6 ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ । ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ನಾಗೇಶ್ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಹಾಸನಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಮಾ.೬ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್. ನಾಗೇಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಅಡಿಯಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ, ಆಟಲ್ ಬಿಹಾರಿ ವಾಜಪೇಯಿ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಇತರೆ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಗೆ ತಮ್ಮ ಕೆಲಸದ ಯಾವುದೇ ಭದ್ರತೆ ಇರುವುದಿಲ್ಲ. ಈ ವಸತಿ ಶಾಲೆಗಳಲ್ಲಿ ಸರಿಸುಮಾರು ೨೧೦೦ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಅಷ್ಟೂ ಸ್ಥಾನದಲ್ಲಿ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಸಮಾಜ ಕಲ್ಯಾಣ ಇಲಾಖೆ ಕೊಡುವ ಗೌರವ ಧನದಲ್ಲಿ ಕಾಯಂ ಶಿಕ್ಷಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಸುಮಾರು ಎರಡರಿಂದ ೧೪ ವರ್ಷಗಳ ವರೆಗೆ ಇದೇ ವಸತಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸಮಸ್ಯೆಯನ್ನು ಕೇಳುವವರು ಯಾರು? ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ನ್ಯಾಯಾಲಯದ ಆದೇಶವನ್ನು ಕೂಡ ಪಾಲಿಸದ ವಸತಿ ಶಿಕ್ಷಣ ಇಲಾಖೆ ವೇತನದಲ್ಲೂ ಕೂಡ ತಾರತಮ್ಯ ಮಾಡುತ್ತಿದೆ. ಪ್ರತಿ ವರ್ಷವು ಹತ್ತನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ನೀಡಿದರೂ ನಮ್ಮ ವೇತನ ಗಣನೆಗೆ ಬರುವುದಿಲ್ಲ. ಸುಮಾರು ೪೫೦ ಜನ ಶಿಕ್ಷಕರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದು, ಭದ್ರತೆ ನೀಡಲು ಕೋರಿದ್ದೇವೆ ಎಮದು ಹೇಳಿದರು.
ನ್ಯಾಯಾಲಯವು ಕೂಡ ನಮ್ಮನ್ನು ಮುಂದಿನ ನೇಮಕಾತಿ ನಡೆಯುವವರೆಗೂ ಮುಂದುವರೆಸುವಂತೆ ಆದೇಶ ನೀಡಿರುತ್ತದೆ, ಆದರೂ ಕೂಡ ಕೆಲವೆಡೆ ಪ್ರಾಂಶುಪಾಲರು, ಅಧಿಕಾರಿಗಳು, ತಮ್ಮ ಪ್ರಭಾವವನ್ನು ಬಳಸಿಕೊಂಡು ಇರುವ ಅತಿಥಿ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಿ ತಮಗೆ ಬೇಕಾದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. ಇದು ಕಾನೂನು ಉಲಂಘನೆ ಮಾಡಿದ್ದಾರೆ ಎಂದು ದೂರಿದರು.ರಾಜ್ಯದ ವಸತಿ ಶಾಲೆಗಳಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿದ್ದು ಹೊಸ ನೇಮಕಾತಿಗೆ ಅವಕಾಶವನ್ನು ಮಾಡಿಕೊಡಬೇಕು. ನಾವು ಸಹ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿ ಸಾಕಷ್ಟು ವರ್ಷಗಳಿಂದ ಅಲ್ಪ ವೇತನಕ್ಕೆ ಕೆಲಸ ಮಾಡಿದ್ದೇವೆ. ಆದ್ದರಿಂದ ವೇತನ ಹೆಚ್ಚಿಸಬೇಕು ಎಂದು ಹೇಳಿದರು.
ಈಗಿನ ಕಾಲದಲ್ಲಿ ಈ ವೇತನದಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತದೆ, ಆದ್ದರಿಂದ ನಮಗೆ ಕನಿಷ್ಠ ವೇತನ ಕಡ್ಡಾಯವಾಗಿ ಕೊಡಬೇಕು. ನಾವು ಕೂಡ ಕಾಯಂ ಶಿಕ್ಷಕರ ಬದಲಿಗೆ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಆ ಸ್ಥಾನದಲಿ ನಾವಿರುತ್ತೇವೆ. ನಮಗೂ ಕೂಡ ವಸತಿ ಶಾಲೆಯ ಶಿಕ್ಷಕರ ವಸತಿಗೃಹಗಳಲ್ಲಿ ಉಳಿದುಕೊಳ್ಳಲು ಅವಕಾಶವನ್ನು ನೀಡಬೇಕು. ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿರುವ ಅತಿಥಿ ಶಿಕ್ಷಕರು ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿ ಸ್ಥಳಗಳಿಗೆ ಕಾಯಂ ಸಿಬ್ಬಂದಿಗಳ ವರ್ಗಾವಣೆ ಕೊಡಬಾರದು. ಸಾಕಷ್ಟು ಸ್ಥಳಗಳು ಖಾಲಿ ಇರುವ ಕಾರಣ ಅಲ್ಲಿನ ಸ್ಥಳಗಳಿಗೆ ವರ್ಗಾವಣೆಯನ್ನು ಕೊಡಬೇಕು ಎಂದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ನಾಗೇಶ್.