ಹವಾಮಾನ ವೈಪರೀತ್ಯದ ಸವಾಲು ಎದುರಿಸುವ ಉಪಾಯ ಶೋಧಿಸಿ

KannadaprabhaNewsNetwork | Published : Jul 23, 2024 12:44 AM

ಸಾರಾಂಶ

ತಾಪಮಾನ ಹೆಚ್ಚಳದಿಂದ ಕಾರ್ಮಿಕರ ಉತ್ಪಾದನಾ ಶಕ್ತಿ ಕಡಿಮೆ ಆಗುವುದು, ವಿದ್ಯುತ್‌ ಶಕ್ತಿ ಬಳಕೆ ಜಾಸ್ತಿ ಆಗುವುದು, ಕೃಷಿ ಇಳುವರಿ ಕಡಿಮೆ ಅಂತಹ ಸಮಸ್ಯೆಗಳು ಎದುರಾಗಲಿವೆ. ಇನ್ನು ಮೂರು ದಶಕಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ತಾಪಮಾನ 3 ಡಿಗ್ರಿಯಷ್ಟು ಏರಲಿದೆ.

ಧಾರವಾಡ:

ಪ್ರಸ್ತುತ ಸಂದರ್ಭದಲ್ಲಿ ಹವಾಮಾನ ವೈಪರೀತ್ಯವು ಇಡೀ ಜಗತ್ತನ್ನು ಪ್ರಭಾವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಸವಾಲುಗಳನ್ನು ಎದುರಿಸುವ ಉಪಾಯ ಶೋಧಿಸಲು ಐಐಟಿ ಪದವೀಧರರಿಗೆ ಕ್ಯಾಲಿಫೋರ್ನಿಯಾದ ಖಗೋಳಶಾಸ್ತ್ರಜ್ಞ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ರಾಮಚಂದ್ರ ಕುಲಕರ್ಣಿ ಸಲಹೆ ನೀಡಿದರು.

ಇಲ್ಲಿಯ ಧಾರವಾಡ ಐಐಟಿಯಲ್ಲಿ ಸೋಮವಾರ ನಡೆದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಈಗಾಗಲೇ ದಕ್ಷಿಣ ಏಷ್ಯಾದಲ್ಲಿ ತಾಪಮಾನ ಗಮನಾರ್ಹವಾಗಿ ಹೆಚ್ಚಳವಾಗಿದ್ದು, ಇದರ ಪರಿಣಾಮ ಆರ್ಥಿಕ ವ್ಯವಸ್ಥೆ ಮೇಲೆಯೂ ಆಗಲಿದೆ. ದಕ್ಷಿಣ ಏಷ್ಯಾದ ಬಹುಭಾಗವನ್ನು ಭಾರತ ವ್ಯಾಪಿಸಿದ್ದು, ಭಾರತವು ತಾಪಮಾನ ಹೆಚ್ಚಳದ ಪರಿಣಾಮ ಅನುಭವಿಸಲಿದೆ. ಈ ಸಮಸ್ಯೆಗಳನ್ನು ಎದುರಿಸುವುದು ಕಠಿಣ ಸವಾಲಾಗಿದ್ದು, ಅತ್ಯಂತ ವೆಚ್ಚದಾಯಕವಾಗಿದೆ. ಐಐಟಿಯಿಂದ ಹೊರಹೊಮ್ಮುವ ತಂತ್ರಜ್ಞಾನಿಗಳು ಈ ಸವಾಲುಗಳನ್ನು ಎದುರಿಸುವ ಉಪಾಯಗಳನ್ನು ಶೋಧಿಸಬೇಕಾಗಿದೆ ಎಂದು ಹೇಳಿದರು.

ತಾಪಮಾನ ಹೆಚ್ಚಳದಿಂದ ಕಾರ್ಮಿಕರ ಉತ್ಪಾದನಾ ಶಕ್ತಿ ಕಡಿಮೆ ಆಗುವುದು, ವಿದ್ಯುತ್‌ ಶಕ್ತಿ ಬಳಕೆ ಜಾಸ್ತಿ ಆಗುವುದು, ಕೃಷಿ ಇಳುವರಿ ಕಡಿಮೆ ಅಂತಹ ಸಮಸ್ಯೆಗಳು ಎದುರಾಗಲಿವೆ. ಇನ್ನು ಮೂರು ದಶಕಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ತಾಪಮಾನ 3 ಡಿಗ್ರಿಯಷ್ಟು ಏರಲಿದ್ದು, ಇದರಿಂದ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸಲು ಹೊಸ ಉಪಾಯಗಳನ್ನು ಕಂಡು ಹಿಡಿದು ಸಮರ್ಪಕವಾಗಿ ಜಾರಿಗೊಳಿಸಬೇಕಾಗಿದೆ ಎಂದರು.

ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ ಪ್ರೊ. ಶ್ರಿನಿವಾಸ, ಪುನರ್‌ ಮನನ ಮತ್ತು ಪುನಶ್ಚೇತನ ಯಾವುದೇ ವೃತ್ತಿಯಲ್ಲಿ ಯಶಸ್ವಿಯಾಗಲು ಬಹುಮುಖ್ಯ. ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಾ ಸಾಗಿದ್ದು, ಅದರ ಜತೆಯಲ್ಲಿ ಹೆಜ್ಜೆ ಹಾಕಬೇಕಾದರೆ ನಿರಂತರವಾಗಿ ತಮ್ಮ ಜ್ಞಾನವನ್ನು ವರ್ಧಿಸಿಕೊಳ್ಳುತ್ತಾ ಸಾಗುವುದು ಅವಶ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ತಾನು ಮೊದಲು ಅರಿತುಕೊಳ್ಳಬೇಕು. ಇದರ ಅರ್ಥ ತನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ತಿಳಿವಳಿಕೆ ಹೊಂದಿರಬೇಕು. ನಮ್ಮ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡಿದ್ದೇವೆ ಎಂದು ಭಾವಿಸುವುದೇ ತಪ್ಪು. ನಾವು ಏನಾಗಬೇಕೆಂದು ಆಶಿಸುತ್ತೇವೆಯೇ ಹಾಗೆಯೇ ಇರುವವೆಂದು ಭಾವಿಸಿರುತ್ತೇವೆ. ಆದರೆ, ನಿಜವಾಗಿ ನಾವು ಏನಾಗಿದ್ದೇವೆ ಎಂಬುದನ್ನು ಅರಿತಿರುವುದಿಲ್ಲ. ಹೀಗಾಗಿ ನಮ್ಮ ಸಾಮರ್ಥ್ಯ, ದೌರ್ಬಲ್ಯಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೇ ಹೋದಲ್ಲಿ ನಾವು ಮಾಡುವ ಕೆಲಸಗಳಲ್ಲಿ ವಿಫಲತೆ ಅನುಭವಿಸಬೇಕಾಗುತ್ತದೆ ಎಂದರವರು ಹೇಳಿದರು.

ಈ ವರೆಗೆ ಐಐಟಿ ಧಾರವಾಡ ಸಾಧಿಸಿರುವ ಪ್ರಗತಿ ಕುರಿತು ವಿವರಿಸಿದ ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ, ಇಲ್ಲಿಯ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲದೇ ಸಂಶೋಧನೆ ಮತ್ತಿತರರ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಲ್ಲಿಂದ ಹೊರಹೊಮ್ಮುವ ವಿದ್ಯಾರ್ಥಿಗಳು ಉತ್ತಮ ತಂತ್ರಜ್ಞರು, ಉದ್ಯಮಿಗಳಾಗಿ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನುಗ್ಗುವಂತೆ ತರಬೇತಿಗೊಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂದರು.

ಪದಕ ವಿತರಣೆ:

ಘಟಿಕೋತ್ಸವದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಶಶಾಂಕ ಪಿ ಅವರಿಗೆ ರಾಷ್ಟ್ರಪತಿ ಪದಕ, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಆದಿತ್ಯಾ ಕಲ್ಯಾಣಿ ಅವರಿಗೆ ಡೈರೆಕ್ಟರ್‌ ಸ್ವರ್ಣ ಪದಕ, ಇದೇ ವಿಭಾಗದ ಟಿ. ನಿತೀನ್‌ಗೆ ಇನ್‌ಸ್ಟಿಟ್ಯೂಟ್‌ ರಜತ ಪದಕ, ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಎಂ. ಅರವಿಂದ ಕುಮಾರಗೆ ಇನ್‌ಸ್ಟಿಟ್ಯೂಟ್‌ ಬೆಳ್ಳಿ ಪದಕ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ಲೋಕೇಶ ಜೋಗಿ ಅವರಿಗೆ ಇನ್‌ಸ್ಟಿಟ್ಯೂಟ್‌ ಬೆಳ್ಳಿ ಪದಕ ಮತ್ತು ವೈಷ್ಣವಿ ದೇವಿ ಅವರಿಗೆ ಓಂ ಪ್ರಕಾಶ ಗೋಯಲ್‌ ಮತ್ತು ಸೇವತಿ ದೇವಿ ಗೋಯಲ್‌ ಪಾರಿತೋಷಕ ಪ್ರದಾನ ಮಾಡಲಾಯಿತು. ಇದಲ್ಲದೇ, 195 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು.

Share this article