ರಾಜಾಜಿನಗರದ ಡಾ.ರಾಜ್‌ ಕುಮಾರ್‌ ರಸ್ತೆಯ ಬೈಕ್‌ ಶೋ ರೂಂನಲ್ಲಿ ಅಗ್ನಿ ದುರಂತ: ಇಬ್ಬರ ಸೆರೆ

KannadaprabhaNewsNetwork |  
Published : Nov 21, 2024, 01:45 AM ISTUpdated : Nov 21, 2024, 04:40 AM IST
Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj

ಸಾರಾಂಶ

ರಾಜಾಜಿನಗರದ ಡಾ.ರಾಜ್‌ ಕುಮಾರ್‌ ರಸ್ತೆಯ ‘ಗ್ರೀನ್ ಸಿಟಿ ಮೋಟರ್ಸ್‌ ಮೈ ಇವಿ ಸ್ಫೋರ್‌’ನಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಶೋ ರೂಂ ಮಾಲಿಕ ಸೇರಿದಂತೆ ಇಬ್ಬರನ್ನು ರಾಜಾಜಿನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

 ಬೆಂಗಳೂರು : ರಾಜಾಜಿನಗರದ ಡಾ.ರಾಜ್‌ ಕುಮಾರ್‌ ರಸ್ತೆಯ ‘ಗ್ರೀನ್ ಸಿಟಿ ಮೋಟರ್ಸ್‌ ಮೈ ಇವಿ ಸ್ಫೋರ್‌’ನಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಶೋ ರೂಂ ಮಾಲಿಕ ಸೇರಿದಂತೆ ಇಬ್ಬರನ್ನು ರಾಜಾಜಿನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಯಶವಂತಪುರದ ಪುನೀತ್‌ಗೌಡ ಅಲಿಯಾಸ್ ಎಚ್‌.ಜಿ.ಪುನೀತ್ ಹಾಗೂ ರಾಜಾಜಿನಗರದ 6ನೇ ಹಂತದ ಜಿ.ಯುವರಾಜ್ ಬಂಧಿತರಾಗಿದ್ದು, ಎಲೆಕ್ಟ್ರಿಕಲ್ ಬೈಕ್‌ಗಳ ಮಾರಾಟ ಮಳಿಗೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಮಳಿಗೆಯ ನೌಕರೆ ಪ್ರಿಯಾ ಸಜೀವ ದಹನವಾಗಿದ್ದರು. ಅವಘಡ ಸಂಭವಿಸಿದ ಬಳಿಕ ಬಂಧನ ಭೀತಿಯಿಂದ ಪರಾರಿಯಾಗಿದ್ದ ಮಳಿಗೆ ಮಾಲಿಕ ಪುನೀತ್ ಹಾಗೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದ ವ್ಯವಸ್ಥಾಪಕ ಯುವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2 ವರ್ಷಗಳಿಂದ ಎಲೆಕ್ಟ್ರಿಕ್‌ ಬೈಕ್‌ಗಳ ಮಾರಾಟ ಮಳಿಗೆಯನ್ನು ಹಾಸನ ಜಿಲ್ಲೆ ದುದ್ದಾ ಹೋಬಳಿಯ ಉಲ್ಲೇನಹಳ್ಳಿ ಗ್ರಾಮದ ಪುನೀತ್‌ ನಡೆಸುತ್ತಿದ್ದರು. ಮಳಿಗೆಯಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದ ಮಾಹಿತಿ ತಿಳಿದು ಸ್ಥಳಕ್ಕೆ ಪುನೀತ್ ಬಂದಿದ್ದರು. ಆದರೆ ಆ ವೇಳೆ ಆತನನ್ನು ಸ್ಥಳೀಯರು ಸುತ್ತುವರೆದು ಪ್ರಶ್ನಿಸಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದ. ಕೊನೆಗೆ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಪುನೀತ್‌ನನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

15 ಹೊಸ ಬೈಕ್‌ಗಳು ಆಹುತಿ:

ಈ ಅವಘಡದಲ್ಲಿ 15 ಹೊಸ ಬೈಕ್‌ಗಳು ಸೇರಿ ಒಟ್ಟು 25 ಬೈಕ್‌ಗಳು ಅಗ್ನಿಗೆ ಆಹುತಿಯಾಗಿವೆ. ಈ ಮಳಿಗೆಗೆ ಸರ್ವಿಸ್‌ ಸಲುವಾಗಿ ತಂದಿಟ್ಟಿದ್ದ ಗ್ರಾಹಕರ ಬೈಕ್‌ಗಳು ಕೂಡ ಸುಟ್ಟು ಕರಕಲಾಗಿವೆ. ಬೈಕ್ ಕಳೆದುಕೊಂಡ ಕೆಲ ಗ್ರಾಹಕರು ಬುಧವಾರ ಕೂಡ ಮಳಿಗೆ ಬಳಿ ಬಂದು ಗೋಳು ತೋಡಿಕೊಂಡರು.

ಬ್ಯಾಟರಿ ಸ್ಫೋಟ-ಪೊಲೀಸರ ಶಂಕೆ

ಎಲೆಕ್ಟ್ರಿಕ್‌ ಬೈಕ್‌ಗಳ ಬ್ಯಾಟರಿಗಳು ಸ್ಫೋಟ ಅಥವಾ ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಳಿಗೆಯಲ್ಲಿ ಹೊಸ ಬೈಕ್‌ಗಳ ಬ್ಯಾಟರಿಗಳನ್ನು ಚಾರ್ಜ್ ಹಾಕಲಾಗಿತ್ತು. ಆಗ ತೀವ್ರವಾಗಿ ಚಾರ್ಜ್ ಆಗಿ ಆ ಬ್ಯಾಟರಿಗಳು ಸ್ಫೋಟಿಸಿರುವ ಸಾಧ್ಯತೆಗಳಿವೆ. ಅದೇ ರೀತಿ ಸ್ವಿಚ್‌ ಬೋರ್ಡ್‌ನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಸಹ ಬೆಂಕಿ ಕಿಡಿ ಹೊತ್ತಿಕೊಂಡು ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ