ಕೊನೆಗೂ 1000 ಪರವಾನಗಿ ಭೂಮಾಪಕರ ನೇಮಕ: ಸಚಿವ ಕೃಷ್ಣಬೈರೇಗೌಡ

KannadaprabhaNewsNetwork | Published : Mar 14, 2024 2:04 AM

ಸಾರಾಂಶ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಭೂ ಮಾಪನ ಇಲಾಖೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಿ ತ್ವರಿತವಾಗಿ ಸೇವೆ ಕಲ್ಪಿಸಲು ಹೊಸ ನೇಮಕಾತಿ, ತಂತ್ರಜ್ಞಾನ ಬಳಕೆ ಸೇರಿದಂತೆ ಹಲವಾರು ಕ್ರಮ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಹಂತದಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಭೂ ಮಾಪನ ಇಲಾಖೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಿ ತ್ವರಿತವಾಗಿ ಸೇವೆ ಕಲ್ಪಿಸಲು ಹೊಸ ನೇಮಕಾತಿ, ತಂತ್ರಜ್ಞಾನ ಬಳಕೆ ಸೇರಿದಂತೆ ಹಲವಾರು ಕ್ರಮ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಹಂತದಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬುಧವಾರ ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1000 ಪರವಾನಗಿ ಭೂ ಮಾಪಕರಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಯಲ್ಲಿ ಹಂತ ಹಂತವಾಗಿ ಗಣಕೀಕೃತ ವ್ಯವಸ್ಥೆ ಅಳವಡಿಸಿಕೊಂಡು ಸಾಕಷ್ಟು ಕೆಲಸ ಮಾಡಲಾಗಿದೆ. ಅದರೂ ಉಳಿದೆಲ್ಲ ಇಲಾಖೆಗಳಿಗೆ ಹೋಲಿಸಿದರೆ ಈ ಇಲಾಖೆಯಲ್ಲಿನ ಕೆಲಸ ಹೆಚ್ಚು ಬಾಕಿ ಉಳಿದಿದೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲೂ ಕಂದಾಯ ಇಲಾಖೆಗೆ ಸಂಬಂಧ ಪಟ್ಟಂತೆ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗುತ್ತಿವೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಕಾಲ ಮಿತಿಯ ಯೋಜನೆಯ ಜೊತೆಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು 364 ಸರ್ಕಾರಿ ಭೂ ಮಾಪಕರು ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಆರು ತಿಂಗಳೊಳಗೆ ನೇಮಕಾತಿ ಪೂರ್ಣಗೊಳ್ಳಲಿದೆ. ಅದೇ ರೀತಿ 27 ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್‌ಆರ್‌) ಹಾಗೂ ಖಾಲಿ ಇರುವ 541 ಭೂ ಮಾಪಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸಮ್ಮತಿಸಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ 500 ಸಿಬ್ಬಂದಿಗಳನ್ನು ನೀಡಲಾಗುವುದು, ಒಟ್ಟಾರೆ ಹಂತ ಹಂತವಾಗಿ ಒಟ್ಟು 2500 ಸಿಬ್ಬಂದಿಗಳ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.

ಮರು ಭೂಮಾಪನಕ್ಕೆ ಕ್ರಮ:

ದಶಕಗಳ ನಂತರ ರಾಜ್ಯದಲ್ಲಿ ಮರು ಭೂ ಮಾಪನ ಮಾಡಲು ಉದ್ದೇಶಿಸಿದ್ದು, 21 ಜಿಲ್ಲೆಗಳಲ್ಲಿ ಚಾಲನೆ ಕೊಡಲಾಗುವುದು, ರಾಮನಗರ ಜಿಲ್ಲೆಯ ಹೋಬಳಿಯಲ್ಲಿ ಪ್ರಾಯೋಗಿಕವಾಗಿ ರಿ-ಸರ್ವೇ ಮಾಡಲಾಗುತ್ತಿದೆ. ಅದೇ ರೀತಿ ರೈತರು, ಅರಣ್ಯ, ಕಂದಾಯ ಇಲಾಖೆಗೆ ಸೇರಿದ ಜಾಗದ ಜಂಟಿ ಸರ್ವೆ ಮಾಡಲು ನಿರ್ಧರಿಸಲಾಗಿದೆ. ಕಳೆದ ತಿಂಗಳು ಸರ್ವೆ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿದೆ. ಇದಕ್ಕೆ ಸುಮಾರು ಎರಡು ವರ್ಷ ಬೇಕಾಗಬಹುದು ಎಂದರು.

ನಗರದ ವಸತಿ ಪ್ರದೇಶಗಳಲ್ಲಿ ಸರ್ವೆ ಮಾಡಬೇಕಾಗಿದೆ. ರೋವರ್ಸ,ಡ್ರೋನ್‌ ಇತ್ಯಾದಿ ತಂತ್ರಜ್ಞಾನ ಬಳಸುತ್ತಿದ್ದೇವೆ. 13 ಕೋಟಿ ರು. ವೆಚ್ಚದಲ್ಲಿ 420 ರೋವರ್ಸ್‌ ಖರೀದಿಸಿ ಎಲ್ಲ ತಾಲ್ಲೂಕುಗಳಿಗೆ ನೀಡಲಾಗುವುದು. ಜೊತೆಗೆ ದಾಖಲೆಗಳ ಡಿಜಟಲೀಕರಣ ಮಾಡಲು ಸ್ಕ್ಯಾನರ್‌ ಸೇರಿದಂತೆ ಪ್ರಿಂಟರ್ ಮತ್ತಿತರ ಸೌಲಭ್ಯ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೆಂದರ್‌ ಕಟಾರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇ-ಆಫೀಸ್‌:

ಭೂ ಮಾಪನಕ್ಕೆ ಸಂಬಂಧಪಟ್ಟಂತೆ ಎಲ್ಲ ಸೇವೆಗಳು ಇ-ಆಫೀಸ್ ಮೂಲಕ ದೊರೆಯುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ ಟಾಪ್‌ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ನೀಡಲಾಗುವುದು. ಗ್ರಾಮ ಲೆಕ್ಕಾಧಿಕಾರಿಗೆ ಪ್ರತ್ಯೇಕ ಕಚೇರಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share this article