ಧಾರವಾಡ: ರೈತರೊಬ್ಬರಿಗೆ ದೋಷಯುತ ಕೊಯ್ಲುಯಂತ್ರ ಕೊಟ್ಟ ಗುರು ಹಿಂದುಸ್ಥಾನ ಅಗ್ರೊ ಇಂಡಸ್ಟ್ರೀಸ್‌ಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ಆದೇಶಿದೆ.
ನವಲಗುಂದ ರೈತ ದ್ಯಾಮಪ್ಪ ಹಂಚಿನಾಳ ಕೊಯ್ಲುಯಂತ್ರ ಮೂಲಕ ಬೆಳೆ ಕೊಯ್ಯಲು ಗುರು ಹಿಂದುಸ್ಥಾನ ಅಗ್ರೋ ಇಂಡಸ್ಟ್ರೀಸ್ ಬಳಿ ₹3.50 ಲಕ್ಷ ಬ್ಯಾಂಕ್ ಸಾಲ ಮಾಡಿಸಿ ಖರೀದಿಸಿದ್ದರು. ಖರೀದಿಸುವ ಸಮಯದಲ್ಲಿ ಬೆಳೆಯನ್ನು ಕೊಯ್ಲು ಮಾಡುವಾಗ ಅದು ಬೆಳೆ ಮತ್ತು ಹೊಟ್ಟನ್ನು ಬೇರ್ಪಡಿಸುತ್ತದೆ ಎಂದಿದ್ದರು. ಆದರೆ, ವ್ಯವಸಾಯದಲ್ಲಿ ಉಪಯೋಗಿಸಲು ಪ್ರಾರಂಭಿಸಿದ ನಂತರ ಬೆಳೆ ಮತ್ತು ಹೊಟ್ಟು ಎರಡನ್ನು ಒಟ್ಟು ಗೂಡಿಸಿ ವಿಸರ್ಜಿಸುತ್ತಿತ್ತು. ಕೊನೆಗೆ ಯಂತ್ರವನ್ನು ಎದುರುದಾರರ ಡೀಲರಾದ ಗಣಾಚಾರಿ ಅಗ್ರಿಕಲ್ಚರ್ ಇಂಡಸ್ಟ್ರೀಸ್ ಬೆಳಗಾವಿಗೆ ಮರಳಿಸಿದ್ದರು. ಆದರೆ, ಎದುರುದಾರರು ಆ ಮಷೀನನ್ನು ಸರಿಪಡಿಸಿ ಕೊಟ್ಟಿಲ್ಲ. ಇದರಿಂದ ಮನನೊಂದ ರೈತ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ದಾಖಲೆಗಳನ್ನು ಪರಿಶೀಲಿಸಿ ಕಂಪನಿ ಹೇಳಿದಂತೆ ಸರಿಯಾಗಿ ಕೆಲಸ ಮಾಡದೇ ಇರುವುದು ದೂರುದಾರರಿಗೆ ಆರ್ಥಿಕ ನಷ್ಟಕ್ಕೆ ಹೊಣೆ. ಅಲ್ಲದೆ ಬ್ಯಾಂಕನಿಂದ ಸಾಲ ಪಡೆದು ಖರೀದಿಸಿದರೂ ಅದರ ಉಪಯೋಗವಿಲ್ಲದೆ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವುದು ಆಯೋಗಕ್ಕೆ ಕಂಡು ಬಂದಿದೆ ಎಂದು ತೀರ್ಪು ನೀಡಿದ್ದಾರೆ. ಮಷೀನಗೆ ನೀಡಿದ ₹3.50 ಲಕ್ಷ ಶೇ.8 ರಂತೆ ಬಡ್ಡಿ ಹಾಕಿ ಕೊಡುವಂತೆ ಆಯೋಗ ಆದೇಶಿಸಿದೆ. ಅಲ್ಲದೇ ರೈತನಾಗಿ ತನ್ನ ಉಪಜೀವನಕ್ಕಾಗಿ ಯಂತ್ರವನ್ನು ಖರೀದಿಸಿ ಅದು ಸರಿಯಾಗಿ ಕೆಲಸ ಮಾಡದಿರುವುದರಿಂದ ಅವರಿಗೆ ಆದ ಅನಾನುಕೂಲ, ಮಾನಸಿಕ ತೊಂದರೆಗೆ ₹1 ಲಕ್ಷ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ₹10 ಸಾವಿರಗಳನ್ನು ದೂರುದಾರರಿಗೆ ಕೊಡಲು ಗುರು ಹಿಂದುಸ್ಥಾನ ಅಗ್ರೋ ಇಂಡಸ್ಟ್ರಿಸ್‌ಗೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.