ಕಾರಟಗಿ:
ತುಂಗಭದ್ರಾ ಎಡದಂಡೆ ನಾಲೆ 31ನೇ ವಿತರಣಾ ನಾಲೆ ಕೊನೆ ಭಾಗದ ರೈತರ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಅಧಿಕಾರಿಗಳ ಮತ್ತು ರೈತರ ನಡುವೆ ತಿಕ್ಕಾಟ ಗುರುವಾರ ಸಹ ಮುಂದುವರಿಯಿತು.ಬುಧವಾರ ರಾತ್ರಿ ರೈತರು ನಾಲೆ ತೂಬ್‌ನ ಗೇಜ್‌ನ್ನು 210 ಕ್ಯುಸೆಕ್‌ಗೆ ಇಳಿಸಿಕೊಂಡು ರಾತ್ರಿಯಿಡಿ ಜಾಗರಣೆ ಮಾಡಿ ಕಾಯಿದರು. ಆದರೆ, ಬೆಳಗ್ಗೆ ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆ ಹಿನ್ನಲೆ ಗೇಜ್‌ನ್ನು ಪುನಃ 150 ಕ್ಯುಸೆಕ್‌ಗೆ ಇಳಿಕೆ ಮಾಡಿದರು. ಇದರಿಂದಾಗಿ ಗುರುವಾರ ಬೆಳಗ್ಗೆ ರೈತರು ಆಕ್ರೋಶಕೊಂಡು ಪುನಃ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು. ಹೀಗಾಗಿ ಒಂದು ಹಂತದಲ್ಲಿ ರೈತರು ನಾಲೆಗೆ ಇಳಿದು ಗೇಜ್ ಎತ್ತಿರಿಸಲು ಮುಂದಾದರು. ಈ ವೇಳೆ ನೀರಾವರಿ, ಕಂದಾಯ ಮತ್ತು ಪೊಲೀಸರು ರೈತರನ್ನು ತಡೆಯುವ ಪ್ರಯತ್ನ ನಡೆಯಿತು. ಒಂದು ಹಂತದಲ್ಲಿ ನಾ ಕೊಡೆ, ನೀ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ವೇಳೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸರು, ತಹಸೀಲ್ದಾರ್ ಸೇರಿ ಹೋರಾಟನಿರತ ರೈತರನ್ನು ಸಮಾಧಾನಗೊಳಿಸಲು ಹರಸಾಹಸಪಟ್ಟರು. ಯಾವುದೇ ಕಾರಣಕ್ಕೂ ನಾವು ಹೋರಾಟ ಕೈ ಬಿಡುವುದಿಲ್ಲ. ಟೇಲೆಂಡ್ ಭಾಗದಲ್ಲಿ ಸಮರ್ಪಕ ನೀರು ದೊರೆಯದ ಕಾರಣ ಬೆಳೆಗಳು ಸಂಕಷ್ಟಕ್ಕೆ ಸಿಲುಕಿವೆ. ಬೆಳೆ ಹಾಳಾದರೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಲಿದೆ. ಹೀಗಾಗಿ ಕನಿಷ್ಠ 210 ತ್ರೇಡ್ ಗೇಜ್ ನೀರು ಬಿಡಲೇ ಬೇಕು. ಇಲ್ಲದಿದ್ದರೆ, ನಾವು ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜತೆಗೆ ಮೊದಲ ಹಂತವಾಗಿ ನೀರುಗಳ್ಳತನ ತಡೆಯಿರಿ. ಅಕ್ರಮ ನೀರಾವರಿ ಸ್ಥಳಕ್ಕೆ ದಾಳಿ ಮಾಡಿ ಎಂದು ರೈತರು ಕೆಲ ಉದಾಹರಣೆ ಸಹ ನೀಡಿದರು. ಕೊನೆಗೆ ಅಧಿಕಾರಿಗಳು ಹಾಗೂ ನೀರು ಬಳಕೆದಾರರ ಸಂಘದ ಸದಸ್ಯರು ಸಂಧಾನದ ಮಾತುಕತೆ ನಡೆಸಿದರು.ಈ ವೇಳೆ ಕೆಲ ರೈತರು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ 31ನೇ ಕಾಲುವೆ ಉಪಕಾಲುವೆಗಳ ಪರಿಸ್ಥಿತಿಯನ್ನು ವಿವರಿಸಿ ಸಚಿವರ ಗಮನಕ್ಕೆ ತಂದರು. ಸಚಿವರು ಅಧಿಕಾರಿಗಳಿಗೆ ಕೊನೆಭಾಗದ ರೈತರಿಗೂ ನೀರು ತಲುಪಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡಿ ಎಂದು ಸೂಚಿಸಿದರು.
ಕೊನೆಗೆ 205 ಗೇಜ್ ನೀರು ಹರಿಸಲು ಸಮ್ಮತಿಸಿದರು. ಈ ಗೇಜ್ ಏ. 10ರ ವರೆಗೆ ಕಾಯ್ದುಕೊಂಡು ಮುಂದುವರಿಸುವಂತೆ ತಿಳಿಸಿದರು. ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪಿಐ ಸುಧೀರ್ ಬೆಂಕಿ, ನೀರಾವರಿ ಹೋರಾಟಗಾರ ಸಂಗಮೇಶ್ ಗೌಡ ಬೂದಗುಂಪಾ, ಶರಣೇಗೌಡ ಪೊಲೀಸ್‌ಪಾಟೀಲ, ಬಸವರಾಜಪ್ಪ ಕುಲಕರ್ಣಿ, ಅಂಬಣ್ಣ ಹರಿಜನ, ಶೇಖರಪ್ಪ ಹರಿಜನ, ಷಣ್ಮುಕಪ್ಪ ಉಳೇನೂರು, ಶರಣಪ್ಪ, ಮನೋಹರಗೌಡ, ನಾಗೇಶ್ವರ ರಾವ್, ಮಾನ್ವಿ ಸೀನಪ್ಪ, ಉಳೇನೂರು, ತಿಮ್ಮಾಪುರ, ಹಾಲಸಮುದ್ರ, ಕಿಂದಿಕ್ಯಾಂಪ್ ರೈತರಿದ್ದರು.