ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ರೈತರ ಸಂಕಷ್ಟಗಳಿಗೆ ನೆರವಾಗಲು ಮೀನಮೇಷ ಎಣಿಸುವ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ತಾಲೂಕಿನ ಜಂಗಮಕೋಟಿ ಕ್ರಾಸ್ ಬಳಿ ಹಮ್ಮಿಕೊಂಡಿದ್ದ ರೈತ ಸಂಘದ ಸದಸ್ಯತ್ವ ಹಾಗೂ ಹಸಿರು ಶಾಲೂ ದೀಕ್ಷಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಜನರಿಗೆ ಅನ್ನ ನೀಡುತ್ತಿರುವುದು ರೈತ. ಇಂದು ತನ್ನ ಉಳಿವಿಗಾಗಿ ಹೋರಾಟದ ಹಾದಿ ಹಿಡಿದಿರುವುದು ವಿಪರ್ಯಾಸ ಎಂದರು.ರೈತ ವಿರೋಧಿ ನೀತಿ ಕೈಬಿಡಿ
ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಜನವಿರೋಧಿ ಕಾನೂನುಗಳನ್ನು ರಾಜ್ಯ, ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ರೈತರನ್ನು ಪಾತಾಳಕ್ಕೆ ದೂಡುತ್ತಿದೆ. ಸಬ್ ರಿಜಿಸ್ಟರ್ ಇಲಾಖೆಯಲ್ಲಿ ಬಹಳ ಬದಲಾವಣೆಗಳು ನಡೆದವು. 2020ರ ಹಿಂದೆ 5 ರಿಂದ 5.5 ಸಾವಿರ ಕೋಟಿ ಅಷ್ಟೇ ತೆರಿಗೆ ಸಂಗ್ರಹವಾಗುತ್ತಿತ್ತು. ಈಗ 26 ಸಾವಿರ ಕೋಟಿಗೆ ಹೋಗಿದೆ. ಸಿದ್ದಾರಾಮಯ್ಯನವರು ಬಜೆಟ್ ನಲ್ಲಿ ತಿಳಿಸಿದ್ದಾರೆ ಇಷ್ಟೆಲ್ಲಾ ತೆರಿಗೆ ಕಟ್ಟುತ್ತಿರುವುದು ರೈತರೇ ಎಂದರು.ರೇಷ್ಮೆ, ಹಾಲಿಗೆ ಉತ್ತಮ ದರ ನೀಡಿ
ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರ ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕು. ಶಿಡ್ಲಘಟ್ಟ ತಾಲೂಕು ರೇಷ್ಮೆ ಹಾಗೂ ಹಾಲು ಉತ್ಪಾದನೆ ಮಾಡುತ್ತಿರುವ ರೈತರಿಗೆ ಸೂಕ್ತ ಬೆಲೆ ನೀಡಬೇಕು. ರೈತರ ಬೆಳೆಗಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಈ ಹಿಂದೆ ಯಾವ ರೀತಿ ವಿತರಿಸುತ್ತಿದ್ದರೇ ಅದೇ ರೀತಿ ನಮಗೆ ವಿತರಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ತಹಸೀಲ್ದಾರ್ ಬಿ.ಎನ್. ಸ್ವಾಮಿಯವರಿಗೆ ನೀಡಿದರು.ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿ ನಂಜಪ್ಪ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ರಾಮಚಂದ್ರಪ್ಪ ಎ, ನಗರ ಘಟಕ ಅಧ್ಯಕ್ಷ ಬಿ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಪ್ಪ ,ಸುಂಡ್ರಳ್ಳಿ ಬೀರಪ್ಪ, ಹಾಗೂ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.