ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ

KannadaprabhaNewsNetwork |  
Published : Sep 26, 2025, 01:00 AM IST
ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ | Kannada Prabha

ಸಾರಾಂಶ

ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ನಗರದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಬೈಕ್ ರ್‍ಯಾಲಿ ನಡೆಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿ ಹಕ್ಕೋತ್ತಾಯ ಮಂಡಿಸಲಾಯಿತು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ನಗರದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಬೈಕ್ ರ್‍ಯಾಲಿ ನಡೆಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿ ಹಕ್ಕೋತ್ತಾಯ ಮಂಡಿಸಲಾಯಿತು.

ಜಿಲ್ಲೆಯ ಐದು ತಾಲೂಕುಗಳಿಂದ ಬೈಕ್ ರ್‍ಯಾಲಿ ಮೂಲಕ ಪ್ರವಾಸ ಮಂದಿರದ ಬಳಿ ಸಮಾವೇಶಗೊಂಡ ರೈತರು ಅಲ್ಲಿಂದ ಜಿಲ್ಲಾಡಳಿತ ಭವನದ ಆವರಣದವರೆಗೆ ಬಂದು ಪ್ರತಿಭಟನೆ ನಡೆಸಿದರು. ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಜಿಲ್ಲೆಯು ಅತೀ ಹೆಚ್ಚು ಕೃಷಿ, ಅರಣ್ಯ ಪ್ರದೇಶವನ್ನು ಹೊಂದಿದೆ. ಕಳೆದ ಅನೇಕ ವರ್ಷಗಳಿಂದ ಮಳೆ ಬೀಳದೆ ಬರಗಾಲ ಆವರಿಸಿ, ಅಂತರ್ಜಲ ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದು, ಕುಡಿಯುವ ನೀರಿಗೆ ಹಾಗೂ ರೈತರು ವ್ಯವಸಾಯಕ್ಕಾಗಿ ಕೊಳವೆ ಬಾವಿಯನ್ನು ತೆಗೆಸುತ್ತಿದ್ದು, ೧೩೦೦ ಅಡಿ ಕೊರೆಯಿಸಿದರೂ ನೀರು ಸಿಗುವುದು ಮರೀಚಿಕೆಯಾಗಿದೆ ಎಂದರು.

ಜನರಿಗೆ ಶುದ್ಧ ಕುಡಿಯುವ ನೀರು ಅಂತರ್ಜಲ ವೃದ್ಧಿಪಡಿಸಲು ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡು ಈ ಜಿಲ್ಲೆಯ ಜನರ ಕೃಷಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು, ಜಿಲ್ಲೆಯಾದ್ಯಂತ ಆವರಿಸಿರುವ ಕೆ.ಎಸ್.ಆರ್.ಟಿ.ಸಿ ಬಸ್ ಸಮಸ್ಯೆಯನ್ನು ಬಗೆಹರಿಸಬೇಕು. ಬದನಗುಪ್ಪೆ ಮತ್ತು ಕೆಲ್ಲಂಬಳ್ಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನವಾಗಿರುವ ರೈತ ಕುಟುಂಬಗಳ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಬೇಕು. ಕೈಗಾರಿಕೆಯಿಂದ ಕೊಳಚೆ ನೀರು ಸರ್ಕಾರಿ ಹಳ್ಳದಲ್ಲಿ ಹರಿಯುತ್ತಿದ್ದು, ಅಂತರ್ಜಲ ಕಲುಷಿತವಾಗುವ ಲಕ್ಷಣ ಇದ್ದು ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗೇರಿ ಹಾಗೂ ಇನ್ನುಳಿದ ಎಲ್ಲಾ ಗ್ರಾಮದ ರೈತರಿಗೂ ಅಲ್ಲಿರುವ ೩೧೭೬ ಎಕರೆ ಪ್ರದೇಶವನ್ನು ಸಾಗುವಳಿ ನೀಡಬೇಕು ಮತ್ತು ಸತ್ತೇಗಾಲ ಎಲ್.ಆರ್.ಎಫ್ ನ್ನು ರದ್ದುಪಡಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಜಿಲ್ಲೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿಯನ್ನು ನೀಡಬೇಕು. ಸಾಗುವಳಿ ಚೀಟಿ ಪಡೆದವರಿಗೆ ಆರ್.ಟಿ.ಸಿ. ಹದ್ದುಬಸ್ತು ಮತ್ತು ದುರಸ್ಥಿಯನ್ನು ತಕ್ಷಣ ಕ್ರಮವಹಿಸಬೇಕು. ಇದರ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು.ಪೂರ್ವ ಮುಂಗಾರು ಮತ್ತು ಹಿಂಗಾರಿನಲ್ಲಿ ಭಾರಿ ಗಾಳಿ ಮತ್ತು ಮಳೆಯಿಂದ ವಿವಿಧ ಬೆಳೆಗಳು ಜಿಲ್ಲೆಯಲ್ಲಿ ನಷ್ಟವಾಗಿದ್ದು, ತಕ್ಷಣ ರೈತರಿಗೆ ನಷ್ಟ ತುಂಬಿಕೊಡಲು ಕ್ರಮವಹಿಸಬೇಕು. ಸರ್ಕಾರವು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ ೩೮ಎ ಮತ್ತು ನಿಯಮ ೯ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಕಂದಾಯ ಗ್ರಾಮ ಮತ್ತು ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಕ್ರಮವಹಿಸಬೇಕು.

ಜಿಲ್ಲೆಯಿಂದ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಟೋಲ್‌ಗಳಲ್ಲಿ ಅತ್ಯಧಿಕ ಹಣ ವಸೂಲಿ ಮಾಡುತ್ತಿದ್ದು, ಹಾಗೂ ಸ್ಥಳೀಯರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿರುವ ಕಾರಣ ಈ ಟೋಲ್‌ನಲ್ಲಿ ಸ್ಥಳೀಯರಿಗೆ ಯಾವುದೇ ತೆರಿಗೆಯನ್ನು ವಿಧಿಸದೆ ಮುಕ್ತವಾಗಿ ಚಲಿಸಲು ಅವಕಾಶ ಮಾಡಿಕೊಡಬೇಕು. ಹಾಗೂ ರಸ್ತೆಗಳು ದುರಸ್ಥಿಯಾಗುವ ತನಕ ಟೋಲ್ ಸಂಗ್ರಹಣೆಯನ್ನು ನಿಲ್ಲಿಸಬೇಕು.

ಜಿಲ್ಲೆಯಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕಾರಣ ಅರಣ್ಯದ ೪ ವಲಯಗಳಲ್ಲಿ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳನ್ನು ನಿಯಂತ್ರಿಸಲು ಸಂಪೂರ್ಣ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸಬೇಕು.

ರೈತ ಹೋರಾಟಗಾರರ ಮೇಲೆ ಹೂಡಿರುವ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತೇವೆ.

ಜಿಲ್ಲೆಯನ್ನು ಈ ವರ್ಷ ಸಂಪೂರ್ಣ ಮಳೆ ಬೀಳದೆ ರೈತರು ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣ ಚಾಮರಾಜನಗರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಮಲೈ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸುವುದನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ನೀಡುತ್ತಿರುವ ಕೃಷಿ ಸಲಕರಣೆಗಳು ಕಳಪೆಮಟ್ಟದ್ದಾಗಿರುವುದರಿಂದ ಸಂಬಧಪಟ್ಟವರು ಇದರ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ, ಎ.ಎಂ. ಮಹೇಶ್ ಪ್ರಭು, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ವಿಭಾಗೀಯ ಕಾರ್ಯದರ್ಶಿ ಸಿ. ಸಿದ್ದರಾಜು, ಜಿಲ್ಲಾ ಗೌರವಾಧ್ಯಕ್ಷ ಚಿನ್ನಸ್ವಾಮಿ ಗೌಂಡರ್, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಮಹಿಳಾ ಅಧ್ಯಕ್ಷರು ಮಾದಮ್ಮ ಇತರರು ಭಾಗವಹಿಸಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ