ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯ ಸರ್ಕಾರ ದಿನದ ೨೪ ಗಂಟೆ ಗಣಿಗಾರಿಕೆಗೆ ಅವಕಾಶ ನೀಡಲು ಹೊರಟಿರುವುದನ್ನು ಜಿಲ್ಲಾ ರೈತಸಂಘ ವಿರೋಧ ವ್ಯಕ್ತಪಡಿಸಿದ್ದು, ತಾಲೂಕಿನಲ್ಲಿ ರಾಯಲ್ಟಿ ವಂಚಿಸಿ ಕಲ್ಲು ಸಾಗಾಣಿಕೆ ಆಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದೆ.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ೨೪ ಗಂಟೆ ಗಣಿಗಾರಿಕೆ ನಡೆಸಿದರೆ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದರು. ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಜೊತೆಗೆ ರಾಯಲ್ಟಿ ವಂಚಿಸಿ ಟಿಪ್ಪರ್‌ಗಳು ಹಗಲು ರಾತ್ರಿ ಕಲ್ಲು ಲೂಟಿ ಮಾಡುತ್ತಿವೆ. ಅಲ್ಲದೆ ಓವರ್ ಲೋಡ್ ಕಲ್ಲು ಸಾಗಾಣಿಕೆಯಿಂದ ರಸ್ತೆ, ಪರಿಸರ ಹಾಳಾಗುತ್ತಿದೆ. ಇದೆಲ್ಲ ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ಕ್ವಾರಿ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳನ್ನು ಒಂದು ಪರ್ಮಿಟ್ ತೆಗೆದುಕೊಂಡು ಹತ್ತಾರು ಟ್ರಿಪ್ ಕಲ್ಲು ಮತ್ತು ಕ್ರಷರ್ ಉತ್ಪನ್ನ ಕದ್ದು ಸಾಗಿಸುತ್ತಿದ್ದಾರೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ? ಇಷ್ಟೆಲ್ಲ ಅಕ್ರಮ, ಮೋಸ ನಡೆಯುತ್ತಿದೆ ಎಂದರು.
೧೬ ಆಕ್ಸಲ್ ವೀಲ್ ವಾಹನ ಸಂಚಾರಕ್ಕೆ ಅವಕಾಶ ಇಲ್ಲ:೧೬ ಆಕ್ಸಲ್ ವೀಲ್ ವಾಹನ ತಾಲೂಕಿನ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ. ಆದರೂ ಸಂಚರಿಸುತ್ತಿವೆ ಎಂದು ರಾಜ್ಯ ರೈತಸಂಘದ ಕಾರ್ಯದರ್ಶಿ ಡಾ.ಗುರುಪ್ರಸಾದ್ ಆರೋಪಿಸಿದರು. ೬ ಆಕ್ಸಲ್ ವೀಲ್ ವಾಹನಗಳು ಸಂಚಾರಕ್ಕೆ ತಾಲೂಕಿನ ರಸ್ತೆಗಳು ಯೋಗ್ಯವಾಗಿವೆ. ಆದರೂ ೧೬ ಆಕ್ಸಲ್ ವೀಲ್ ಟಿಪ್ಪರ್‌ಗಳ ಸಂಚಾರ ಇದೆ. ರಸ್ತೆ ಹಾಳಾಗುತ್ತದೆ ಎಂದು ಪಿಡಬ್ಲ್ಯೂಡಿ ಹಾಗೂ ಆರ್‌ಟಿಒಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಕಾಯಂ ಆರ್‌ಟಿಒ ಇಲ್ಲ: ಜಿಲ್ಲೆಯ ದುರಂತ ಎಂದರೆ ಜಿಲ್ಲೆಯಲ್ಲಿ ಕಾಯಂ ಆರ್‌ಟಿಒ ಇನ್ಸ್‌ಪೆಕ್ಟರ್‌ಗಳು ಇಲ್ಲ, ಬೆಂಗಳೂರಿನ ಆರ್‌ಟಿಒ ಇನ್ಸ್‌ಪೆಕ್ಟರ್ ತಿಂಗಳು ಕಾಲ ಕೆಲಸ ನಿರ್ವಹಿಸಿ ಹೋಗ್ತಾರೆ ಎಂದು ವ್ಯಂಗವಾಡಿದರು.ಕೇರಳ ರಾಜ್ಯಕ್ಕೆ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳು ರಾತ್ರಿ ವೇಳೆಯೂ ತೆರಳುತ್ತಿದೆ. ಅರಣ್ಯ, ಪೊಲೀಸ್ ಇಲಾಖೆ ಚೆಕ್ ಪೋಸ್ಟ್‌ಗಳಿದ್ದರೂ ತೆರಳುತ್ತಿವೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ ಪೊಲೀಸ್, ಅರಣ್ಯ ಇಲಾಖೆ ತಪಾಸಣೆ ಬಿಗಿಗೊಳಿಸದಿದ್ದರೆ ರೈತರೇ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರೈತಸಂಘದ ಮಹೇಶ್ ಸೇರಿದಂತೆ ಹಲವರಿದ್ದರು.