ಹಾವೇರಿ: ಸಚಿವರು ನೀಡಿದ ಭರವಸೆ ಮೇರೆಗೆ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಆದರೆ, ನಮ್ಮ ಬೇಡಿಕೆಗಳನ್ನು ಬರುವ ಜನವರಿ ಅಂತ್ಯದೊಳಗಾಗಿ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾಧಿಕಾರಿಗಳು, ರೈತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಮಂಗಳವಾರ ಸಭೆ ನಡೆಸಿ, ಆದಷ್ಟು ಶೀಘ್ರವಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚಿಸಿ ಹೋರಾಟ ಹಿಂಪಡೆದು ಅವರು ಮಾತನಾಡಿದರು.ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 12 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬುಧವಾರ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಬೇಡ್ತಿ- ವರದಾ ನದಿ ಜೋಡಣೆ, ಬೆಳೆವಿಮೆ, ಬೆಳೆಹಾನಿ ಪರಿಹಾರ, ವಿದ್ಯುತ್ ತಾರತಮ್ಯ, ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ರೈತರ ಎಲ್ಲ ಬೇಡಿಕೆಗಳನ್ನು ಮುಂಬರುವ ಜ. ೩೦ರೊಳಗಾಗಿ ಈಡೇರಿಸಬೇಕು. ಇಲ್ಲವಾದರೆ ಹೆದ್ದಾರಿ ತಡೆ ಹಾಗೂ ಜೈಲ್ ಭರೋ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆ ಸ್ಥಗಿತಗೊಳಿಸುವ ವೇಳೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಿ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಅವರು ವಿವಿಧ ೧೮ ಬೇಡಿಕೆಗಳ ಮನವಿ ಪ್ರತಿಯನ್ನು ನೀಡಿ ಮತ್ತೊಮ್ಮೆ ಮನವರಿಕೆ ಮಾಡಿದರು. ಉಗ್ರ ಚಳವಳಿಗೆ ಆಸ್ಪದ ನೀಡದೆ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಬೆಳೆವಿಮೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ಮಾಡಿಸಿ ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಪರಿಹಾರ ಒದಗಿಸುತ್ತೇವೆ. ಹಾಲಿನ ಸಹಾಯಧನ ಬಿಡುಗಡೆ ಬಗ್ಗೆ ಕ್ರಮವಹಿಸಲಾಗುವುದು. ಪಶುವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವುದು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರದ ಮಟ್ಟದಲ್ಲಿ ಆಗಬೇಕು. ಎಲ್ಲ ಸಮಸ್ಯೆಗಳನ್ನೂ ಆದಷ್ಟು ಶೀಘ್ರದಲ್ಲಿ ಪರಿಹರಿಸುವ ಕೆಲಸ ಮಾಡುತ್ತೇವೆ ಎಂದು ಭವರಸೆ ನೀಡಿದರು.ಪ್ರತಿಭಟನೆಯಲ್ಲಿ ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಶ್ರೀಗಳು ಬೆಂಬಲ ನೀಡಿ ಮಾತನಾಡಿದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್.ವಿ. ಸಂತಿ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಗಂಗಣ್ಣ ಎಲಿ, ಮಹ್ಮದ್‌ಗೌಸ್ ಪಾಟೀಲ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಶಂಕ್ರಣ್ಣ ಶಿರಗಂಬಿ, ಚನ್ನಪ್ಪ ಮರಡೂರ, ಪ್ರಭುಗೌಡ ಪ್ಯಾಟಿ, ಮಲ್ಲೇಶಪ್ಪ ಪರಪ್ಪನವರ, ಮುತ್ತಪ್ಪ ಗುಡಗೇರಿ, ರಾಜುತರ್ಲಘಟ್ಟ, ಸುರೇಶಚಲವಾದಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.ಸತ್ತ ಮೇಲೆ ಸಾಂತ್ವನ ಹೇಳುವ ಬದಲು ಇದ್ದಾಗ ರೈತರಿಗೆ ಧೈರ್ಯ ಹೇಳುವ ಕೆಲಸ ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕು. ಕೃಷಿ ಇಲಾಖೆ ಜೆಡಿ ಅವರು ರೈತರ ಬಗ್ಗೆ ಕಾಳಜಿ ವಹಿಸಬೇಕು. ನಾವೇನು ನಕ್ಸಲೈಟ್, ಉಗ್ರಗಾಮಿಗಳಲ್ಲ. ಬೆಳೆ ಹಾನಿ ಪ್ರದೇಶಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ವರದಿ ನೀಡಬೇಕು. ಕಚೇರಿಯಲ್ಲಿ ಕುಳಿತು ಅಂದಾಜು ವರದಿ ಮಾಡಬೇಡಿ. ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ಎಲ್ಲಾ ಶಾಸಕರು ಧ್ವನಿ ಎತ್ತಿದ್ದಾರೆ. ಶಾಸಕರ ಮೇಲೆ ನಂಬಿಕೆ ಇಡೋಣ. ಪದೇ ಪದೇ ಒತ್ತಡ ಹಾಕಿ ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.