗಳು ಬಣ್ಣ ಮತ್ತು ಆಕಾರದಲ್ಲಿ ಒಂದೇ ರೀತಿ ಇರುವುದರಿಂದ ಈ ತಪ್ಪು ಭಾವನೆ ಬಂದಿದೆ. ಆದರೆ, ಗೊಬ್ಬರದ ಹುಳು ಕೇವಲ ಗೊಬ್ಬರವನ್ನು ತಿಂದು ಜೀವಿಸುವುದು. ಬೇರುಹುಳು ಸಸ್ಯದ ಜೀವಂತ ಬೇರನ್ನು ತಿಂದು ಜೀವಿಸುತ್ತದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಕೃಷಿ ಇಲಾಖೆಯಿಂದ ಅರಕೆರೆ ಗ್ರಾಮದ ಸಿ.ಕೆ ಶಿವಣ್ಣ, ಗಾಮನಹಳ್ಳಿ ಗ್ರಾಮದ ಬಸವಯ್ಯ, ಹೆಬ್ಬಾಡಿ ಗ್ರಾಮದ ಜಯರಾಮೇಗೌಡ, ಚಂದಗಾಲು ಗ್ರಾಮದ ಕುಮಾರಸ್ವಾಮಿ, ಎಂ.ಶೆಟ್ಟಿಹಳ್ಳಿ ಗ್ರಾಮದ ಬದ್ರುನ್ನೀಸಾ, ಕೂಡಲಕುಪ್ಪೆ ಗ್ರಾಮದ ಶಂಕರನಾರಾಯಣ ಮತ್ತು ರೇಷ್ಮೆ ಇಲಾಖೆ ವತಿಯಿಂದ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಶೋಕ ವಿ.ಎಸ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಿ.ಪುಟ್ಟಸ್ವಾಮಿ, ಪಾಂಡವಪುರ ಉಪ ವಿಭಾಗ ಕೃಷಿ ನಿರ್ದೇಶಕ ಭಾನು ಪ್ರಕಾಶ್, ಮುನೇಗೌಡ ಸೇರಿದಂತೆ ಇತರ ವಿಜ್ಞಾನಿಗಳು ಉಪಸ್ಥಿತರಿದ್ದರು.