ಖಾತ್ರಿ ಯೋಜನೆಯಲ್ಲಿ ಶೇ.56.83ರಷ್ಟು ಮಹಿಳೆಯರು ಭಾಗಿ: ಜಿಪಂ ಸಿಇಒ

KannadaprabhaNewsNetwork | Published : Jul 20, 2024 12:56 AM

ಸಾರಾಂಶ

ಜಲ ಶಕ್ತಿ ಅಭಿಯಾನ-2024 ಸಲಹೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಎಂಜಿಎನ್‍ಆರ್‌ಇಜಿಎ ಯೋಜನೆಯಡಿ ಕಂದಕ ಬದು ನಿರ್ಮಿಸಿರುವ ಕುರಿತು ಹಾಗೂ ಅದರ ವೈಜ್ಞಾನಿಕ ಮಹತ್ವದ ಬಗ್ಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಎಂಜಿಎನ್‍ಆರ್‌ಇಜಿಎ ಯೋಜನೆಯಡಿ ಮಹಿಳಾ ಕೂಲಿಕಾರ್ಮಿಕರ ಭಾಗವಹಿಸುವಿಕೆ ಜಿಲ್ಲೆಯಲ್ಲಿ ಶೇ. 56.83 ಇರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್‌ ಮೀನಾ ತಿಳಿಸಿದರು.

ಕಲಬುರಗಿ ನೂತನ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನವದೆಹಲಿಯ ರಕ್ಷಣಾ ಸಚಿವಾಲಯದ ನಿರ್ದೇಶಕಿ ಸರ್ಮಿಷ್ಟಾ ಮೈತ್ರಾ ನೇತೃತ್ವದಲ್ಲಿ ನಡೆದ ಜಲ ಶಕ್ತಿ ಅಭಿಯಾನ-2024 (ನಾರಿ ಶಕ್ತಿ ಸೆ ಜಲ ಶಕ್ತಿ) ಪ್ರಗತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಎಂಜಿಎನ್‍ಆರ್‌ಇಜಿಎ ಯೋಜನೆಯಡಿ ಕಂದಕ ಬದು ನಿರ್ಮಿಸಿರುವ ಕುರಿತು ಹಾಗೂ ಅದರ ವೈಜ್ಞಾನಿಕ ಮಹತ್ವದ ಬಗ್ಗೆ ಚರ್ಚಿಸಿದರು.

ಖಾತ್ರಿ ಯೋಜನೆಯ ಕಾಮಗಾರಿಗಳ ಚರ್ಚೆಯೊಂದಿಗೆ ಸಭೆ ಪ್ರಾರಂಭವಾಗಿ, ಇದರಲ್ಲಿ ವಿವಿಧ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾರ್ಯಗಳಾದ ಕೆರೆ, ನಾಲಾ, ಗೋಕಟ್ಟಾ ಹೂಳೆತ್ತುವ ಕೆಲಸಗಳು, ಚೆಕ್ ಡ್ಯಾಮ್‍ಗಳು, ಟ್ರೆಂಚ್ ಕಮ್ ಬಂಡಿಂಗ್, ಸೋಕ್‍ಪಿಟ್‍ಗಳು, ಅಮೃತ ಸರೋವರ, ಕಲ್ಯಾಣಿ ಪುನರುಜ್ಜೀವನ ಮತ್ತಿತರ ವಿಷಯಗಳ ಕುರಿತು ವಿವರಿಸಲಾಯಿತು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆಯು ವಿವಿಧ ಜಲ ಸಂರಕ್ಷಣಾ ಕಾರ್ಯಗಳಾದ ಬದು ನಿರ್ಮಾಣ, ಕೃಷಿ ಹೊಂಡಗಳು, ಹನಿ ನೀರಾವರಿ ಕಾಮಗಾರಿಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ಪ್ರಯೋಜನಕಾರಿಯಾದ ಕಾಮಗಾರಿಗಳ ಕುರಿತು ವಿವರಣೆ ನೀಡಿದರು.

ತೋಟಗಾರಿಕೆ ಇಲಾಖೆಯ ಬಾಳೆ, ಪೇರಲ, ದ್ರಾಕ್ಷಿ, ಪಪ್ಪಾಯಿ ಮುಂತಾದ ಹಣ್ಣಿನ ತೋಟಗಳೊಂದಿಗೆ ಪ್ರದೇಶ ವಿಸ್ತರಣೆ ಕುರಿತು ಕಲಬುರಗಿ ತೋಟಗಾರಿಕೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

ಅರಣ್ಯ ಇಲಾಖೆಯು ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್ ಮತ್ತು ಎಸ್‍ಎಂಸಿ ಕಾಮಗಾರಿಗಳಾದ ಟ್ರೆಂಚ್ ಕಮ್ ಬಂಡಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದ ಮಣ್ಣಿನ ತೇವಾಂಶವನ್ನು ಹೆಚ್ಚಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ ಅವರು, ಕೆರೆ ಮತ್ತು ಕಲ್ಯಾಣಿಗಳಂತಹ ಸಾಂಪ್ರದಾಯಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವತ್ತ ಗಮನಹರಿಸಲಾಗಿದ್ದು, ನಗರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿ ನೆಡುತೋಪು ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಸಿಜಿಡಬ್ಲ್ಯೂಬಿ ವಿಜ್ಞಾನಿ ಶಕ್ತಿವೇಲ್, ಕಲಬುರಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article