ಕನ್ನಡಪ್ರಭ ವಾರ್ತೆ ಮೂಡಲಗಿ
ಹೈನುಗಾರಿಕೆಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಒತ್ತು ನೀಡಿದರೇ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬೆಮ್ಯುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ಕಮಲದಿನ್ನಿ ಮಡ್ಡಿ ತೋಟದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶವು ಕೃಷಿ ಆಧಾರಿತ ದೇಶವಾಗಿದ್ದು, ಹೈನುಗಾರಿಕಾ ವಲಯದಲ್ಲಿ ಹೆಮ್ಮೆಯ ಸಾಧನೆ ಮಾಡುತ್ತಿದೆ ಎಂದರು.
ನಮ್ಮ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆಯನ್ನು ಎದುರಿಸುತ್ತಿದ್ದರೂ ಅಲ್ಲಿರುವ ರೈತ ಬಾಂಧವರು ಹೈನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಹೈನೋದ್ಯಮವನ್ನು ಬೆಳೆಸುತ್ತಿದ್ದಾರೆ. ಅಂತಹ ಮಾದರಿಯ ಹೈನುಗಾರಿಕೆಯೂ ನಮ್ಮ ರೈತ ವೃಂದದವರು ಅಳವಡಿಸಿಕೊಂಡರೇ ಉತ್ತಮವಾಗುತ್ತದೆ. ಇದರ ಜತೆಗೆ ಆರ್ಥಿಕ ಪ್ರಗತಿಯನ್ನು ಸಹ ಸಾಧಿಸಬಹುದು ಎಂದು ತಿಳಿಸಿದರು.ಕಮಲದಿನ್ನಿ ಮಡ್ಡಿ ತೋಟದ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ದಿ.ನವೀನ ಬಡಗನ್ನವರ ಸ್ಮರಣಾರ್ಥವಾಗಿ ಭೂಮಿ ನೀಡಿರುವ ಅಪ್ಪಣ್ಣ ಬಡಗನ್ನವರ ಕುಟುಂಬ ವರ್ಗದವರನ್ನು ಅಭಿನಂದಿಸಿದರು. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮಪ್ಪ ಕೆಂಚರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಅಪ್ಪಣ್ಣ ಬಡಗನ್ನವರ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ತಮ್ಮಣ್ಣ ಕೆಂಚರಡ್ಡಿ, ಹಣಮಂತ ತೇರದಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ, ಸಂಘದ ಉಪಾಧ್ಯಕ್ಷ ಯಲ್ಲಪ್ಪ ಗಂಗರಡ್ಡಿ, ಉಪಕೇಂದ್ರ ಅಧಿಕಾರಿ ಡಾ.ವೀರಣ್ಣ ಕೌಜಲಗಿ, ಸಂಘದ ನಿರ್ದೇಶಕರಾದ ಈರಣ್ಣ ಸಂತಿ, ವೆಂಕಟೇಶ ಸೊನ್ನದ, ಹಣಮಂತ ದಂಡಪ್ಪನವರ, ಬಸು ಸನದಿ, ವಿಲಾಸ ಪಾಟೀಲ, ಪದ್ದವ್ವ ಬುದ್ನಿ, ಮಾಲವ್ವ ಮಡಿವಾಳರ, ಬಸಪ್ಪ ತಿಗಡಿ, ಮುಖ್ಯ ಕಾರ್ಯನಿರ್ವಾಹಕ ಯಲ್ಲಪ್ಪ ಸಂತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಬೆಮ್ಯುಲ್ ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ರೈತರ ಆದಾಯವನ್ನು ವೃದ್ಧಿಸಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೇನೆ. ನಮ್ಮ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರ ರೈತರಿಗೆ ಕೇವಲ 20 ದಿನಗಳೊಳಗೆ ಅವರ ಖಾತೆಗಳಿಗೆ ಬಿಲ್ ಸಂದಾಯ ಮಾಡಲು ಅಗತ್ಯ ಕ್ರಮಗಳನ್ನು ಕೈಕೊಂಡಿದ್ದೇನೆ. ರೈತರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.-ಬಾಲಚಂದ್ರ ಜಾರಕಿಹೊಳಿ, ಬೆಮ್ಯುಲ್ ಅಧ್ಯಕ್ಷ, ಶಾಸಕರು.