ಎಸ್.ಎಂ.ಸೈಯದ್ ಗಜೇಂದ್ರಗಡ
ಗಣೇಶ ಹಬ್ಬ ಬಂದಿತೆಂದರೆ ನಾಡ ತುಂಬೆಲ್ಲ ಸಂಭ್ರಮದ ಹೊನಲು. ಬಣ್ಣದ ವೈವಿಧ್ಯಮಯ ಮೂರ್ತಿ ಕಣ್ತುಂಬಿಸಿಕೊಳ್ಳಲು ಹಿರಿಯರು ಮಕ್ಕಳು ಎಲ್ಲರೂ ಹಾತೊರೆಯುತ್ತಾರೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಬಡಾವಣೆ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಸ್ಥಳೀಯ ಚಿತ್ರಗಾರ ಸೇರಿದಂತೆ ಅನೇಕ ಕಲಾವಿದರು ಈಗಾಗಲೇ ವಿಘ್ನನಿವಾರಕನ ಮೂರ್ತಿಗಳಿಗೆ ಅಂತಿಮ ಸ್ವರ್ಶ ನೀಡಿದ್ದಾರೆ.ಪಟ್ಟಣದಲ್ಲಿ ಚಿತ್ರಗಾರ, ಬಡಿಗೇರ, ಕಂಚಗಾರ, ಗಾಯಕವಾಡ ಸೇರಿ ಕೆಲ ಕುಟುಂಬಗಳು ಹಿಂದಿನಿಂದಲೂ ಮಣ್ಣು ಹದಗೊಳಿಸಿ ಆಕರ್ಷಕ ಗಣಪತಿ ವಿಗ್ರಹ ಮಾಡುವ ಕಲಾವಿದರು. ಬೆಳಕಿಗೆ ಬಾರದೇ ಎಷ್ಟೋ ಕಲಾವಿದರೂ ಯಾವುದೋ ಮೂಲೆಯ ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಕಲೆ ಅಭಿವ್ಯಕ್ತಿಸುತ್ತ ಹಾಗೆಯೇ ಎಲೆಮರೆಯ ಕಾಯಿ ಎಂತಿರುತ್ತಾರೆ, ಗಣಪತಿ ವಿಗ್ರಹಗಳನ್ನು ಸುಂದರವಾಗಿ ತಯಾರು ಮಾಡಿ, ಅದರಿಂದ ಬರುವ ಕಾಸಿನಲ್ಲಿ ವರ್ಷವಿಡೀ ಜೀವನ ನಡೆಸುತ್ತಿರುವ ಅಪ್ರತಿಮ ಕಲಾವಿದರು. ಈ ಭಾಗದಲ್ಲಿ ಕಲೆಯನ್ನೆ ನಂಬಿ ಜೀವನ ಸಾಗಿಸುತ್ತಲಿದ್ದಾರೆ.
ಗಣೇಶ ಚತುರ್ಥಿಗೆ ತಿಂಗಳ ಮುಂಚೆಯೇ ಮಳೆಗಾಲದ ಬಿಡುವಿನಲ್ಲಿ ಜೇಡಿ ಮಣ್ಣನ್ನು ಸಂಗ್ರಹಿಸಿ ಹದಗೊಳಿಸಿ ಗಣಪತಿ ಮೂರ್ತಿ ತಯಾರಿಸುವುದು ಇವರ ಸಂಪ್ರದಾಯ. ಭಕ್ತರೆಲ್ಲರೂ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಬೇಕು. ಮೂರ್ತಿಗಳು ಜನರಿಗೆ ನೆಮ್ಮದಿ ನೀಡಬೇಕು ಎನ್ನುವುದೇ ಈ ಕುಟುಂಬಗಳ ಆಶಯ. ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಪೂಜೆ ಮಾಡುವುದಕ್ಕೆ ಶ್ರೇಷ್ಟವಾಗಿದ್ದು, ಬಹುತೇಕ ಎಲ್ಲರೂ ಇಷ್ಟಪಡುವರು. ಕಲಾವಿದರ ಕೈಚಳಕ ಹಾಗೂ ಚತುರತೆ ಕಾಣುವುದು ಮಣ್ಣಿನ ಮೂರ್ತಿಗಳಲ್ಲಿ ಕಲಾ ಕುಂಚದಿಂದ ಕಲೆ ರಚಿಸಿ ಕಲೆಗೆ ಜೀವ ತುಂಬುತ್ತಾರೆ.ಗೌರಿ ಗಣೇಶ ಹಬ್ಬದಲ್ಲಿ ಪಟ್ಟಣದ ಅನೇಕ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಬಹುತೇಕವಾಗಿ ಉಣಚಗೇರಿ ಗ್ರಾಮದ ಗಾಯಕವಾಡ ಕುಟುಂಬದವರು ಸಿದ್ಧಪಡಿಸಿದ್ದವುಗಳು ಆಗಿರುತ್ತಿದ್ದವು. ಆದರೆ ಇತ್ತಿನ ಕೆಲ ವರ್ಷಗಳಲ್ಲಿ ನೆರೆಯ ಜಿಲ್ಲೆಗಳಿಂದಲೂ ಪಟ್ಟಣಕ್ಕೆ ದೊಡ್ಡ, ಚಿಕ್ಕ ಗಣಪತಿ ಮೂರ್ತಿ ತರುತ್ತಿದ್ದಾರೆ. ಅದರಲ್ಲೂ ಗ್ರಾಮ ಹಾಗೂ ಪಟ್ಟಣದ ಜನತೆ ಭಾಗಶಃ ಬೆಳಗಾವಿ ಹಾಗೂ ಗೋಕಾಕ ನಗರಕ್ಕೆ ಹೋಗಿ ಗಣೇಶ ಮೂರ್ತಿಗಳನ್ನು ವಾಹನಗಳ ಮೂಲಕ ತಂದು ಗಜೇಂದ್ರಗಡದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವದರಿಂದ ಕಲೆಗಾರರಿಗೆ ಹೊಡೆತ ಬೀಳುತ್ತದೆ ಎಂದು ಕೆಲ ಗಣೇಶಮೂರ್ತಿ ತಯಾರಕರರ ಆರೋಪವಾಗಿದೆ.
ಗಣೇಶ ಮೂರ್ತಿ ತಯಾರಿಸುವುದೇ ಮುಖ್ಯವಲ್ಲ. ಅದರ ಜತೆಗೂ ಮಾರುಕಟ್ಟೆ ವ್ಯವಹಾರ ಗೊತ್ತಿರಬೇಕು ಇಲ್ಲವಾದರೆ ಕಲಾವಿದರರು ನಷ್ಟ ಅನುಭವಿಸುವುದು ಸಹಜ. ಇಲ್ಲಿ ವ್ಯಾಪಾರ ಲಾಭಕ್ಕಿಂತ ಭಕ್ತರು ಪ್ರೀತಿಯಿಂದ ನೀಡುವ ಕಾಣಿಕೆಯಲ್ಲಿ ಖುಷಿ ಸಿಗುತ್ತದೆ ಅದೇ ನನ್ನ ಕೆಲಸಕ್ಕೂ ಪ್ರೇರಣೆ ಎನ್ನುತ್ತಾರೆ ಕಲಾವಿದರು.ಪಟ್ಟಣದಲ್ಲಿ ಈ ಹಿಂದೆ ನಾವು ಸಿದ್ಧಪಡಿಸಿದ ಮಣ್ಣಿನ ಗಣಪತಿ ಮೂರ್ತಿಗಳನ್ನು ಜನರು ಹೆಚ್ಚಾಗಿ ಖರೀದಿಸುತ್ತಿದ್ದರು. ಆದರೆ ಈಗ ದೂರದ ನಗರಗಳಿಂದ ತಂದು ಪಟ್ಟಣದಲ್ಲಿ ಕೆಲವರು ಕಡಿಮೆ ದರದಲ್ಲಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವದರಿಂದ ಗುಡಿ ಕೈಗಾರಿಕೆ ನೆಚ್ಚಿಕೊಂಡ ನಮಗೆ ಸಂಕಷ್ಟ ತಂದಿದೆ ಎಂದು ಗಣಪತಿ ಮೂರ್ತಿ ತಯಾರಕ ಗಣೇಶ ಗಾಯಕವಾಡ ತಿಳಿಸಿದ್ದಾರೆ.ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನತೆ ಈ ಹಿಂದೆ ಮಣ್ಣಿನ ಗಣಪತಿ ಮೂರ್ತಿಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದರು. ಆದರೆ ಈಗ ಎಲ್ಲವು ಬದಲಾಗಿದೆ. ಮೂರ್ತಿ ತಯಾರಿಸಲು ಮಣ್ಣಿನ ಕೊರೆತೆ ಒಂದೆಡೆಯಾದರೆ ದುಡ್ಡಿದ್ದವರು ಬೇರೆ ನಗರಗಳಿಂದ ತಂದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ವೃತ್ತಿ, ಕೆಲವರಿಗೆ ಪ್ರವೃತ್ತಿಯಾಗಿದೆ. ಪರಿಣಾಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಎಂದು ಲಾಭ ಕಡಿಮೆಯಿದ್ದರೂ ಗಣಪತಿ ಮೂರ್ತಿ ತಯಾರಿಸುತ್ತಿದ್ದೇವೆ ಎಂದು ಗಣಪತಿ ಮೂರ್ತಿ ತಯಾರಕ ಬಾಬು ಚಿತ್ರಗಾರ ಹೇಳಿದರು.