ಬಾವಿಗೆ ಬಿದ್ದು ಬದುಕಿದ ಮಗು ಪೋಷಕರಿಗೆ ಎಫ್‌ಐಆರ್‌ ಸಂಕಷ್ಟ

KannadaprabhaNewsNetwork | Published : Apr 6, 2024 12:50 AM

ಸಾರಾಂಶ

ಕೊಳವೆ ಬಾವಿಯಲ್ಲಿ ಬಿದ್ದ ಮಗ ಸಾತ್ವಿಕ್‌ ಸುರಕ್ಷಿತವಾಗಿ ಹೊರಬಂದ ಖುಷಿಯಲ್ಲಿದ್ದಾರೆ ಪೋಷಕರು. ಇದರ ಮಧ್ಯೆ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್‌ವೆಲ್ ಕೊರೆದು ಮುಚ್ಚಳ ಹಾಕದೆ ಹಾಗೇ ಬಿಟ್ಟಿರುವ ಬೋರ್‌ವೆಲ್ ಏಜೆನ್ಸಿ ಮೇಲೆ ಎಫ್‌ಐಆರ್ ದಾಖಲು ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿರುವುದು ಅವರ ಸಂಕಷ್ಟಕ್ಕೆ ಕಾರಣವಾಗಿದೆ.

ಶಶಿಕಾಂತ ಮೆಂಡೆಗಾರಕನ್ನಡಪ್ರಭ ವಾರ್ತೆ ವಿಜಯಪುರ

ಕೊಳವೆ ಬಾವಿಯಲ್ಲಿ ಬಿದ್ದ ಮಗ ಸಾತ್ವಿಕ್‌ ಸುರಕ್ಷಿತವಾಗಿ ಹೊರಬಂದ ಖುಷಿಯಲ್ಲಿರುವ ಪೋಷಕರಿಗೆ ಇದೀಗ ಮಗನ ರಕ್ಷಣೆಗಾಗಿ ಅಗೆದ ಭೂಮಿಯನ್ನು ಲಕ್ಷ ಲಕ್ಷ ಖರ್ಚು ಮಾಡಿ ಮುಚ್ಚುವುದು ಹೇಗೆನ್ನುವ ತಲೆನೋವು ಕಾಡಲು ಆರಂಭಿಸಿದೆ. ಇದರ ಮಧ್ಯೆ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್‌ವೆಲ್ ಕೊರೆದು ಮುಚ್ಚಳ ಹಾಕದೆ ಹಾಗೇ ಬಿಟ್ಟಿರುವ ಬೋರ್‌ವೆಲ್ ಏಜೆನ್ಸಿ ಮೇಲೆ ಎಫ್‌ಐಆರ್ ದಾಖಲು ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವನ್ನು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಜಿಲ್ಲಾಡಳಿತ ರಕ್ಷಿಸಿದೆ. ಆ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಜಿಲ್ಲಾಡಳಿತ ಸುಮಾರು 20 ಅಡಿಗೂ ಹೆಚ್ಚು ಜಮೀನು ಅಗೆದಿದೆ. ಇದರಿಂದ ಜಮೀನಲ್ಲಿ ಬೃಹತ್‌ ಕಂದಕ ಸೃಷ್ಟಿಯಾಗಿದ್ದರೆ, ಅಗೆದ ಮಣ್ಣು ಹಾಕಿದ ಸ್ಥಳದಲ್ಲಿ ಗುಡ್ಡೆಯೇ ನಿರ್ಮಾಣವಾಗಿದೆ. ಹೀಗಾಗಿ ಇದನ್ನೆಲ್ಲ ಮರಳಿ ಮುಚ್ಚುವ ಶಕ್ತಿ ಆತನಿಗಿಲ್ಲ. ಇದ್ದ ಎರಡೂವರೆ ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಹೀಗೆ ಹಾಳಾಗಿ ಹೋದರೆ ಮುಂದಿನ ಜೀವನ ಹೇಗೆ? ಅದನ್ನೆಲ್ಲ ಮುಚ್ಚಿಸಲು ಖರ್ಚಾಗುವ ಲಕ್ಷಾಂತರ ರುಪಾಯಿ ಹಣ ಎಲ್ಲಿಂದ ತರಬೇಕು ಎಂಬ ಚಿಂತೆ ಕಾಡತೊಡಗಿದೆ.

ರೈತನಿಂದಲೇ ಖರ್ಚು ವಸೂಲಿ ಮಾಡ್ತಾರಾ?: ಸಾಮಾನ್ಯವಾಗಿ ಕೊಳವೆಬಾವಿಗೆ ಮಗು ಬಿದ್ದ ಪ್ರಕರಣಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಆದರೆ ಲಚ್ಯಾಣದ ಪ್ರಕರಣದಲ್ಲಿ ಖರ್ಚು-ವೆಚ್ಚಗಳನ್ನು ರೈತನಿಂದಲೇ ವಸೂಲಿ ಮಾಡಬೇಕೋ, ಬೇಡವೋ ಎಂಬ ಕುರಿತು ಚರ್ಚೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಲಚ್ಯಾಣದಲ್ಲಿ ಕೊಳವೆಬಾವಿಗೆ ಮಗು ಬಿದ್ದ ಪ್ರಕರಣದಲ್ಲಿ ರೈತನ ತಪ್ಪಿದೆ. ಜಿಲ್ಲಾಡಳಿತ ಸತತ 20 ತಾಸು ಕಾರ್ಯಾಚರಣೆ ನಡೆಸಿ ಸಾಕಷ್ಟು ಹಣ ಖರ್ಚು ಮಾಡಿ ಮಗುವನ್ನು ಬದುಕಿಸಿದೆ. ಈ ಖರ್ಚು-ವೆಚ್ಚವನ್ನು ರೈತನಿಂದಲೇ ವಸೂಲಿ ಮಾಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಅಗೆದಿರುವ ಜಾಗವನ್ನು ನಾವು ಮುಚ್ಚಿಸಲು ಆಗುವುದಿಲ್ಲ. ಅದನ್ನು ರೈತನೇ ಮುಚ್ಚಿಸಿಕೊಳ್ಳಬೇಕು. ಖರ್ಚು-ವೆಚ್ಚಗಳ ಲೆಕ್ಕಾಚಾರ ಆಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

Share this article