ಅಂಕೋಲಾ: ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಬೃಹತ್ ಬಂದರು ಕಾಮಗಾರಿಗೆ ವಿರೋಧದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಸತ್ಯಾಗ್ರಹ ಭವನದಲ್ಲಿ ಕರೆದಿದ್ದ ಅಹವಾಲು ಆಲಿಕೆಯ ಸಭೆಯಲ್ಲಿ ಮೀನುಗಾರರು ತಕ್ಷಣವೇ ಸರ್ವೇ ಕಾರ್ಯ ನಿಲ್ಲಿಸುವಂತೆ ಬಿಗಿ ಪಟ್ಟು ಹಿಡಿದರು.ಮೀನುಗಾರರ ಮುಖಂಡ ಹಾಗೂ ಜಿಲ್ಲಾ ಮೀನುಗಾರರ ಫೆಡರೇಶನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಅವರು ನೇರವಾದ ಪ್ರಶ್ನೆಗಳ ಮೂಲಕ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸೀಬರ್ಡ್ ನಿರಾಶ್ರಿತರಿಗೆ ಇದೇ ರೀತಿ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಒಕ್ಕಲೆಬ್ಬಿಸಲಾಗಿದೆ. ಆಗಿನ ನಿರಾಶ್ರಿತರು ಈಗಲೂ ಸಂಕಷ್ಟದಲ್ಲಿದ್ದಾರೆ. ಇನ್ನು ಕೇಣಿಯಲ್ಲಿ ವಾಣಿಜ್ಯ ಬಂದರು ಬೇಡವೆಂದು ಜನರು ವಿರೋಧಿಸುತ್ತಿದ್ದಾರೆ. ಪ್ರಾರಂಭದಲ್ಲಿ ಸಭೆ ಕರೆಯದೆ ಈಗ ಯಾಕೆ ಸಭೆ ಕರೆದಿದ್ದಿರಿ ಎಂದು ಪ್ರಶ್ನಿಸಿದರು. ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಸರಿಯಾದ ಮಾಹಿತಿ ಇಲ್ಲವೆಂದಾದ ಮೇಲೆ ನೀವ್ಯಾಕೆ ಸಭೆ ಮಾಡುತ್ತೀರಿ ಎಂದು ನೇರವಾಗಿಯೇ ಪ್ರಶ್ನಿಸಿದರು.ಮೀನುಗಾರರ ಸಭೆಯಲ್ಲಿ ಪೊಲೀಸರನ್ನು ತರುವ ಅಗತ್ಯವೇನಿದೆ? ಮೀನುಗಾರರೇನು ಭಯೋತ್ಪಾದಕರೆ, ಕೂಡಲೇ ಸರ್ವೇ ಕಾರ್ಯ ನಿಲ್ಲಿಸಿ, ನಾವು ಯಾವ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ತಾಕತ್ತಿದ್ದರೆ ಸಮುದ್ರಕ್ಕೆ ಬಂದು ನಮ್ಮನ್ನು ತಡೆಯಿರಿ ನೋಡೋಣ ಎಂದು ಸವಾಲೆಸೆದರು. ಕೇಣಿ ಕಡಲ ತೀರದ ಮೇಲೆ ಯಾರ ಕಣ್ಣು ಬಿದ್ದಿದೆಯೋ, ಅವರಿಗೂ ಈ ವಿಷಯ ತಿಳಿಸಿ ಎಂದರು. ಮೀನುಗಾರರ ಮುಖಂಡ ಶ್ರೀಕಾಂತ ದುರ್ಗೇಕರ ಮಾತನಾಡಿ, ಕೇಣಿಯಲ್ಲಿ ಮೀನುಗಾರರಿಗೆ ಮೀನುಗಾರಿಕೆ ಬಂದರು ಅಭಿವೃದ್ಧಿ ಬೇಕೆ ಹೊರತು ವಾಣಿಜ್ಯ ಬಂದರು ಅಲ್ಲ. ಬಂದರು ಕಾಮಗಾರಿಯ ಸರ್ವೇ ಕುರಿತು ಯಾರಲ್ಲಿ ಮಾಹಿತಿ ಕೇಳಿದರೂ ಮಾಹಿತಿ ಇಲ್ಲ ಎಂದಿದ್ದಾರೆ. ಕಂಪನಿಯವರು ಸರ್ವೇ ಮಾಡುತ್ತಲೇ ಇದ್ದಾರೆ. ನಾವು ಅಂತಿಮ ಗಡುವು ನೀಡಿದ್ದೇವೆ, ಈಗ ಅವಸರದಲ್ಲಿ ಸಭೆ ಕರೆದಿದ್ದೀರಿ. ಸಭೆ ನಡೆಸಿ ಸಮಜಾಯಿಷಿ ನೀಡಲು ನಾವೇನು ಮೂರ್ಖರಲ್ಲ. ನಮ್ಮ ತೀರ್ಮಾನ ಒಂದೇ, ಕಂಪನಿಯವರ ಸರ್ವೇ ಕಾರ್ಯವನ್ನು ಕೂಡಲೇ ನಿಲ್ಲಿಸಿ. ಇಲ್ಲದಿದ್ದರೆ ಮುಂದಾಗುವ ಘಟನೆಗಳಿಗೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದರು. ಗ್ರಾಪಂ ಸದಸ್ಯ ಉದಯ ವಾಮನ ನಾಯಕ ಮಾತನಾಡಿ, ಸೀಬರ್ಡ್ ನೌಕಾನೆಲೆ ಮತ್ತು ವಿಮಾನ ನಿಲ್ದಾಣ ಯೋಜನೆಗಾಗಿ ಈಗಾಗಲೇ ಬಹಳಷ್ಟು ಜಮೀನನ್ನು ಕಳೆದುಕೊಂಡಿದ್ದೇವೆ. ಇನ್ನು ಕೇಣಿಯಲ್ಲಿ ಬಂದರು ಯೋಜನೆಯಲ್ಲಿ ಮತ್ತೆ ಮೀನುಗಾರರನ್ನು ಒಕ್ಕಲೆಬ್ಬಿಸುವ ಬದಲು ನಮಗೆಲ್ಲ ವಿಷ ಕೊಟ್ಟುಬಿಡಿ ಎಂದರು.ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ ಪ್ರಾರಂಭದಲ್ಲಿ ಯೋಜನೆಯ ಉದ್ದೇಶಗಳ ಹಾಗೂ ಯೋಜನೆಯಿಂದ ಲಾಭಗಳೇನು ಎಂಬ ವಿಚಾರವಾಗಿ ಸಮಜಾಯಿಷಿ ನೀಡಲು ಮುಂದಾದರಾದರೂ ಮೀನುಗಾರರು ಕೇಳಲು ತಯಾರಿರಲಿಲ್ಲ. ಮೀನುಗಾರರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಆಯುಕ್ತರು ಕೊನೆಗೂ ಮಣಿದು ಜಿಲ್ಲಾಡಳಿತಕ್ಕೆ ವಿಷಯ ತಿಳಿಸುತ್ತೇನೆ ಎಂದರು. ಬಂದರು ಅಧಿಕಾರಿ ಯೋಜನೆಯ ಕೆಲ ಮಾಹಿತಿಗಳನ್ನು ನೀಡಲು ಮುಂದಾದಾಗ ಅದಕ್ಕೆ ಆಕ್ಷೇಪ ಎತ್ತಿದ ಗಣಪತಿ ಮಾಂಗ್ರೆ ಮೀನುಗಾರರ ಅಭಿವೃದ್ಧಿಗಾಗಿ ಕಾಳಜಿ ತೋರದ ಬಂದರು ಇಲಾಖೆಗೆ ವಾಣಿಜ್ಯ ಬಂದರಿನಲ್ಲೇಕೆ ಆಸಕ್ತಿ ಎಂದು ಪ್ರಶ್ನಿಸಿದರು.ಜೆಎಸ್‌ಡಬ್ಲ್ಯು ಗುತ್ತಿಗೆ ಕಂಪನಿ ಪರವಾಗಿ ಆಗಮಿಸಿದ್ದ ಭರಮಪ್ಪ ಅವರು, ಮೀನುಗಾರರನ್ನು ಸಮಾಧಾನಪಡಿಸಲು ಮುಂದಾಗಿದ್ದರಾದರೂ ಕೊನೆಗೆ ಭಾರಿ ಒತ್ತಡಕ್ಕೆ ಮಣಿದು ತಕ್ಷಣದಿಂದ ಸಮುದ್ರದಲ್ಲಿ ಲಂಗರು ಹಾಕಿದ ಸರ್ವೇ ಬೋಟ್ ಕಾಮಗಾರಿಯನ್ನು ನಿಲ್ಲಿಸಿ ಬೇರೆಡೆ ಸ್ಥಳಾಂತರಿಸಲು ಒಪ್ಪಿಕೊಂಡರು. ಸಭೆಯಲ್ಲಿ ತಹಸೀಲ್ದಾರ್ ಅನಂತ್ ಶಂಕರ್ ಬಿ. ಉಪಸ್ಥಿತರಿದ್ದರು. ಭಾವಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ನಾಯಕ್, ಉಮಾಕಾಂತ ಹರಿಕಂತ್ರ, ಮಂಜುನಾಥ್ ಮುದಗಾ, ಸಂತೋಷ್ ಹಾರವಾಡ, ಸಂಜೀವ್ ಬಲೆಗಾರ, ಚಂದ್ರಕಾಂತ ಹರಿಕಂತ್ರ, ಶಂಕರ್ ಬಲೆಗಾರ, ಅಮರ್ ನಾಯ್ಕ ಪಾಂಡು ಗೌಡ, ಮುದಾಗ, ಹಾರವಾಡ, ಇತರ ಭಾಗದಿಂದ ಸುಮಾರು ಐನೂರಕ್ಕೂ ಹೆಚ್ಚು ಮೀನುಗಾರ ಮಹಿಳೆಯರು ಸೇರಿದಂತೆ ಕೋಮಾರಪಂತ್, ಹಾಲಕ್ಕಿ ಸಮಾಜದವರು ಉಪಸ್ಥಿತರಿದ್ದರು.