ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸರ್ಕಾರ ಹಾಗೂ ನ್ಯಾಯಾಲಯದ ಸೂಚನೆಯಂತೆ ಸ್ಥಳೀಯ ಕೆಲವು ಪ್ರದೇಶಗಳನ್ನು ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ರೈತರು ಜನಸಾಮಾನ್ಯರೊಂದಿಗೆ ಅರಣ್ಯ ಇಲಾಖೆ ಸ್ಪಂದಿಸಿ ಸರ್ವೇ ಕಾರ್ಯ ನಡೆಸಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ನೇತೃತ್ವದಲ್ಲಿ ಸೋಮವಾರಪೇಟೆಯ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಎ.ಎ. ಗೋಪಾಲ ರವರಿಗೆ ಮನವಿ ಸಲ್ಲಿಸಲಾಯಿತು.ನಂತರ ಮಾತನಾಡಿದ ಅರುಣ್ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳು ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದು, ಸ್ಥಳೀಯವಾಗಿ ರೈತ ಕುಟುಂಬಗಳೇ ವಾಸವಾಗಿದ್ದಾರೆ. ಸರ್ಕಾರ ಮತ್ತು ನ್ಯಾಯಾಲಯಗಳ ಸೂಚನೆಯಂತೆ ಕೆಲವು ಪ್ರದೇಶಗಳನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಲಾಗಿದೆ. ಆ ಸ್ಥಳಗಳನ್ನು ಗುರುತಿಸಿ ಅಧಿಸೂಚಿಸುವ ಸಲುವಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು ಇಲಾಖೆಯಿಂದ ಸರ್ವೆ ಕಾರ್ಯ ನಡೆಸುವಾಗ ಜನ ಪ್ರತಿನಿಧಿಗಳಿಗಾಗಲಿ, ಸ್ಥಳೀಯರಿಗಾಗಲಿ ತಿಳಿಸದೆ ಸರ್ವೇ ನಡೆಸುತ್ತಿರುವುದರಿಂದ ಸ್ಥಳೀಯರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇದನ್ನು ಎಲ್ಲರ ಗಮನಕ್ಕೆ ತಂದು ಸ್ಥಳೀಯವಾಗಿ ವಾಸಿಸುತ್ತಿರುವ ಜನಸಾಮಾನ್ಯರ ಸಮ್ಮುಖದಲ್ಲಿ ಸರ್ವೆ ಕಾರ್ಯ ಮಾಡಿ ಸರ್ಕಾರ ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದರು.ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳನ್ನು ನೂರಾರು ವರ್ಷಗಳಿಂದ ಸೆಟಲ್ಮೆಂಟ್ ಸರ್ವೆ ನಡೆಸದೇ, ಗ್ರಾಮಗಳ ಗಡಿ ಗುರುತು ಮಾಡದೆ ಇರುವುದರಿಂದ ಗ್ರಾಮ ನಕ್ಷೆಗಳಲ್ಲಿ ಕೆಲವು ಜಮೀನುಗಳ ನಕ್ಷೆಗಳು ವ್ಯತ್ಯಾಸವಾಗಿದೆ. ಕೆಲವು ಗ್ರಾಮಗಳ ಒಂದೇ ಸರ್ವೆ ನಂಬರುಗಳನ್ನು ಹಾರಂಗಿ ಮುಳುಗಡೆ ಪ್ರದೇಶಕ್ಕೆ ಬದಲಿ ಜಾಗವಾಗಿ ಪರಿಭಾವಿತ ಅರಣ್ಯ ಪ್ರದೇಶ, ಸೆಕ್ಷನ್ 4 ಎಲ್ಲದರಲ್ಲೂ ಸೇರಿಸಲಾಗಿದೆ. ಕೆಲವರ ಜಾಗಗಳನ್ನು ಪಿ.ಟಿ ಶೀಟ್ ಮಾಡಿ ಗ್ರಾಮ ನಕ್ಷೆಯಲ್ಲಿ ತೋರಿಸಲಾಗಿರುತ್ತದೆ. ಕೆಲವರಿಗೆ ಗ್ರಾಂಟ್ ಆದ ಜಾಗಗಳು ದುರಸ್ತಿಯಾಗದೇ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುವವರಿಗೆ ಮತ್ತು ಸಾಗುವಳಿ ಮಾಡಿಕೊಂಡುಬಂದಿರುವವರಿಗೆ ಹಕ್ಕುಪತ್ರಗಳನ್ನು ಕೊಡಲು ಬಾಕಿ ಇರುವುದರಿಂದ ತಾವುಗಳು ನಡೆಸುತ್ತಿರುವ ಸರ್ವೆ ಕಾರ್ಯ, ಅಧಿಸೂಚನೆಗಳು ಯಾರಿಗೂ ತೊಂದರೆಯಾಗಬಾರದು ರೈತರೇ ಕಾಡಂಚಿನಲ್ಲಿ ವಾಸ ಮಾಡುತ್ತಾ ಅರಣ್ಯ ರಕ್ಷಿಸಿಕೊಂಡು ಬರುತ್ತಿದ್ದು ಪ್ರಾಣಿ ಪಕ್ಷಿಗಳಿಂದ ಆಗಿರುವ ನಷ್ಟಗಳಿಗೆ ಇಲಾಖೆ ಮತ್ತು ಸರ್ಕಾರಗಳಿಂದ ಸ್ಪಂದಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತುರ್ತಾಗಿ ಸ್ಪಂದಿಸುವಂತೆ ಅವರು ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್. ಸರ್ಕಾರದ ಆದೇಶದಂತೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಸೇರಿ ಸಮಿತಿ ರಚನೆ ಮಾಡಿ ಸಭೆ ನಡೆಸಲಾಗುತ್ತಿದೆ. ಮುಂದಿನ ಸಭೆಯಲ್ಲಿ ಇದನ್ನು ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.ನಂತರ ಸಮಿತಿ ಸದಸ್ಯರು ತಹಸೀಲ್ದಾರ್, ಎಡಿಎಲ್‌ಆರ್ ಅವರನ್ನು ಭೇಟಿ ಮಾಡಿ ಇದರ ಬಗ್ಗೆ ಚರ್ಚೆ ನಡೆಸಲಾಯಿತು.ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್, ಪದಾಧಿಕಾರಿಗಳಾದ, ತ್ರಿಶೂಲ್, ಶಿವಕುಮಾರ್, ಶ್ರೀನಿಧಿ ಹಾಗೂ ಸಮಿತಿ ಸದಸ್ಯರು ಇದ್ದರು.