- ಎಲ್ಲಾ ಕೃಷಿ ಉತ್ಪನ್ನಕ್ಕೆ ಎಂಎಸ್‌ಪಿ ದರ ಕಾನೂನು, ಡಾ. ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ- ರೈತರು, ಕೂಲಿಕಾರರ ಸಂಪೂರ್ಣ ಸಾಲ ಮನ್ನಾಗೆ ರೈತ ಸಂಘಟನೆಗಳ ಒಕ್ಕೂಟದಿಂದ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತರ ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದರದಲ್ಲಿ ಖರೀದಿಸಲು ಕಾನೂನು ಜಾರಿ ಮಾಡುವ ಬಗ್ಗೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸಲು ಸಂಸತ್ತಿನಲ್ಲಿ ಕೇಂದ್ರದ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನರಿಗೆ ಜಿಲ್ಲೆಯ ರೈತ ಸಂಘಟನೆಗಳ ಒಕ್ಕೂಟದ ನಿಯೋಗ ಮನವಿ ಮಾಡಿದೆ.ನಗರದ ಸಂಸದರ ಗೃಹ ಕಚೇರಿಯಲ್ಲಿ ಮಂಗಳವಾರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಹಾಗೂ ಇತರರ ನೇತೃತ್ವದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನರಿಗೆ ಮನವಿ ಪತ್ರವನ್ನು ಸಲ್ಲಿಸಿ, ಲೋಕಸಭೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ರೈತರಿಗೆ ನ್ಯಾಯ ಕೊಡಿಸಿ ಎಂದು ರೈತ ಸಂಘಟನೆಯ ಒಕ್ಕೂಟ ಒತ್ತಾಯಿಸಿದೆ.
ಇದೇ ವೇಳೆ ಮಾತನಾಡಿದ ಬಲ್ಲೂರು ರವಿಕುಮಾರ, ಲೋಕಸಭೆಯ ಅಧಿವೇಶನದಲ್ಲಿ ಈ ಬಾರಿ ಜಿಲ್ಲೆ, ರಾಜ್ಯ ಹಾಗೂ ದೇಶದ ರೈತರ ಸಂಕಷ್ಟಗಳ ಬಗ್ಗೆ ಕೇಂದ್ರದ ಗಮನಕ್ಕೆ ತಂದು, ರೈತರ ಪರವಾಗಿ ಧ್ವನಿ ಎತ್ತುವಂತೆ ಸಂಸದರಿಗೆ ಕೇಳಿಕೊಂಡರು.ರೈತರು, ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆ 2013ನ್ನು ಇಡೀ ದೇಶದಲ್ಲಿ ಮರು ಜಾರಿಗೊಳಿಸಬೇಕು. ಭೂ ಸ್ವಾಧೀನಕ್ಕೂ ಮುನ್ನ ರೈತರ ಲಿಖಿತ ಒಪ್ಪಿಗೆ ಮತ್ತು ಜಿಲ್ಲಾಧಿಕಾರಿ ದರಕ್ಕಿಂತ 4 ಪಟ್ಟು ಹೆಚ್ಚು ಪರಿಹಾರ ನೀಡುವ ನಿಬಂಧನೆಗಳನ್ನು ಜಾರಿಗೊಳಿಸಬೇಕು. ಲಖೀಂಪುರ ಖೇರಿ ಹತ್ಯಾಕಾಂಡದ ತಪ್ಪಿತಸ್ಥರನ್ನು ಶಿಕ್ಷಿಸಿ, ಸಂತ್ರಸ್ಥ ರೈತರಿಗೆ ನ್ಯಾಯ ಕೊಡಿಸಬೇಕು. 2020-21ರ ರೈತರ ಚಳವಳಿಯ ಎಲ್ಲಾ ಪ್ರಕರಣ ರದ್ದುಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಅವರು ಆಗ್ರಹಿಸಿದರು.
ಭಾರತವು ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯಿಂದ ಹೊರ ಬರಬೇಕು. ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನೂ ನಿಷೇಧಿಸಬೇಕು. 60 ವರ್ಷ ತುಂಬಿದ ರೈತರು, ರೈತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ತಿದ್ದುಪಡಿ ತರಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ರದ್ದುಪಡಿಸಬೇಕು. ಉದ್ಯೋಗ ಖಾತರಿಯಡಿ ವರ್ಷಕ್ಕೆ 200 ದಿನ ಕೆಲಸ, ದಿನಕ್ಕೆ ₹700 ಭತ್ಯೆ ನೀಡಬೇಕು. ಕೃಷಿಯನ್ನೂ ನರೇಗಾದೊಂದಿಗೆ ಜೋಡಿಸಲು ಕೇಂದ್ರಕ್ಕೆ ಒತ್ತಾಯಿಸುವಂತೆ ಅವರು ಕೋರಿದರು.ನಕಲಿ, ಕಳಪೆ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ಕಠಿಣ ಕಾನೂನು ರೂಪಿಸಬೇಕು. ಮೆಣಸಿನಕಾಯಿ, ಅರಿಶಿನ ಮತ್ತು ಇತರ ಮಸಾಲೆಗಳಿಗೆ ರಾಷ್ಟ್ರೀಯ ಆಯೋಗ ರಚಿಸಬೇಕು. ಸಂವಿಧಾನದ ಐದು ಶೆಡ್ಯೂಲ್ ಜಾರಿಗೊಳಿಸಬೇಕು. ನೀರು, ಅರಣ್ಯ ಮತ್ತು ಭೂಮಿ ಮೇಲಿನ ಆದಿವಾಸಿಗಳ ಹಕ್ಕುಗಳನ್ನು ಖಾತರಿಪಡಿಸುವ ಮೂಲಕ, ಕಂಪನಿಗಳಿಂದ ಆದಿವಾಸಿಗಳ ಭೂಮಿ ಲೂಟಿ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ರೈತರ ಮತ್ತು ಕಾರ್ಮಿಕರ ಸಾಲವನ್ನು ಸಂಪೂರ್ಣ ಮನ್ನಾ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸುವ ಮೂಲಕ ದಾವಣಗೆರೆ ಸಂಸದರು ರೈತರ ಧ್ವನಿಯಾಗಬೇಕು. ಇದರಿಂದ ರೈತರು ಮತ್ತು ಕಾರ್ಮಿಕರ ಬೇಡಿಕೆಗೆ ಸಂಸತ್ತಿನಲ್ಲಿ ಧ್ವನಿಯಾಗಿ ನಿಂತ ನಿಮ್ಮ ಬಗ್ಗೆ ಪ್ರತಿಯೊಬ್ಬ ರೈತರೂ ಹೆಮ್ಮೆ ಪಡುತ್ತಾರೆ ಎಂದು ಬಲ್ಲೂರು ರವಿಕುಮಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮಾಯಕೊಂಡ ಅಶೋಕ, ರಾಂಪುರ ಬಸವರಾಜ, ಅಣಬೇರು ಕುಮಾರಸ್ವಾಮಿ, ಐಗೂರು ಶಿವಮೂರ್ತಪ್ಪ, ಪ್ರತಾಪ ಮಾಯಕೊಂಡ, ನಾಗರಕಟ್ಟೆ ಜಯನಾಯ್ಕ, ಹೆಬ್ಬಾಳ ರಾಜಯೋಗಿ, ಮಂಜುನಾಥ, ಕೋಗಳಿ ಮಂಜುನಾಥ್ ಇತರರಿದ್ದರು. ಮನವಿ ಸ್ವೀಕರಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ನಿಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.
-----9ಕೆಡಿವಿಜಿ1, 2ರೈತ ಸಂಘಟನೆಗಳ ಒಕ್ಕೂಟದ ಮುಖಂಡ ಬಲ್ಲೂರು ರವಿಕುಮಾರ ಹಾಗೂ ಇತರರ ನೇತೃತ್ವದಲ್ಲಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ಎಂದು ದಾವಣಗೆರೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನರಿಗೆ ಮನವಿ ಸಲ್ಲಿಸಲಾಯಿತು.