ಕನ್ನಡಪ್ರಭ ವಾರ್ತೆ ಹಾಸನ
ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ರೀತಿಯ ಅನುಮಾನ ಬೇಡ. ಎಲ್ಲಾ ಶಾಸಕರ ಒಟ್ಟುಗೂಡಿ, ನಮ್ಮ ಜೊತೆ ಸಮಿತಿಯಿಂದ ೧೫ ಜನರ ತಂಡ ಈ ವಾರದಲ್ಲಿ ದಿನ ನಿಗದಿ ಮಾಡಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನ ಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಭರವಸೆ ನೀಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧರಿತ ಚರ್ಚೆಗಳು ನಡೆದಿದ್ದು, ಅಭಿವೃದ್ಧಿ ಮತ್ತು ಯೋಗಕ್ಷೇಮ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಎಲ್ಲರ ಪರ ನಿಂತು ಕೊಳ್ಳುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿರುವುದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಇಲ್ಲಿವರೆಗೂ ತೆಗೆದುಕೊಂಡಿರುವುದಿಲ್ಲ. ಯಾರು ಗಾಬರಿ ಪಡಬಾರದೆಂದು ಶಿಕ್ಷಣ ಸಚಿವರು ಹೇಳಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಆಗಬಹುದಾದಂತಹ ಬೇಡಿಕೆಯನ್ನು ಮುಂದಿಟ್ಟು ಮನವಿಯನ್ನು ಮಾಡೋಣ ಎಂದರು.
ಈ ಹೋರಾಟದ ಸಮಿತಿ ಪರವಾಗಿ ನಾನು ಇರುತ್ತೇನೆ. ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ರೀತಿ ಅನುಮಾನ ಬೇಡ. ಎಲ್ಲಾ ಶಾಸಕರ ಒಟ್ಟುಗೂಡಿ, ನಮ್ಮ ಜೊತೆ ಸಮಿತಿಯಿಂದ ೧೫ ಜನರ ತಂಡ ಈ ವಾರದಲ್ಲಿ ದಿನ ನಿಗದಿ ಮಾಡಿ ಭೇಟಿ ಮಾಡುವ ಕೆಲಸ ಮಾಡೋಣ. ಸರಕಾರದ ಮಟ್ಟದಲ್ಲಿ ನಾನು ಕೂಡ ವಿದ್ಯಾರ್ಥಿಗಳ ಪರ ಗಮನಸೆಳೆಯಲಾಗುವುದು ಎಂದು ಹೇಳಿದರು.ಶಾಸಕ ಎ. ಮಂಜು ಮಾತನಾಡಿ, ವಿಶ್ವವಿದ್ಯಾಲಯ ಇಲ್ಲೆ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಕಾಲೇಜುಗಳನ್ನು ಯಾವ ಸರಕಾರ ಬಂದರೂ ಮುಚ್ಚುವುದಕ್ಕೆ ಆಗುವುದಿಲ್ಲ. ಆದರೇ ವಿಲೀನಗೊಳಿಸಲಾಗುತ್ತದೆ. ಕಾಲೇಜು ಇಲ್ಲೇ ಇದೆಯಲ್ಲ ಎಂದು ಉತ್ತರ ಹೇಳುವುದಕ್ಕೆ ತಯಾರು ಮಾಡಿಕೊಳ್ಳುತ್ತಾರೆ. ನಾನು ಶಾಸಕನಾಗಿದ್ದಾಗ ಮೈಸೂರು ಯೂನಿವರ್ಸಿಟಿ ಇಲ್ಲಿ ಪ್ರಾರಂಭವಾಯಿತು. ಯೂನಿವರ್ಸಿಟಿ ಸ್ಥಾಪನೆ ಮಾಡುವುದು ಆ ಜಿಲ್ಲೆಗಳಿಗೆ ಹೆಚ್ಚು ಗೌರವ ತರುವ ಕೆಲಸ ಮಾಡಿದ ಸರಕಾರಗಳಿಗೆ ಗೌರವ ಸಲ್ಲಿಸಬೇಕು. ಅದು ಯಾವುದೇ ಸರಕಾರ ಆಗಿರಲಿ ಎಂದರು. ಯೂನಿವರ್ಸಿಟಿ ರಾಜ್ಯ ಸರಕಾರದಿಂದ ಮಾತ್ರ ನಡೆಯುವುದಿಲ್ಲ. ಕೇಂದ್ರದ ಯುಜಿಸಿ ಸ್ಕೇಲ್ ಕೂಡ ಇದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳ ಮೊದಲ ಆಯ್ಕೆ ಸರಕಾರ ಶಿಕ್ಷಣ ಸಂಸ್ಥೆಗಳು. ಎಂಜಿನಿಯರ್, ವೈದ್ಯಕೀಯ ಯಾವುದೇ ಆಗಿರಲಿ ಸರಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗಿ ಕಡೆ ಹೋಗುತ್ತಾರೆ. ಏನಾದರೂ ಈ ರೀತಿ ತಾತ್ಸಾರ ಮಾಡಿದರೇ ಮುಂದಿನ ದಿನಗಳಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೇ ಆ ಖಾಸಗೀಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ ಎಂದು ಎಚ್ಚರಿಸಿದರು. ಇದರಿಂದ ಯಾವ ಯಾವ ಸಂಸ್ಥೆ ಯಾವ ಯಾವ ಮೌಲ್ಯವನ್ನು ಭಿತ್ತಬಹುದು. ಸರಕಾರದವರು ಹೀಗೆ ಮುಂದುವರೆದರೇ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದು ಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸರಕಾರಿ ಸಂಸ್ಥೆಯನ್ನು ಅನಿವಾರ್ಯವಾಗಿ ಉಳಿಸಬೇಕು. ವಿಶ್ವವಿದ್ಯಾನಿಲಯದ ಸಂಖ್ಯೆ ಹೆಚ್ಚು ಇರಬೇಕು ಎಂದು ಕಿವಿಮಾತು ಹೇಳಿದರು. ಸ್ಥಾಪನೆ ಮಾಡಿರುವ ವಿಶ್ವವಿದ್ಯಾಲಯವನ್ನು ಗಟ್ಟಿಗೊಳಿಸಬೇಕೆ ಹೊರತು ಮುಚ್ಚುವಂತದ್ದು ಈ ವಲಯಕ್ಕೆ ಮಾಡುವ ಅನ್ಯಾಯ. ಗ್ರಾಮಾಂತರ ಪ್ರದೇಶಕ್ಕೆ ಮಾಡುವ ದ್ರೋಹ. ೧೯೧೬ರಲ್ಲಿ ಆರಂಭಗೊಂಡ ಮೈಸೂರು ವಿಶ್ವವಿದ್ಯಾಲಯ ಇಂತಹದೆ ಒಂದು ಅತಂತ್ರ ಸ್ಥಿತಿ ಅನುಭವಿಸಿತ್ತು ಎಂದು ಹೇಳಿದರು.ಹಸಿರುಭೂಮಿ ಪ್ರತಿಷ್ಠಾನದ ಬಿ.ಕೆ. ಮಂಜುನಾಥ್ ಮಾತನಾಡಿ, ಸರ್ಕಾರದಲ್ಲಿ ಗೊಂದಲವಿದ್ದು, ಜನರಲ್ಲಿ ವಿಶ್ವವಿದ್ಯಾಲಯ ಉಳಿಯುತ್ತದೆಯೂ ಇಲ್ಲವೋ ಎಂಬುದು ಬೇರೂರಿದೆ. ಈ ಕಮಿಟಿ ಶಾಸಕರು, ಸಂಸದರು ಎಲ್ಲಾ ಸೇರಿ ಸಭೆ ಮಾಡಿ ದೃಢವಾದ ನಿಲುವು ತೆಗೆದುಕೊಂಡರೇ ಖಂಡಿತ ಸರ್ಕಾರ ಒಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಎಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಎಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪ ಹಾಸನ್, ತಾರಾಚಂದನ್, ರಮೇಶ್, ಎಣ.ಬಿ. ಪುಷ್ಪ, ಸಮೀರ್ ಅಹಮದ್ ಇತರರು ಉಪಸ್ಥಿತರಿದ್ದರು.