ಫೆ.2, 3ಕ್ಕೆ ಪ್ರಥಮ ಅಂತರ್‌ ಜಿಲ್ಲಾ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jan 27, 2024 1:15 AM

ಸಾರಾಂಶ

ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾಮಠದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ- ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಒಂದೇ ವೇದಿಕೆಯಲ್ಲಿ ಚಿತ್ರದುರ್ಗ- ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಮನಸುಗಳು । ತರಳಬಾಳು ಶಾಖಾಮಠದಲ್ಲಿ 2 ದಿನದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಚಿತ್ರದುರ್ಗ- ಚಿಕ್ಕಮಗಳೂರು ಪ್ರಥಮ ಅಂತರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ.2 ಮತ್ತು 3ರಂದು ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಶಿವಕುಮಾರ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಫೆ.2ರ ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮೆರವಣಿಗೆಗೆ ಚಾಲನೆ ನೀಡುವರು.

ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಗೋ.ರು. ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ . ಮಹೇಶ್‌ ಜೋಶಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ‘ಬೆಳಕಿನಡೆಗೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿಗಳನ್ನು ಶಾಸಕ ಬಿ.ಜಿ.ಗೋವಿಂದಪ್ಪ ಲೋಕಾರ್ಪಣೆಗೊಳಿಸುವರು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ವೀರೇಂದ್ರ, ರಾಜೇಗೌಡ, ನಯನ ಮೋಟಮ್ಮ, ಟಿ.ರಘುಮೂರ್ತಿ, ಎನ್‌.ವೈ.ಗೋಪಾಲಕೃಷ್ಣ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ್‌ ಇತರರು ಭಾಗವಹಿಸುವರು.ಮಧ್ಯಾಹ್ನ 1 ಗಂಟೆಗೆ ಅಂತರ್ ಜಿಲ್ಲೆಗಳ ಇತಿಹಾಸ: ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಧಾರವಾಡದ ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ್‌ ತೆಲಗಾವಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಬೆಂಗಳೂರು ನ್ಯಾಷನಲ್‌ ಕಾಲೇಜು ಪ್ರಾದ್ಯಾಪಕ ಬಿ.ಪಿ.ವೀರೇಂದ್ರಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡುವರು. ಚಿಕ್ಕಮಗಳೂರಿನ ಕುವೆಂಪು ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಕೆ.ಸಿ.ಶಂಕರ್‌ ಗೋಷ್ಠಿ ಉದ್ಘಾಟಿಸುವರು ತರೀಕೆರೆ ಮನಸುಳಿ ಮೋಹನ್‌, ಡಾ.ಬಿ.ರಾಜಶೇಖರಪ್ಪ, ಸುಧೀರ್‌ ಕುಮಾರ್‌ ವಿಷಯ ಮಂಡನೆ ಮಾಡುವರು.ಮಧ್ಯಾಹ್ನ 2-40ಕ್ಕೆ ಮಠಗಳ ಧಾರ್ಮಿಕ, ಸಾಹಿತ್ಯಿಕ ಸಾಂಸ್ಕೃತಿ ಕೊಡುಗೆ ಕುರಿತ ಗೋಷ್ಠಿ ನಡೆಯಲಿದ್ದು, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಭಗೀರಥ ಪೀಠದ ಪುರುಷೋತ್ತಮಾನಂದಸ್ವಾಮೀಜಿ ಗೋಷ್ಠೀ ಊದ್ಗಾಟಿಸುವರು. ಸಾಹಿತಿ ಚಟ್ನಳ್ಳಿ ಮಹೇಶ್‌ ಪ್ರಾಸ್ತಾವಿಕ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಆಶಯ ನುಡಿ, ಚಿಕ್ಕಮಗಳೂರು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ವಿಷಯ ಮಂಡನೆ ಮಾಡುವರು.ಸಂಜೆ 4-20ಕ್ಕೆ ರಂಗಭೂಮಿ ಕುರಿತು ಗೋಷ್ಠಿ ನಡೆಯಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಮ್‌ ಅಧ್ಯಕ್ಷತೆ ವಹಿಸುವರು. ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಗೋಷ್ಠಿ ಉದ್ಘಾಟಿಸುವರು. ಮೈಸೂರಿನ ರಂಗ ನಿರ್ದೇಶಕ ಬಸವಲಿಂಗಯ್ಯ ಹಾಗೂ ಕಸಾಪದ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್‌ ವಿಷಯ ಮಂಡನೆ ಮಾಡುವರು. ಸಂಜೆ 6 ಗಂಟೆಗೆ ಶಿವಕುಮಾರ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಸಂಜೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆ ವಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಕಾರ್ಯಕ್ರಮ ಉದ್ಘಾಟಿಸುವರು.ಫೆ. 3ರಂದು ಬೆಳಿಗ್ಗೆ 9 ಗಂಟೆಗೆ ಜಾನಪದ ಕಲಾ ಪ್ರಾಕಾರಗಳ ಪ್ರದರ್ಶನವಿದ್ದು, ಜಾನಪದ ಪ್ರಪಂಚ ಪ್ರಶಸ್ತಿ ಪುರಸ್ಕೃತ ಕೊಪ್ಪದ ಜಾಳ್ಮರ ಸುಬ್ಬರಾವ್‌ ಅಧ್ಯಕ್ಷತೆ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಳ್ಳಕೆರೆ ತಿಪ್ಪೇಸ್ವಾಮಿ ಉದ್ಘಾಟಿಸುವರು.ಬೆಳಿಗ್ಗೆ 10 ಗಂಟೆಗೆ ಸಾಂಸ್ಕೃತಿ ರಾಜಕಾರಣ ಕುರಿತ ಗೋಷ್ಠಿ ನಡೆಯಲಿದ್ದು , ಮಾಜಿ ಸಚಿವ ಹೆಚ್‌ ಏಕಾಂತಯ್ಯ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಗೋಷ್ಠಿ ಉದ್ಗಾಟಿಸಲಿದ್ದು , ಮಾಜಿ ಸಚಿವ ಸಿಟಿ ರವಿ ಆಶಯದ ನುಡಿಗಳನ್ನಾಡುವರು, ಮಾಜಿ ಶಾಸಕ ವೈಎಸ್‌ವಿ ದತ್ತ, ಬಿ.ಎಲ್‌.ಶಂಕರ್‌ ವಿಷಯ ಮಂಡನೆ ಮಾಡುವರು.ಮಧ್ಯಾಹ್ನ12-20ಕ್ಕೆ ಮಾನವೀಯ ಸಮಾಜ ನಿರ್ಮಾಣ - ವಚನ ಸಾಹಿತ್ಯ ಕುರಿತ ಗೋಷ್ಠಿ, ಮಧ್ಯಾಹ್ನ 1-50ಕ್ಕೆ ಪುಸ್ತಕ ಸಂಸ್ಕೃತಿ ಕುರಿತ ಗೋಷ್ಠಿ, ಮಧ್ಯಾಹ್ನ 3 ಗಂಟಗೆ ಕವಿ ಗೋಷ್ಠಿ ನಡೆಯಲಿದ್ದು ಸಾಹಿತಿ ಸವಿತಾ ನಾಗಭೂಷಣ್‌ ಅಧ್ಯಕ್ಷತೆ ವಹಿಸಲಿದ್ದು ಸಾಹಿತಿ ಡಾ ಎಚ್‌.ಎಸ್‌.ಸತ್ಯನಾರಾಯಣ ಉದ್ಘಾಟಿಸುವರು. ಸಾಹಿತಿ ಚಂದ್ರಶೇಖರ ತಾಳ್ಯ ಕವಿನುಡಿಗಳನ್ನಾಡುವರು. ಇನ್ನು, ಸಂಜೆ 4-30ರಿಂದ ಸಮ್ಮೇಳನಾಧ್ಯಕ್ಷರ ಜೋತೆ ಸಂವಾದ ನಡೆಯಲಿದೆ. ಸಂಜೆ 6ಕ್ಕೆ ಶಿವಕುಮಾರ ಬಯಲು ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ , ವಿಜಯಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಡಾ ಸಬಿಹಾ ಭೂಮಿಗೌಡ , ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರು ದೇವಾಲಯದ ಧರ್ಮದರ್ಶಿ ಡಾ. ಭೀಮೇಶ್ವರಜೋಶಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌, ಶಾಸಕರುಗಳಾದ ಹೆಚ್‌.ಡಿ.ತಮ್ಮಯ್ಯ, ಬೋಜೇಗೌಡ, ಎಂ.ಚಂದ್ರಪ್ಪ, ಕೆ.ಎಸ್‌.ಆನಂದ್‌, ಕೆ.ಎಸ್‌.ನವೀನ್‌, ವೈ.ಎ. ನಾರಾಯಣಸ್ವಾಮಿ, ಚಿದಾನಂದಗೌಡ, ಮಾಜಿ ಶಾಸಕರುಗಳಾದ ಕೆ.ಬಿ.ಮಲ್ಲಿಕಾರ್ಜುನ, ಡಿ.ಎಸ್‌. ಸುರೇಶ್‌ ಮತ್ತಿತರರು ಭಾಗವಹಿಸುವರು.ಇದೇ ವೇಳೆ ಪತ್ರಕರ್ತರಾದ ಗಿರಿಜಾ ಶಂಕರ್‌, ಜಿ.ಎಸ್‌. ಉಜ್ಜಿನಪ್ಪ, ಶೈಲಜಾ ರತ್ನಾಕರ ಹೆಗ್ಗಡೆ, ಹೆಚ್‌. ಲಿಂಗಪ್ಪ ಇವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಹೆಚ್‌.ಎಸ್‌. ಪುಟ್ಟಸ್ವಾಮಿ, ಹೆಚ್‌.ಜಿ. ಪರಮೇಶ್ವರಯ್ಯ ಸೇರಿದಂತೆ 17 ಜನರಿಗೆ ಕನ್ನಡಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು..

Share this article