ಲಾರಿ ಚಾಲಕನ ಕೃಷಿ ಪಯಣ

KannadaprabhaNewsNetwork | Published : Dec 16, 2024 12:49 AM

ಸಾರಾಂಶ

ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ. ಸ್ವ-ಉದ್ಯೋಗ ಮಾಡುವ ನಿಟ್ಟಿನಲ್ಲಿ, ಪೂರ್ವಜರಿಂದ ಬಂದಿದ್ದ ೩೦ ಗುಂಟೆ ಜಮೀನಿನಲ್ಲಿ ಗುಲಾಬಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಮಹಾತ್ಮಗಾಂಧಿ ನರೇಗಾ ಯೋಜನೆಯ ನೆರವು ಪಡೆದು ಲಾರಿ ಚಾಲಕರೊಬ್ಬರು, ಈಗ ಗುಲಾಬಿ ಹೂ ಬೆಳೆದು ಸ್ವತಃ ಊರಿನಲ್ಲೇ ಕೈತುಂಬ ಆದಾಯ ಗಳಿಸುತ್ತಿದ್ದಾರೆ. ತಾಲೂಕಿನ ಅರಾಭಿಕೊತ್ತನೂರ ಗ್ರಾಪಂನ ಚಿಕ್ಕಅಯ್ಯೂರು ಸತೀಶ್ ಉದ್ಯೋಗ ಖಾತ್ರಿಯಡಿ, ಹೂಬೆಳೆದು, ಹೊಸ ಬದುಕು ರೂಪಿಸಿಕೊಂಡಿದ್ದಾರೆ.ಬದುಕು ಕಟ್ಟಕೊಟ್ಟ ಕೃಷಿ

ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ ೩೦ ಗುಂಟೆ ಜಮೀನಿನಲ್ಲಿ ನೀಲಗಿರಿ ಹಾಕಿದ್ದರು. ಆದರೆ ಅದರಿಂದ ಹೆಚ್ಚು ಪ್ರಯೋಜನವೇನು ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ. ಸ್ವ-ಉದ್ಯೋಗ ಮಾಡುವ ನಿಟ್ಟಿನಲ್ಲಿ, ಜಮೀನಿನಲ್ಲಿದ್ದ ನೀಲಗಿರಿ ಸಂಪೂರ್ಣವಾಗಿ ತೆಗೆದು, ಪಕ್ಕದ ಜಮೀನಿನಿಂದ ನೀರು ಪಡೆದು ಕೃಷಿ ಮಾಡಲು ಮುಂದಾದರು.

ಆದರೆ ಯಾವ ಬೆಳೆ ಬೆಳೆಯಬೇಕೆಂಬ ಯೋಚನೆಗೆ ಬಿದ್ದ ಸತೀಶ್‌ಗೆ ಸಾರ್ವಕಾಲಿಕ ಲಾಭದ ಬೆಳೆಯಾಗಿ ಕಂಡಿದ್ದು ಗುಲಾಬಿ. ಅಲ್ಲದೆ ಗುಲಾಬಿ ಹೂ ಬೆಳೆಯಲು ನರೇಗಾದಡಿಯಲ್ಲಿ ನೆರವು ನೀಡುವ ಮಾಹಿತಿ ಪಡೆದ ಅವರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೂ ಬೆಳೆಯುವ ಬಗ್ಗೆ ತಿಳಿದುಕೊಂಡರು.ಗುಲಾಬಿಯಿಂದ ಆದಾಯ

ತಮಿಳುನಾಡಿನಿಂದ ೧೩೦೦ ಮೆರಾಬುಲ್ ಕೆಂಪು ತಳಿಯ ಗುಲಾಬಿ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಸಿಕೊಂಡಿದ್ದು, ಸತೀಶ್ ಕುಟುಂಬದವರೇ ಗುಲಾಬಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ನರೇಗಾದಿಂದ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ ೭೨೫೧೨ ರುಪಾಯಿ ನೆರವು ದೊರೆತಿದೆ. ಈಗ ರೈತ ಸತೀಶ್ ತಿಂಗಳಿಗೆ ಸರಾಸರಿ ೪೦ ರಿಂದ ೫೦ ಸಾವಿರ ಆದಾಯ ಗಳಿಸುತ್ತಿದ್ದಾರೆ.

ಉದ್ಯೋಗ ಖಾತ್ರಿ ಬಳಸಿಕೊಳ್ಳಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್‌, ಲಾರಿ ಚಾಲಕನಾಗಿದ್ದ ತಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಉತ್ತಮ ಆದಾಯ ಗಳಿಸುತ್ತಿದ್ದೇನೆ. ತೋಟವನ್ನ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಉತ್ತಮ ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ಬಡ ರೈತರಿಗೆ ತುಂಬ ಉಪಯುಕ್ತವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Share this article