ಕೊಪ್ಪಳ: ತುಂಗಭದ್ರಾ ಬಲದಂಡೆ ಕಾಲುವೆಗೆ ಕುಡಿವ ನೀರಿನ ಕೋಟಾದಡಿ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದು, ವಿಜಯನಗರ ಕಾಲುವೆಗೆ ನೀರು ಹರಿಸಲು ದಿನಾಂಕ ನಿಗದಿಗೆ ಎಂದು ಒತ್ತಾಯಿಸಿ ಹುಲಗಿಯ ನೀರು ಬಳಕೆದಾರರ ಸಂಘದಿಂದ ಹೊಸ ಲಿಂಗಾಪುರದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿದೆ. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗುವ ಸಾಧ್ಯತೆಯಿದೆ. ಈ ವೇಳೆ ಕುಡಿಯುವ ನೀರಿನ ಕೋಟಾದಲ್ಲಿಯೇ ಬಲದಂಡೆ ಭಾಗದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಐಸಿಸಿ ಸಭೆಯ ನಿರ್ಣಯದಂತೆ ಆಂಧ್ರ ಕೋಟಾದಡಿ ಅವರು ಒಪ್ಪಿಗೆ ಕೊಟ್ಟರೆ ಬಲದಂಡೆಯ ಭಾಗದ ಕಾಲುವೆಗೆ ನೀರು ಹರಿಸುವುದಾಗಿ ನಿರ್ಧರಿಸಲಾಗಿತ್ತು.ಆದರೆ ಈಗ ಬಲದಂಡೆಯ ಭಾಗಕ್ಕೆ ಹರಿಸಲಾಗುತ್ತಿರುವ ನೀರು ಯಾವ ಕೋಟಾದಲ್ಲಿ ಎನ್ನುವುದನ್ನು ನೀರಾವರಿ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈಗಾಗಲೇ ಎಲ್ಲ ಕಾಲುವೆಗಳ ಕೋಟಾ ಮೀರಿಯೂ ಎಚ್ಎಲ್, ಎಲ್ಎಲ್ ಮುಖ್ಯ ಕಾಲುವೆಗಳಿಗೆ ೨.೫ ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ನಡೆದುಕೊಳ್ಳಲಿ. ರೈತರು ಕಾಲುವೆಗೆ ನೀರು ಬರುತ್ತದೆ ಎನ್ನುವ ಧೈರ್ಯದಿಂದಲೇ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನೀರು ಕೊರತೆ ಮಧ್ಯೆ ಇಲಾಖೆ ಅಧಿಕಾರಿಗಳು, ಸರ್ಕಾರ ತಪ್ಪು ನಿರ್ಧಾರ ಕೈಗೊಂಡರೆ ರೈತರಿಗೆ ದೊಡ್ಡ ನಷ್ಟವಾಗಲಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗಾಗಿ ಮೀಸಲಿರಿಸಿದ ನೀರನ್ನು ಬಳಕೆ ಮಾಡಬಾರದು. ಬಚಾವತ್ ತೀರ್ಪಿನ ಅನುಸಾರ ವಿಜಯನಗರ ಕಾಲುವೆಗಳಿಗೆ ವರ್ಷದ ೧೧ ತಿಂಗಳು ನೀರು ನಿರಂತರ ಹರಿಸಬೇಕು ಎನ್ನುವುದಿದೆ. ಸರಿಯಾಗಿ ನೀರು ಹರಿಸಬೇಕು. ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟಿಸಬೇಕು. ಮೇ ೧೦ರವರೆಗೂ ನೀರು ಹರಿಸಬೇಕು ಎನ್ನುವುದು ನಮ್ಮ ಒತ್ತಾಯ. ಸರ್ಕಾರ ಹಾಗೂ ನೀರಾವರಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಭೇಟಿ: ಪ್ರತಿಭಟನಾ ಧರಣಿ ಸ್ಥಳಕ್ಕೆ ತುಂಗಭದ್ರಾ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಬಸವರಾಜ ಭೇಟಿ ನೀಡಿ ರೈತರ ಬೇಡಿಕೆ ಆಲಿಸಿದರು. ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಬಲದಂಡೆಯ ಭಾಗದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದರು. ವಿಜಯನಗರ ಕಾಲುವೆಗೆ ನೀರು ಹರಿಸುವ ದಿನಾಂಕವನ್ನು ಇನ್ನೆರಡು ದಿನಗಳಲ್ಲಿ ಪ್ರಕಟ ಮಾಡುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ಪರಣ್ಣ ಮುನವಳ್ಳಿ ಹಾಗೂ ಮಂಜುಳಾ ಕರಡಿ ಆಗಮಿಸಿ ಬೆಂಬಲ ಕೋರಿದರು. ರೈತ ಮುಖಂಡರಾದ ವೆಂಕಪ್ಪ ಹೊಸಳ್ಳಿ, ವಿಶ್ವನಾಥ ರಾಜು, ಸುದರ್ಶನ ಆನೆಗೊಂದಿ, ಹುಲಗಪ್ಪ ಗಡದಾ, ಸಿದ್ದರಾಮಸ್ವಾಮಿ, ವೆಂಕಟರಡ್ಡಿ, ಪ್ರಭುರಾಜ ಪಾಟೀಲ್ ಸೇರಿದಂತೆ ನೀರು ಬಳಕೆದಾರರ ಸಂಘದ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.