ಅಡಕೆ ಉಳಿಸಲು ರೈತರ ಹರಸಾಹಸ, ಹಿರೇಕೆರೂರು ತಾಲೂಕಲ್ಲಿ ಟ್ಯಾಂಕರ್ ಮೂಲಕ ನೀರು

KannadaprabhaNewsNetwork | Published : Apr 2, 2024 1:01 AM

ಸಾರಾಂಶ

ಮಳೆರಾಯನ ಅವಕೃಪೆಗೆ ತಾಲೂಕಿನಲ್ಲಿ ಬೆಳೆದ ಅಡಕೆ ಬೆಳೆ ಒಣಗುತ್ತಿದ್ದು, ರೈತರು ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದೊಡಗಿದೆ. ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ರೈತರ ಕನಸಿಗೆ ಬರಗಾಲವು ಆಘಾತ ನೀಡಿದೆ.

ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರುಮಳೆರಾಯನ ಅವಕೃಪೆಗೆ ತಾಲೂಕಿನಲ್ಲಿ ಬೆಳೆದ ಅಡಕೆ ಬೆಳೆ ಒಣಗುತ್ತಿದ್ದು, ರೈತರು ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದೊಡಗಿದೆ. ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ರೈತರ ಕನಸಿಗೆ ಬರಗಾಲವು ಆಘಾತ ನೀಡಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಿಂಗಾರು ಸಹ ಬರದೇ ರೈತರು ಕಂಗಾಲಾಗುಂತೆ ಮಾಡಿದೆ. ಮಳೆ ಪ್ರಮಾಣ ಕಡಿಮೆಯಾದ ಕಾರಣ ಅಂತರ್ಜಲ ಸಂಪೂರ್ಣ ಕುಸಿತಗೊಂಡಿದೆ. ಬೋರ್‌ವೆಲ್‌ಗಳಲ್ಲಿ ನೀರು ಬಾರದೆ ಬತ್ತಿ ಹೋಗಿವೆ. ಇದರಿಂದ ಅಡಕೆ ಬೆಳೆ ಕಾಪಾಡಿಕೊಳ್ಳುವದು ತಾಲೂಕಿನ ರೈತರಿಗೆ ಸವಾಲಾಗಿ ಪರಿಣಮಿಸಿದೆ.ಅಡಕೆ ಧಾರಣೆ ಸ್ಥಿರವಾಗಿರುವ ಕಾರಣ ಇದರತ್ತ ತಾಲೂಕಿನ ಬಹುತೇಕ ರೈತರು ಆಕರ್ಷಿತರಾಗಿದ್ದಾರೆ. ಅರೆ ಮಲೆನಾಡು ಎಂಬ ಹಣೆಪಟ್ಟಿಯಿರುವ ತಾಲೂಕಿನಲ್ಲಿ ಅಡಕೆ ಕ್ಷೇತ್ರ ಹೆಚ್ಚಳವಾಗುತ್ತಿರುವುದು ತಾಲೂಕಿನ ಕೃಷಿ ಕ್ಷೇತ್ರದ ಬದಲಾವಣೆಯ ದಿಕ್ಸೂಚಿಯಾಗಿದೆ. ಆದರೆ ಮಳೆ ಬಾರದೇ ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದೇ ಬೆಳೆ ಉಳಿಸಿಕೊಳ್ಳುವದು ಕಷ್ಟಸಾಧ್ಯವಾಗಿದೆ. ಟ್ಯಾಂಕರ್ ಮೂಲಕ ಬೆಳೆಗೆ ನೀರು: ಇರುವ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ಹೊಸ ಬೋರ್‌ವೆಲ್ ಕೊರೆಸಿದರೆ ನೀರು ಸಿಗುತ್ತಿಲ್ಲ. ಇದರಿಂದ ಅಡಕೆ ಬೆಳೆ ಒಣಗುತ್ತಿದೆ. ಈ ಕಾರಣಕ್ಕೆ ರೈತರು ಬೆಳೆಗೆ ಟ್ಯಾಂಕರ್ ಮೂಲಕ ನೀರು ತರಿಸಿ ನೀರುಣಿಸುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ ಸುಮಾರು ೫೦೦ರಿಂದ ೭೦೦ ರು. ಗಳು ಇದ್ದು ಬೆಳೆ ಕಾಪಾಡಿಕೊಳ್ಳಲು ಲಕ್ಷಾಂತರ ರು.ಗಳನ್ನು ವ್ಯಯಮಾಡುವಂತ ಪರಿಸ್ಥಿತಿ ಒದಗಿ ಬಂದಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೂ ಅಡಕೆ ಸಸಿಗಳು ಸುಡುವ ಬಿಸಿಲಿಗೆ ಮತ್ತೆ ಬಾಡಿ ಒಣಗುತ್ತಿವೆ. ಮುಂಗಾರು ಪ್ರಾರಂಭವಾಗುವುದು ಇನ್ನು ಎರಡುವರಿ ತಿಂಗಳಿದ್ದು, ಅಲ್ಲಿಯವರೆಗೆ ಅಡಕೆ ಸಸಿ ಕಾಪಾಡಿಕೊಳ್ಳುವದು ಕಠಿಣ ಸಾದ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ನಾಟಿ ಮಾಡಿದ ಎಳೆ ಸಸಿಗಳು ನೀರು ಕಾಣದೇ ಬತ್ತಿ ಹೋಗಿದ್ದರೆ, ಇನ್ನು ಫಲಕ್ಕೆ ಬಂದ ಅಡಕೆಗೆ ನೀರು ಅತೀ ಅವಶ್ಯವಾಗಿದ್ದು, ಬೆಳೆ ಒಣಗುವ ಜೊತೆ ಫಸಲಿನ ಇಳುವರಿ ಕಡಿಮೆಯಾಗುತ್ತಿದೆ.

ತಾಲೂಕಿನಲ್ಲಿ ಸದ್ಯ ೨೫೦೦ ಎಕರೆ ಪ್ರದೇಶದಲ್ಲಿ ಅಡಕೆ ಫಸಲಿಗೆ ಬಂದಿದ್ದು, ೩೦೦೦ ಎಕರೆ ಕ್ಷೇತ್ರದಲ್ಲಿ ನಾಟಿ ಮಾಡಲಾಗಿದೆ. ರೈತರು ಇದಕ್ಕೆ ನೀಡಿದ ಪ್ರಾಮುಖ್ಯ ಬೇರೆ ಯಾವುದಕ್ಕೂ ನೀಡುತ್ತಿಲ್ಲ. ಕಾರಣ ಸ್ಥಿರ ಹಾಗೂ ಉತ್ತಮ ಧಾರಣೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವ ಕಾರಣ ಪ್ರತಿ ವರ್ಷ ತಾಲೂಕಿನಲ್ಲಿ ೩ ಸಾವಿರದಿಂದ ೪ ಸಾವಿರ ಎಕರೆ ಪ್ರದೇಶದಲ್ಲಿ ಹೊಸದಾಗಿ ಅಡಕೆ ತೋಟಗಳನ್ನು ಮಾಡಲಾಗುತ್ತಿದೆ. ಈ ವರ್ಷದ ಪರಿಸ್ಥಿತಿ ನೋಡಿದರೆ ರೈತರು ಯಾಕಾದರೂ ಅಡಕೆ ಬೆಳೆ ಮಾಡಿದೆವು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.ಲಕ್ಷಾಂತರ ಹಣ ನಷ್ಟ:ಸದ್ಯ ಇರುವ ಬೋರ್‌ವೆಲ್‌ಗಳಲ್ಲಿ ನೀರು ಬಾರದ ಕಾರಣ ಬೆಳೆ ರಕ್ಷಣೆಗೆ ಹೊಸ ಬೋರ್‌ವೆಲ್ ಕೊರೆಸಲು ರೈತರು ಮುಂದಾಗುತ್ತಿದ್ದಾರೆ. ಹೊಸ ಬೋರ್‌ವೆಲ್ ಕೊರೆಸಿದರೂ ನೀರು ಬಾರದೇ ಲಕ್ಷಾಂತರ ಹಣ ಖರ್ಚಾಗುತ್ತಿದೆ ಹೊರತು ನೀರು ಮಾತ್ರ ದೊರಕುತ್ತಿಲ್ಲ. ತಾಲೂಕಿನಲ್ಲಿ ಕೆಲವೊಂದು ರೈತರು ಅನಿವಾರ್ಯವಾಗಿ ೨-೩ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಬಾರದೆ ನಷ್ಟ ಅನುಭವಿಸಿದ ಉದಾಹರಣೆಗಳು ಇವೆ.

ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯಲು ಖರ್ಚು ವೆಚ್ಚ ಹೆಚ್ಚಾಗುತ್ತಿರುವುದರಿಂದ ಅಡಕೆ ನಾಟಿ ಮಾಡಿದ್ದೇವೆ. ಆದರೆ ಈ ವರ್ಷ ಮಳೆ ಬಾರದೇ ಬೋರ್‌ವೆಲ್‌ನಲ್ಲಿ ನೀರು ಬಾರದೇ ಅಡಕೆ ಫಸಲು ಒಣಗುತ್ತಿದೆ. ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುವದು ಅನಿವಾರ್ಯವಾಗಿದೆ. ಖರ್ಚು ಜಾಸ್ತಿ ಬರುತ್ತದೆ ಅದರೆ ಹೆಚ್ಚು ಬಂಡವಾಳ ಹಾಕಿ ಹಚ್ಚಿದ ಗಿಡಗಳನ್ನು ಮುಂಗಾರು ಮಳೆ ಬರುವ ತನಕ ಕಾಪಾಡಿಕೊಂಡರೆ ಮುಂದೆ ಉತ್ತಮ ಲಾಭ ಬರಬಹುದೆಂಬ ಆಶಾ ಭಾವನೆ ಇದೆ ಬುರಡಿಕಟ್ಟಿಯ ಅಡಕೆ ಬೆಳೆಗಾರ ಈರಪ್ಪ ಸಿದ್ದಪ್ಪಗೌಡ್ರ ಹೇಳಿದರು.

Share this article