ಮೋರೇರ ತಟ್ಟೆಗಳ ಬೆಟ್ಟದ ಬಳಿ ಅಣು ವಿದ್ಯುತ್ ಸ್ಥಾವರ ರದ್ದು ಮಾಡದಿದ್ದರೆ ಉಗ್ರ ಹೋರಾಟ: ಎಚ್.ಆರ್. ಶ್ರೀನಾಥ

KannadaprabhaNewsNetwork |  
Published : Dec 28, 2024, 01:03 AM ISTUpdated : Dec 28, 2024, 07:48 AM IST
27ಉಳಉ5 | Kannada Prabha

ಸಾರಾಂಶ

ಐತಿಹಾಸಿಕ ಮೋರೇರ ತಟ್ಟೆಗಳ ಬೆಟ್ಟದ ಬಳಿಯೇ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದರೆ ರೈತರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿ: ತಾಲೂಕಿನ ಹಿರೇಬೆಣಕಲ್‌ನ ಐತಿಹಾಸಿಕ ಮೋರೇರ ತಟ್ಟೆಗಳ ಬೆಟ್ಟದ ಬಳಿಯೇ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದರೆ ರೈತರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಿರೇಬೆಣಕಲ್ ಗ್ರಾಮದ ಹತ್ತಿರ ಕರ್ನಾಟಕದ 7 ಅದ್ಬುತಗಳಲ್ಲಿ ಹಿರೇಬೆಣಕಲ್ ಮೋರೇರ ತಟ್ಟೆಗಳನ್ನು ಸ್ಮಾರಕಗಳೆಂದು ಗುರುತಿಸಲಾಗಿದೆ. ಅಲ್ಲದೇ ಕುಮಾರರಾಮನ ಕುಮ್ಮಟದುರ್ಗಾ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಪ್ರದೇಶಗಳೂ ಇಲ್ಲಿವೆ. ಇಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆ ಮಾಡುವುದರಿಂದ ಧಕ್ಕೆ ಉಂಟಾಗುತ್ತದೆ ಎಂದರು.

ಈಗಾಗಲೇ ಮೋರೇರ ತಟ್ಟೆಗಳನ್ನು ಯುನೋಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸು ಆಗಿದೆ. ಇಂತಹ ಸಂದರ್ಭದಲ್ಲಿ ಅಣು ವಿದ್ಯುತ್ ಘಟಕದಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಈ ಘಟಕ ವ್ಯಾಪ್ತಿಗೆ ಸುಮಾರು 6 ಗ್ರಾಮಗಳು ಬರುತ್ತವೆ. ಇಲ್ಲಿರುವ ಜನರಿಗೆ, ರೈತರಿಗೆ, ವೃದ್ಧರಿಗೆ, ಮಕ್ಕಳಿಗೆ ತೊಂದರೆಯಾಗುತ್ತಿದೆ. ವಿಕಿರಣದಿಂದ ಕ್ಯಾನ್ಸರ್, ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳಿವೆ. ಈ ಯೋಜನೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದ ಅವರು ಜಿಲ್ಲಾಡಳಿತ ರಾತ್ರೋರಾತ್ರಿ ಸರ್ವೇ ಮಾಡಿ ಗೌಪ್ಯವಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ ಎಂದರು.

ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ನಾಡಿ ಮಿಡಿತ ಗೊತ್ತಿದ್ದವರು. ಉತ್ತಮ ಬೆಳೆ ಮತ್ತು ಉತ್ತಮ ಪರಿಸರ, ವನ್ಯ ಜೀವಿಗಳು ಈ ಭಾಗದಲ್ಲಿ ಅಧಿಕವಾಗಿವೆ. ಇಲ್ಲಿ ಏಕಾಏಕಿಯಾಗಿ ಈ ಘಟಕಕ್ಕೆ ಸರ್ವೆ ಮಾಡಿ ದಾಖಲೆಗಳನ್ನು ಕಳುಹಿಸಿರುವುದು ದುರದೃಷ್ಟಕರ. ಕೂಡಲೆ ಜಿಲ್ಲಾಧಿಕಾರಿಗಳು ಘಟಕಕ್ಕೆ ಭೂಮಿ ಗುರುತಿಸಿರುವುದನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ ಮಾತನಾಡಿ, ಹಿರೇಬೆಣಕಲ್ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಅಲ್ಲದೇ ಇದರಿಂದ ಪರಿಸರ ಹಾಳಾಗುತ್ತದೆ. ಕೂಡಲೇ ಸರಕಾರ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ. ಶಿವಕುಮಾರ, ರೈತ ಮುಖಂಡರಾದ ಶರಣೇಗೌಡ ಹಿರೇಬೆಣಕಲ್, ಮಠದ ಲಿಂಗಪ್ಪ, ಸುರೇಶ ಗೌರಪ್ಪ, ಗೌಳಿ ರಮೇಶ, ತುಳಸಪ್ಪ, ಹನುಮಂತರಾಯ, ಸುರೇಶಗೌಡ, ಶಬ್ಬೀರ್ ಸೇರಿದಂತೆ ರೈತರು ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ