ರಟ್ಟೀಹಳ್ಳಿಯಲ್ಲಿ ರಸ್ತೆಯ ಮಧ್ಯೆ ಮೀನು ಮಾರಾಟ, ಸಾರ್ವಜನಿಕರಿಗೆ ತೊಂದರೆ

KannadaprabhaNewsNetwork |  
Published : May 26, 2025, 01:40 AM ISTUpdated : May 26, 2025, 01:41 AM IST
ರಟ್ಟೀಹಳ್ಳಿಯಲ್ಲಿರಸ್ತೆಯ ಮಧ್ಯೆ ಮೀನು ಮಾರಾಟ ಮಾಡುತ್ತಿರುವ ವ್ಯಾಪಾರಿ. | Kannada Prabha

ಸಾರಾಂಶ

ಪಟ್ಟಣದ ಮಾರಿಕಾಂಬಾ ಸರ್ಕಲ್‍ನಲ್ಲಿ ನಿತ್ಯ ತಳ್ಳುಗಾಡಿಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಅದು ರಸ್ತೆಯ ಮಧ್ಯೆದಲ್ಲೇ ವ್ಯಾಪಾರ ಭರಾಟೆ ಜೋರಾಗಿರುತ್ತದೆ.

ಸತೀಶ ಸಿ.ಎಸ್.

ರಟ್ಟೀಹಳ್ಳಿ: ಒಂದೆಡೆ ಪಟ್ಟಣದ ಪ್ರಮುಖ ರಸ್ತೆಗಳ ಬದಿ ಮಾಂಸ ಮಾರಾಟ ಮಳಿಗೆಗಳಿವೆ. ಇನ್ನೊಂದೆಡೆ ತಳ್ಳುಗಾಡಿಗಳಲ್ಲಿ ರಸ್ತೆಯ ಮಧ್ಯೆ ಮೀನು ಮಾರಾಟ ಎಗ್ಗಿಲ್ಲದೇ ನಡೆದಿರುವುದು ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಬೇಕೆಂಬ ಸಾರ್ವಜನಿಕರ ಕೂಗು ಜೋರಾಗಿದೆ.ಪಟ್ಟಣದ ಮಾರಿಕಾಂಬಾ ಸರ್ಕಲ್‍ನಲ್ಲಿ ನಿತ್ಯ ತಳ್ಳುಗಾಡಿಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಅದು ರಸ್ತೆಯ ಮಧ್ಯೆದಲ್ಲೇ ವ್ಯಾಪಾರ ಭರಾಟೆ ಜೋರಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟವರಿಗೆ ಅನೇಕ ಬಾರಿ ಸ್ಥಳಾಂತರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಸ್ವಚ್ಛತೆ ಮರೀಚಿಕೆ: ವ್ಯಾಪಾರಸ್ತರು ಮಾಂಸದ ತ್ಯಾಜ್ಯವನ್ನು ಮಾರಾಟ ಸ್ಥಳದಲ್ಲೇ ಬಿಸಾಡುವುದರಿಂದ ಈ ಭಾಗದಲ್ಲಿ ದುರ್ವಾಸನೆ ಬೀರುತ್ತಿದೆ. ಎಲ್ಲೆಂದರಲ್ಲಿ ಮಾಂಸದ ತುಣುಕುಗಳ ದರ್ಶನವಾಗುತ್ತದೆ. ಇದರಿಂದ ಶ್ವಾನಗಳ ಉಪಟಳ ಜಾಸ್ತಿಯಾಗಿದೆ. ಈ ಮಾರ್ಗದಲ್ಲಿ ಜನರು ಆತಂಕದಲ್ಲಿ ಓಡಾಡುವಂತಾಗಿದೆ. ಅಲ್ಲದೇ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಸೊಳ್ಳೆಗಳ ಉತ್ಪಾದನೆಯ ತಾಣವಾಗಿದೆ. ಡೆಂಘೀ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪ್ರತ್ಯೇಕ ಮಾರಾಟ ಸ್ಥಳ: ನಮಗೆ ಉತ್ತಮ ಮಾರಾಟದ ವೇದಿಕೆ ಕಲ್ಪಿಸಿದರೆ ಅಲ್ಲಿಯೇ ವ್ಯಾಪಾರ ನಡೆಸುತ್ತೇವೆ ಎಂದು ಮಾಂಸ ವ್ಯಾಪಾರಸ್ಥರು ಹೇಳುತ್ತಾರೆ. ಆದರೆ ತಾಲೂಕಾಡಳಿತ, ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದೇ ವಿಪರ್ಯಾಸ. ಮಾಂಸ ಮಾರಾಟಕ್ಕಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಪಟ್ಟಣ ಮಾರಿಕಾಂಬಾ ಸರ್ಕಲ್‍ನಲ್ಲಿ ಮೀನು ಮಾರಾಟ ಮಾಡುತ್ತಿರುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಿವಿಧ ಧಾರ್ಮಿಕ ಮೆರವಣಿಗೆಗೆ ತೀವ್ರ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಮಾಂಸ ಮಾರಾಟವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಣ್ಣಗುಬ್ಬಿ ಗ್ರಾಮಸ್ಥ ಅರುಣ ಗುಬ್ಬಿ ತಿಳಿಸಿದರು.

ಶಾಶ್ವತ ಮಾರುಕಟ್ಟೆ: ಪಟ್ಟಣದ ಮಾರಿಕಾಂಬಾ ಸರ್ಕಲ್‍ನಲ್ಲಿ ಅನೇಕ ವರ್ಷಗಳಿಂದ ತಳ್ಳುಗಾಡಿಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳದ ಲಭ್ಯತೆ ನೋಡಿಕೊಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ