ಫ.ಗು. ಹಳಕಟ್ಟಿ ಅವರದು ಸ್ವಾರ್ಥವಿಲ್ಲದ ಹೋರಾಟದ ಬದುಕು-ಮರಳಿಹಳ್ಳಿ

KannadaprabhaNewsNetwork | Published : Jul 6, 2024 12:45 AM

ಸಾರಾಂಶ

ವಚನ ಪಿತಾಮಹ ಫ.ಗು. ಹಳಕಟ್ಟಿ ಅವರದು ಸ್ವಾರ್ಥವಿಲ್ಲದ ಹೋರಾಟದ ಬದುಕು. ಉನ್ನತ ಅಧಿಕಾರದಲ್ಲಿದ್ದರೂ ಲೌಕಿಕ ಆಸೆ, ಆಮಿಷಗಳಿಗೆ ಮಾರು ಹೋಗದೇ ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಗೆ ಅನುಪಮ ಹಾಗೂ ಅನನ್ಯ ಸೇವೆ ಮಾಡಿದ್ದಾರೆ ಎಂದು ನಿವೃತ್ತ ಶಿಕ್ಷಕ, ಸಾಹಿತಿ ಸಿ.ಎಸ್. ಮರಳಿಹಳ್ಳಿ ಹೇಳಿದರು.

ಹಾವೇರಿ: ವಚನ ಪಿತಾಮಹ ಫ.ಗು. ಹಳಕಟ್ಟಿ ಅವರದು ಸ್ವಾರ್ಥವಿಲ್ಲದ ಹೋರಾಟದ ಬದುಕು. ಉನ್ನತ ಅಧಿಕಾರದಲ್ಲಿದ್ದರೂ ಲೌಕಿಕ ಆಸೆ, ಆಮಿಷಗಳಿಗೆ ಮಾರು ಹೋಗದೇ ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಗೆ ಅನುಪಮ ಹಾಗೂ ಅನನ್ಯ ಸೇವೆ ಮಾಡಿದ್ದಾರೆ ಎಂದು ನಿವೃತ್ತ ಶಿಕ್ಷಕ, ಸಾಹಿತಿ ಸಿ.ಎಸ್. ಮರಳಿಹಳ್ಳಿ ಹೇಳಿದರು.ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕದಳಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನ, ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಲಗರ್ಭದಲ್ಲಿ ಹೂತು ಹೋಗಿದ್ದ ಬಸವಾದಿ ಶಿವಶರಣರ ವಚನಗಳನ್ನು ಶೋಧಿಸಿ, ಪರಿಷ್ಕರಿಸಿ, ಸಂಗ್ರಹ ಮತ್ತು ಸಂಪಾದಿಸಿ ಪ್ರಕಟಿಸಿದ ಕೀರ್ತಿ ಡಾ. ಹಳಕಟ್ಟಿಯವರಿಗೆ ಸಲ್ಲುತ್ತದೆ. ನರಸಿಂಹಚಾರ್ಯರರು 50ಕ್ಕೂ ಹೆಚ್ಚು ವಚನ ಸಂಗ್ರಹಿಸಿದರೆ, ಡಾ. ಹಳಕಟ್ಟಿಯವರು 250ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ಸಲ್ಲಿಸಿ ವಚನ ಗುಮ್ಮಟ ಎಂಬ ಕೀರ್ತಿಗೆ ಭಾಜನರಾದರು ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಉಮಾ ಮೈಲಮ್ಮನವರ ಮಾತನಾಡಿ, ಸ್ವಾಭಿಮಾನಿಯಾಗಿದ್ದ ಡಾ. ಫಕ್ಕೀರಪ್ಪ ಹಳಕಟ್ಟಿ ಅವರು ಶಿವಾನುಭವ ಮತ್ತು ನವಕರ್ನಾಟಕ ಪತ್ರಿಕೆಗಳನ್ನು ಹೊರತಂದು, ಅದರ ಮೂಲಕ ವಚನಗಳನ್ನು ಪ್ರಚಾರ ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ಬದುಕಿನ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ಶೋಭಾ ಜಾಗಟಗೇರಿ ಮಾತನಾಡಿ, ನಾಡು-ನುಡಿ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರ ಜನ್ಮದಿನ ಆಚರಣೆಯಿಂದ ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಬೆಳೆಯಲು ಸಹಕಾರಿಯಾಗುತ್ತವೆ. ಡಾ.ಫ.ಗು. ಹಳಕಟ್ಟಿ ಅವರು ಅಂತಹ ಮಹಾನ್ ಮೇಧಾವಿಯಾಗಿದ್ದರು ಎಂದು ಹೇಳಿದರು.ಕದಳಿ ವೇದಿಕೆಯ ಅಮೃತಮ್ಮ ಶೀಲವಂತರ ವಚನಗಳನ್ನು ವಿಶ್ಲೇಷಿಸಿದರು. ಜಿಲ್ಲಾಧ್ಯಕ್ಷೆ ದಾಕ್ಷಾಯಣಿ ಗಾಣಗೇರ, ಲೀಲಾವತಿ ಪಾಟೀಲ, ರುದ್ರಮ್ಮ ನೆಲವಿಗಿ, ಎನ್.ಪಿ. ವಿದ್ಯಾ, ರೇಖಾ ಟಿ.ಆರ್. ವೆಂಕಟೇಶ ಕೆ.ಎಚ್. ರವಿ ಲಮಾಣಿ, ಗಿರೀಶ ಯತ್ತಿನಹಳ್ಳಿ, ಅಶೋಕ ಯಣ್ಣಿಯವರ, ಎಂ.ಎನ್. ಓಲೇಕಾರ, ವಿ.ಡಿ. ಹಿತ್ತಲಮನಿ, ಸಿ.ಬಿ. ಮುದಿಗೌಡರ, ಅನಿತಾ ಬಣಕಾರ, ವಿಜಯಲಕ್ಷ್ಮೀ ಗಾಳೆಪ್ಪನವರ, ಕಾವ್ಯಾ ಬಣಕಾರ ಇತರರು ಇದ್ದರು. ಸೌಭಾಗ್ಯ ಹಿರೇಮಠ ಸ್ವಾಗತಿಸಿದರು. ಸುಮಾ ಕಾಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಮತಿ ಚಿಕ್ಕೇಗೌಡರ ನಿರೂಪಿಸಿದರು. ಅಕ್ಕಮಹಾದೇವಿ ಹಾನಗಲ್ಲ ವಂದಿಸಿದರು.

Share this article